ಮತದಾನ ಮಾಡುವಲ್ಲಿ ಯುವ ಜನರ ಪಾತ್ರ ಮಹತ್ವದ್ದು : ಶಿವರಾಜ ಶಿವಪುರ
ಕಂಪ್ಲಿ 25: ಮತದಾನ ಮಾಡುವ ಮೂಲಕ ಉತ್ತಮ ಪ್ರಜಾಪ್ರಭುತ್ವ ವ್ಯವಸ್ಥೆ ರೂಪಿಸಬಹುದು ಎಂಬುದನ್ನು ಪ್ರತಿಯೊಬ್ಬರು ಅರ್ಥೈಸಿಕೊಳ್ಳಬೇಕು ಎಂದು ತಹಶೀಲ್ದಾರ್ ಶಿವರಾಜ ಶಿವಪುರ ಹೇಳಿದರು. ಪಟ್ಟಣದ ಷಾಮಿಯಾಚಂದ್ ಸರ್ಕಾರಿ ಪದವಿ ಪೂರ್ವ ಕಾಲೇಜಿ(ಪ್ರೌಢಶಾಲಾ ವಿಭಾಗ)ನಲ್ಲಿ ಕಂದಾಯ, ತಾಲೂಕು ಸ್ವೀಫ್ ಸಮಿತಿ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮತದಾರರ ದಿನ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಅಮೂಲ್ಯ ಮತದ ಹಕ್ಕನ್ನು ಸದ್ಭಳಕೆ ಮಾಡಿಕೊಳ್ಳಬೇಕು.
ಸಮಾಜದಲ್ಲಿನ ಎಲ್ಲದನ್ನು ಒಂದೇ ದೃಷ್ಠಿಯಿಂದ ಕಾಣುವ ಉತ್ತಮ ಜನಪ್ರತಿನಿಧಿಯನ್ನು ಆಯ್ಕೆ ಮಾಡುವ ಜವಾಬ್ದಾರಿ ಪ್ರತಿಯೊಬ್ಬ ಮತದಾರರ ಮೇಲಿದೆ. ಚುನಾವಣೆಗಳು ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಅಡಿಗಲ್ಲು ಆಗಿದೆ. ಪಾರದರ್ಶಕತೆ ಮತ್ತು ನಿರ್ಭೀತ ಚುನಾವಣೆಯಲ್ಲಿ ಯುವ ಜನರ ಪಾತ್ರ ಅಪಾರವಾದದ್ದು, ಚುನಾವಣೆ ಹಾಗೂ ಮತದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಬೇಕಿದೆ ಎಂದರು.
ತಾಲೂಕು ಪಂಚಾಯಿತಿ ಇಒ ಆರ್.ಕೆ.ಶ್ರೀಕುಮಾರ್ ಮಾತನಾಡಿ, ಯುವ ಸಮೂಹ ಮತದಾನ ಪ್ರಕ್ರಿಯೆಯಲ್ಲಿ ತೊಡಗಿ, ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳಿಸುವ ಮತ್ತು ದೇಶದ ಬಗ್ಗೆ ಅಭಿಮಾನ, ರಾಷ್ಟ್ರ ಪ್ರೇಮ, ರಾಷ್ಟ್ರೀಯ ಐಕ್ಯತೆ ಮೂಡಿಸಿ, ಅವರನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಮಾಡುವುದೇ ಮತದಾರರ ದಿನಾಚರಣೆಯ ಉದ್ದೇಶವಾಗಿದೆ ಎಂದರು. ನಂತರ ಚಿತ್ರಕಲೆ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಪ್ರೌಢಶಾಲಾಯ 12, ಪಿಯುಸಿ 7, ಡಿಗ್ರಿ 12 ಸೇರಿ ಒಟ್ಟು 31 ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಈ ಸಂದರ್ಭದಲ್ಲಿ ತಾಪಂ ಎಡಿ ಕೆ.ಎಸ್‌ಮಲ್ಲನಗೌಡ, ಉಪ ಪ್ರಾಚಾರ್ಯೆ ಸುಜಾತ, ಮುಖ್ಯಾಧಿಕಾರಿ ಕೆ.ದುರುಗಣ್ಣ, ಪ್ರೌಢಶಾಲಾ ಸಂಘದ ಅಧ್ಯಕ್ಷ ಟಿ.ಎಂ.ಬಸವರಾಜ, ಪ್ರಾಂಶುಪಾಲ ಬಾಲಾಜಿ, ಸಹ ಶಿಕ್ಷಕ ಸುನೀಲ್, ಎಫ್‌ಡಿಸಿ ಬಟಾರಿ ರವಿ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಜ.002: ರಾಷ್ಟ್ರೀಯ ಮತದಾನ ದಿನ ಕಾರ್ಯಕ್ರಮದಲ್ಲಿ ಚಿತ್ರಕಲೆ, ಪ್ರಬಂಧ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು.