ಬೆಂಗಳೂರು, ಜು 26 ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರುವ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ನಾವೆಲ್ಲಾ ಒಟ್ಟಾಗಿದ್ದೇವೆ ಎಂದು ಅತೃಪ್ತ ಶಾಸಕ ಶಿವರಾಮ್ ಹೆಬ್ಬಾರ್ ಸ್ಪಷ್ಟಪಡಿಸಿದ್ದಾರೆ.
ಖಾಸಗಿ ಸುದ್ದಿವಾಹಿನಿಯೊಂದಕ್ಕೆ ಹೇಳಿಕೆ ನೀಡಿರುವ ಅವರು, ತುರ್ತು ಕೆಲಸದ ನಿಮಿತ್ತ ಸ್ವ ಕ್ಷೇತ್ರ ಕಾರವಾರಕ್ಕೆ ಆಗಮಿಸಿದ್ದೇನೆ. ಕದ್ದು ಮುಚ್ಚಿ ಬಂದಿಲ್ಲ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಎಲ್ಲಾ ಶಾಸಕರು ಒಟ್ಟಾಗಿದ್ದೇವೆ. ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ರಾಜೀನಾಮೆ ಕೊಟ್ಟ ದಿನ ತೆಗೆದುಕೊಂಡ ನಿಲುವಿನಲ್ಲೇ ಈಗಲೂ ಇದ್ದೇವೆ. ಯುದ್ಧಕ್ಕೆ ಇಳಿದ ಮೇಲೆ ಹೋರಾಟ ಅನಿವಾರ್ಯ, ನಮ್ಮ ಶಾಸಕ ಸ್ಥಾನದ ಅನರ್ಹತೆಯಾಗಲಿ, ಅಥವಾ ರಾಜೀನಾಮೆ ಅಂಗೀಕಾರವಾಗಲಿ ಯಾವುದಕ್ಕೂ ತಲೆಕೆಡಿಸಿಕೊಂಡಿಲ್ಲ. ಯಾವುದೇ ಪರಿಸ್ಥಿತಿ ಬಂದರೂ ಅದನ್ನು ಎದುರಿಸಲು ಸಿದ್ಧ. ಎಲ್ಲವೂ ಮೂರ್ನಾಲ್ಕು ದಿನಗಳಲ್ಲಿ ಬಗೆಹರಿಯಲಿದೆ ಎಂದು ಖಚಿತವಾಗಿ ಹೇಳಿದರು.
ಈಗಾಗಲೇ ನಾವು ಎರಡು ಬಾರಿ ರಾಜೀನಾಮೆ ನೀಡಿದ್ದೇವೆ, ರಾಜೀನಾಮೆ ಅಂಗೀಕರಿಸುವಂತೆ ಸ್ಪೀಕರ್ ಅವರಿಗೆ ಮನವಿ ಮಾಡಿದ್ದೇವೆ. ಸಭಾಧ್ಯಕ್ಷರು ಸೂಕ್ತ ನಿರ್ಧಾರವನ್ನು ಶೀಘ್ರ ಕೈಗೊಳ್ಳುವ ವಿಶ್ವಾಸವಿದೆ ಎಂದು ಹೆಬ್ಬಾರ್ ಹೇಳಿದರು.
ನಾವು ಅತೃಪ್ತರಲ್ಲ, ನಾವು ಅಸಹಾಯಕರು, ನಮ್ಮ ಸಹಾಯಕ್ಕೆ ಯಾರೂ ಬರಲಿಲ್ಲ. ಆದ್ದರಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ನಿಲುವು ತೆಗೆದುಕೊಂಡಿದ್ದೇವೆ ಎಂದು ಹೇಳಿದ ಅವರು, ರಾಜ್ಯದಲ್ಲಿ ಈ ಹಿಂದೆಯೂ ಹಲವರು ರಾಜೀನಾಮೆ ನೀಡಿರುವ ನಿದರ್ಶನಗಳಿವೆ. ಶಾಸಕರಾಗಿದ್ದ ಉಮೇಶ್ ಜಾಧವ್ ಅವರ ರಾಜೀನಾಮೆ ಅಂಗೀಕಾರವಾಗಿರುವುದು ನಮ್ಮ ಕಣ್ಣಮುಂದಿದೆ. ಸಭಾಧ್ಯಕ್ಷರು ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ನುಡಿದರು.
ರಾಜೀನಾಮೆ ಅಂಗೀಕಾರದ ಬಳಿಕ ನಮ್ಮ ಮುಂದಿನ ರಾಜಕೀಯದ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ. ರಾಜೀನಾಮೆ ಅಂಗೀಕಾರವಾಗುವವರೆಗೂ ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ. ಅಲ್ಲಿಯವರೆಗೂ ಕಾದು ನೋಡುತ್ತೇವೆ ಎಂದು ಹೆಬ್ಬಾರ್ ತಿಳಿಸಿದರು.
ಸಿದ್ದರಾಮಯ್ಯ ಅವರು ನಮ್ಮ ಬಗ್ಗೆ ಸದನದ ಒಳಗೆ ಮತ್ತು ಹೊರಗೆ ಆಡಿರುವ ಮಾತುಗಳನ್ನು ಕೇಳಿಸಿಕೊಂಡಿದ್ದೇವೆ. ಅವರು ಬಹಳ ದೊಡ್ಡವರು. ಅವರು ನಮ್ಮ ನಾಯಕರಾಗಿದ್ದರು. ಆದರೆ ಈಗ ಅವರೇ ನಮ್ಮ ನಾಯಕ ಅಲ್ಲ ಎಂದಿದ್ದಾರೆ ಎಂದು ಶಿವರಾಮ್ ಹೆಬ್ಬಾರ್ ಹೇಳಿದರು.