ಅನ್ನವನ್ನು ಉತ್ಪಾದಿಸುವ ಕೃಷಿ ವೃತ್ತಿಯಲ್ಲಿ ಸಾರ್ಥಕತೆ ಇದೆ : ಚನ್ನಬಸಪ್ಪ
ಹೂವಿನಹಡಗಲಿ 08: ಕೃಷಿಯಲ್ಲಿ ಖುಷಿಯಿದೆ. ಮಾನವನ ಮೂಲ ಕಸುಬು ಕೃಷಿ. ಅನ್ನ ದೇವರ ಮುಂದೆ ಇನ್ನು ದೇವರು ಉಂಟೆ, ಅನ್ನವಿರುವ ತನಕ ಪ್ರಾಣವು, ಜಗದೊಳಗನ್ನವೇ ದೈವ ಎನ್ನುವ ಸರ್ವಜ್ಞನ ವಚನದಂತೆ ಜೀವಿಗಳ ಬದುಕಿಗೆ ಆಧಾರವಾದ, ಅನ್ನವನ್ನು ಉತ್ಪಾದಿಸುವ ಕೃಷಿ ವೃತ್ತಿಯಲ್ಲಿ ಸಾರ್ಥಕತೆ ಇದೆ ಎಂದು ಪ್ರಗತಿಪರ ಕೃಷಿಕ,ಚಿಂತಕ ಕೋಡಬಾಳ ಚನ್ನಬಸಪ್ಪ ಅಭಿಪ್ರಾಯ ಪಟ್ಟರು.
ತಾಲ್ಲೂಕಿನ ಹೊಳಲು ಗ್ರಾಮದ ಡಿವೈನ್ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ, ಹಿರೇಹಡಗಲಿ ಹೋಬಳಿ ಘಟಕ ಆಯೋಜಿಸಿದ್ದ ಬೂದನೂರು ಚಂದ್ರೇಗೌಡ ಸ್ಮಾರಕದತ್ತಿ, ಪೂಜಾರ ಬಸವರಾಜಪ್ಪ ದೇವೇಂದ್ರ್ಪ ದತ್ತಿ,ಗಡ್ಡಿ ಸಾವಿತ್ರಮ್ಮ ಗಡ್ಡಿ ಬಸಪ್ಪ ಸ್ಮರಣಾರ್ಥ ದತ್ತಿ, ಭ್ರಮರಿಬಾಯಿ ಪಾರಸ್ ಮಲ್ ಮೆಹತಾ ಸ್ಮಾರಕ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕೃಷಿ ವಿಜ್ಞಾನಿ, ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು ವಿಷಯ ಕುರಿತು ಮಾತನಾಡಿದರು. ಭಾರತವು ಹೆಚ್ಚು ಕೃಷಿ ಭೂಮಿ ಹೊಂದಿದ ವಿಶ್ವದ ಎರಡನೇ ದೇಶವಾಗಿದೆ. ದೇಶದ ಶೇ. 50ಕ್ಕಿಂತ ಹೆಚ್ಚು ಜನ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಕೃಷಿಯು ದೇಶದ ಜಿಡಿಪಿಗೆ ಶೇ.17 ರಿಂದ 18 ಕೊಡುಗೆ ನೀಡುತ್ತಿದೆ. ಮೆಕ್ಕೆಜೋಳ ದಿಂದ ಇಥೇನಾಲ್ ತಯಾರಿಕೆಗೆ ಮುಂದಾಗಿರುವುದು ಬೆಳೆಗಾರರಿಗೆ ಆಸರೆಯಾಗಿದೆ.
ಕೃಷಿ ತಜ್ಞರು,ವಿಜ್ಞಾನಿಗಳು ತಮ್ಮ ಸಂಶೋಧನೆಯಿಂದ ರೈತರ ಬದುಕು ಹಸನಾಗಲು ಶ್ರಮಿಸುತ್ತಿದ್ದಾರೆ ಎಂದರು. ಪ್ರಾರಂಭದಲ್ಲಿ ದತ್ತಿದಾನಿ, ನಿವೃತ್ತ ಕೃಷಿ ಅಧಿಕಾರಿಗಳಾದ ಟಿ.ಕೆ. ಬ್ಯಾಡಗಿಯವರು ಕಾರ್ಯಕ್ರಮ ಉದ್ಘಾಟಿಸಿ ಹವಾಮಾನ ವೈಪರಿತ್ಯ ದಿಂದ ಕೃಷಿ ಕ್ಷೇತ್ರ ಅನೇಕ ಸವಾಲುಗಳನ್ನು ಎದುರಿಸುತ್ತಿದೆ ಎಂದರು. ಕಸಾಪ ತಾಲೂಕು ಘಟಕದ ಅಧ್ಯಕ್ಷ ಟಿ.ವೀರೇಂದ್ರ ಪಾಟೀಲ್ ದತ್ತಿ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲೆಯ ಆಡಳಿತಾಧಿಕಾರಿಗಳಾದ ಎಸ್ .ಪ್ರವೀಣ್ ಮಾತೃಭಾಷೆಯ ಮಹತ್ವದ ಕುರಿತು ತಿಳಿಸಿ ಮುಂದಿನ ದಿನಗಳಲ್ಲಿ ವಿಜೃಂಭಣೆಯಿಂದ ಕನ್ನಡ ಕಾರ್ಯಕ್ರಮ ಸಂಘಟಿಸುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಕವನ ವಾಚನ ಸ್ಪರ್ಧೆಯಲ್ಲಿ ವಿಜೇತರಾದ ದಿವ್ಯಾ ಪುರಾಣಿಕ ಮಠ,ಮಮತಾ ನಗಾವತ್,ಜಿ.ಬಿಂದು ಇವರಿಗೆ ಪುಸ್ತಕ ಬಹುಮಾನ ನೀಡಲಾಯಿತು. ಉಪನ್ಯಾಸ ನೀಡಿದ ಚನ್ನಬಸಪ್ಪ ಕೋಡಬಾಳ ಇವರನ್ನು ಕಸಾಪ ವತಿಯಿಂದ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರೇಹಡಗಲಿ ಹೋಬಳಿ ಘಟಕದ ಅಧ್ಯಕ್ಷ ಜಿ.ಎಸ್. ಸತೀಶ ವಹಿಸಿದ್ದರು. ಪ್ರಾರಂಭದಲ್ಲಿ ಶಾಲೆಯ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಮುಖ್ಯ ಗುರುಗಳಾದ ಬಸಯ್ಯ ಹಿರೇಮಠ ಸ್ವಾಗತಿಸಿದರು. ಶಿಕ್ಷಕಿ ಪಿ.ಸಲೀಮಾ ವಂದಿಸಿದರು. ವಿದ್ಯಾರ್ಥಿ ಎಲ್.ಯಶವಂತ್ ಕಾರ್ಯಕ್ರಮ ನಿರ್ವಹಿಸಿದರು.