ಗ್ರಾಮ ಆಡಳಿತ ಅಧಿಕಾರಿಗಳ ಸಂಘದಿಂದ ಎರಡನೇ ದಿನ ಮುಂದುವರೆದ ಮುಷ್ಕರ

The strike continued for the second day by the Village Administrative Officers Association

ಗ್ರಾಮ ಆಡಳಿತ ಅಧಿಕಾರಿಗಳ ಸಂಘದಿಂದ ಎರಡನೇ ದಿನ ಮುಂದುವರೆದ ಮುಷ್ಕರ 

ಕಂಪ್ಲಿ 11: ಕನಿಷ್ಟ ಮೂಲಸೌಕರ್ಯಗಳನ್ನು ಕಲ್ಪಿಸುವುದು, ಅಂತರಜಿಲ್ಲಾ ವರ್ಗಾವಣೆ ಮತ್ತು ಪದೋನ್ನತಿಯನ್ನು ಮರುಸ್ಥಾಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ತಾಲೂಕು ಸದಸ್ಯರು ಸೋಮವಾರದಿಂದ ಆರಂಭಿಸಿದ 2ನೇ ಹಂತದ ಅನಿರ್ದಿಷ್ಟಾವಧಿ ಮುಷ್ಕರ ಮಂಗಳವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ. ತಾಲೂಕು ಅಧ್ಯಕ್ಷ ಹೆಚ್‌.ವಿ.ಮಂಜುನಾಥ ಮಾತನಾಡಿ, ಸರ್ಕಾರದ ಆದೇಶದಂತೆ ಸ್ಥಳೀಯವಾಗಿ ಕೆಲಸಗಳನ್ನು ಮಾಡುತ್ತಾ ಬರಲಾಗಿದೆ. ಆದರೆ, ಸರ್ಕಾರವು ಗ್ರಾಮ ಆಡಳಿತ ಅಧಿಕಾರಿಗಳ ಬೇಡಿಕೆಗಳನ್ನು ಈಡೇರಿಸಲು ಮೀನಾಮೇಷ ಎಣಿಸುತ್ತಿದೆ. ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ನಿರ್ಣಯದಂತೆ ಗ್ರಾಮ ಆಡಳಿತ ಅಧಿಕಾರಿಗಳು ತಮ್ಮ ಕೆಲಸದಸ್ಥಳದಲ್ಲಿ ಮೂಲಭೂತಸೌಲಭ್ಯಗಳನ್ನು ಒದಗಿಸುವಂತೆ ಮತ್ತು ಸೇವಾ ವಿಷಯಗಳ ಗೊಂದಲಗಳನ್ನು ಪರಿಹರಿಸುವಂತೆ ಸರ್ಕಾರವನ್ನು ಆಗ್ರಹಿಸಿ, ಕಳೆದ ವರ್ಷ ಸೆ.26 ರಿಂದ ಅ.3 ರವರೆಗೆ ರಾಜ್ಯಾದ್ಯಂತ ಮುಷ್ಕರ ನಡೆಸಿದ್ದರು. ಅ.1ರಂದು ಸರ್ಕಾರದ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರು ಸಭೆ ಕರೆದು ಗ್ರಾಮ ಆಡಳಿತ ಅಧಿಕಾರಿಗಳ ಎಲ್ಲಾ ಬೇಡಿಕೆಗಳನ್ನು ಈಡೇರಿಸುವಂತೆ ಭರವಸೆ ನೀಡಿದ್ದರು. ಅದರಂತೆ ಅದೇ ದಿನದಿಂದಲೇ ರಾಜ್ಯವ್ಯಾಪಿ ಮುಷ್ಕರ ಹಿಂಪಡೆಯಲಾಗಿತ್ತು. ಇದುವರೆಗೆ ಸರ್ಕಾರವು ಈ ವೃಂದದ ನೌಕರರ ಬೇಡಿಕೆಗಳ ವಿಚಾರವಾಗಿ ಯಾವುದೇ ತೃಪ್ತಿಕರ ಕೈಗೊಂಡಿರುವುದಿಲ್ಲ ಮತ್ತು ಬೇಡಿಕೆಗಳನ್ನು ಈಡೇರಿಸಿರುವುದಿಲ್ಲ. ಬದಲಾಗಿ ಮುಷ್ಕರದ ಮೊದಲಿಗಿಂತಲೂ ಈಗ ಹೆಚ್ಚಿನ ಕಾರ್ಯದ ಒತ್ತಡ ಉಂಟಾಗಿರುತ್ತದೆ. ಅಧಿಕಾರಿಗಳು ತಮ್ಮ ಕಾರ್ಯ ಸ್ಥಗಿತಗೊಳಿಸಿ, ತಮ್ಮ ತಾಲೂಕು ಕೇಂದ್ರಗಳಲ್ಲಿ 2ನೇ ಹಂತದ ಅನಿರ್ಧಿಷ್ಟಾವಧಿ ಮುಷ್ಕರವನ್ನು ಆರಂಭಿಸಲಾಗಿದೆ. ಕೂಡಲೇ ಸರ್ಕಾರ ಗಮನ ಹರಿಸಿ, ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು. ಈ ಮುಷ್ಕರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ಹಾಗೂ ರೈತರು ಭಾಗವಹಿಸಿ, ಬೆಂಬಲ ನೀಡಿದರು. ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ವಿರೇಶ, ನಗರ ಘಟಕ ಅಧ್ಯಕ್ಷ ತಿಮ್ಮಪ್ಪ, ರಾಜ್ಯ ಪರಿಷತ್ ಸದಸ್ಯ ಕೆ.ಎಂ.ಶಿವರುದ್ರಯ್ಯ, ತಾಲೂಕು ಉಪಾಧ್ಯಕ್ಷ ಕೆ.ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ನಾರನಗೌಡ್ರು ಕಾಂತರಾಜ, ಖಜಾಂಚಿ ಕೆ.ಮಂಜುನಾಥ, ಮಹಿಳಾ ಉಪಾಧ್ಯಕ್ಷೆ ವನಿತಾಕುಮಾರಿ, ಹಾಗೂ ಗ್ರಾಮ ಲೆಕ್ಕಾಧಿಕಾರಿಗಳಾದ ಲಕ್ಷ್ಮಣನಾಯ್ಕ, ಜಿಲಾನ್, ವಿ.ವೆಂಕಟೇಶ, ಮನೋಜಕುಮಾರ, ಚನ್ನಕೇಶವ, ಮಹ್ಮದ್ ರಫಿಕ್, ರಮೇಶ, ಗೀರೀಶಬಾಬು, ಅಬ್ದುಲ್ ಖಾದರ್, ಜ್ಯೋತೆಪ್ಪ, ಆಶಾ, ರೂಪಿಣಿ, ರೈತರಾದ ಕೊಟ್ಟೂರು ರಮೇಶ, ಗಂಗಣ್ಣ, ಮುರಾರಿ, ಸುದರ್ಶನ ಇದ್ದರು.