ಸದೃಢ ಸುಂದರ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಅತ್ಯಂತ ಮಹತ್ವದ್ದು- ಭಾರತಿ
ಹುಬ್ಬಳ್ಳಿ 22:ಪ್ರಸ್ತುತವಾಗಿ ನಾವೆಲ್ಲ ಎದುರಿಸುತ್ತಿರುವ ಬಹುತೇಕ ಎಲ್ಲ ಸಮಸ್ಯೆ-ಸವಾಲುಗಳ ಪರಿಹಾರ ಮಹಿಳೆಯರಿಂದಲೇ ಸಾಧ್ಯ ಮತ್ತು ಸದೃಢ ಸುಂದರ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಅತ್ಯಂತ ಮಹತ್ವದ್ದು ಎಂದು ಸಮಾಜ ಸೇವಕರಾದ ಭಾರತಿ ನಂದಕುಮಾರ ಹೇಳಿದರು.
ಅವರು ಶ್ರೀಕೃಷ್ಣ ಕಲ್ಯಾಣ ಮಂಟಪದಲ್ಲಿ ನೇತ್ರಾವತಿ ಮಹಿಳಾ ಮಂಡಳದ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ ನೇತ್ರಾವತಿ ಮಹಿಳಾ ಮಂಡಳ ಆಯೋಜಿಸುವ ಕಾರ್ಯಕ್ರಮಗಳು ಬಹಳ ವಿಭಿನ್ನ ಶೈಲಿಯ ಜೊತೆಗೆ ನಮ್ಮ ಸಂಸ್ಕೃತಿ ಪರಂಪರೆ ಆಚರಣೆಯನ್ನು ಬಿಂಬಿಸುವ ಪ್ರಯತ್ನ ಅದರಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ನೇತ್ರಾವತಿ ಮಹಿಳಾ ಮಂಡಳ ಹಮ್ಮಿಕೊಳ್ಳುವ ಕಾರ್ಯಗಳು ಎಲ್ಲರಿಗೂ ಮಾದರಿ ಹಾಗೂ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ನೇತ್ರಾವತಿ ಮಹಿಳಾ ಮಂಡಳದ ಅಧ್ಯಕ್ಷರಾದ ಗೀತಾ ಸೋಮೇಶ್ವರ ಮಾತನಾಡುತ್ತಾ ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಸಮಾಜದವರು ನಮ್ಮ ಕಾರ್ಯಗಳಿಗೆ ಬೇಷರತ್ತಾಗಿ ಬೆಂಬಲ ನೀಡಿ ಪ್ರೋತ್ಸಾಹಿಸುತ್ತಿರುವುದೇ ಈ ಮಂಡಳದ ಉನ್ನತಿಗೆ ಕಾರಣ ಎಂದು ಕೃತಜ್ಞತೆ ಸಲ್ಲಿಸಿದರು.ಸಮಾರಂಭದಲ್ಲಿ ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಸಮಾಜದ ಅಧ್ಯಕ್ಷರಾದ ಅನಂತಪದ್ಮನಾಭ ಐತಾಳ ಅತಿಥಿಗಳಾಗಿ ಮಾತನಾಡುತ್ತಾ ಭಾರತಿ ನಂದಕುಮಾರ ಅವರು ಸೇವಾ ಭಾರತಿ, ಅದಮ್ಯ ಚೇತನ, ಮಾತೃ ಛಾಯಾ ಬಾಲ ಕಲ್ಯಾಣ ಕೇಂದ್ರದ ಮೂಲಕ ಸಮಾಜ ಸೇವೆ ಮಾಡುವ ಅವರು ಮಹಿಳೆಗೆ ಅವಕಾಶ ಸಿಕ್ಕರೆ ಎಷ್ಟೂಂದು ಸೇವೆ ಮಾಡಬಹುದು ಎನ್ನುವುದಕ್ಕೆ ಇವರೇ ಮಾದರಿ ಎಂದು ಅವರ ಕಾರ್ಯವನ್ನು ಶ್ಲಾಘಿಸಿದರು.
ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಸಮಾಜದ ಕಾರ್ಯದರ್ಶಿಗಳಾದ ವಾದಿರಾಜ ಭಟ್ ಮಾತನಾಡುತ್ತಾ ಸಮಯದ ಮಹತ್ವ ತಿಳಿಸಿದರು.ನೇತ್ರಾವತಿ ಮಹಿಳಾ ಮಂಡಳದ ಕಾರ್ಯದರ್ಶಿ ಶಶಿಮಂಗಳ ಐತಾಳ, ಉಪಾಧ್ಯಕ್ಷೆ ಉಷಾ ಇಂದ್ರಾಳಿ, ಕೋಶಾಧ್ಯಕ್ಷೆ ರಂಜನಿ ಕೋಟೇಶ್ವರ, ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಸಮಾಜದ ಉಪಾಧ್ಯಕ್ಷ ಅನಂತರಾಜ್ ಭಟ್, ಭಾರ್ಗವ ಸೇವಾದಳದ ಎಲ್ಲ ಸದಸ್ಯರು, ಆಮಂತ್ರಿತರು ಉಪಸ್ಥಿತರಿದ್ದರು.
ಮಹಿಳಾ ಮಂಡಳ ಸದಸ್ಯರಿಂದ ಕಳ್ಳರು ಮಹಾಕಳ್ಳರು ಎಂಬ ಉತ್ತಮ ಸಂದೇಶ ಸಾರುವ ನಾಟಕ ಎಲ್ಲರ ಗಮನ ಸೆಳೆಯಿತು. 1960 ರಿಂದ ಇಲ್ಲಿಯವರೆಗಿನ ಹಿಂದಿ ಚಿತ್ರ ನಟಿಯರ ಜನಪ್ರಿಯ ಗೀತೆಗಳಿಗೆ ನೇತ್ರಾವತಿ ಮಹಿಳಾ ಮಂಡಳ ಸದಸ್ಯರು ಹೆಜ್ಜೆ ಹಾಕಿದರು. ಉಧೋ ಉಧೋ ತಾಯಿ ಎಲ್ಲಮ್ಮ ಗೀತೆಗೆ ಮಾಡಿದ ನೃತ್ಯ ಕಣ್ಮನ ಸೆಳೆಯಿತು. ವಿದುಷಿ ಸೀಮಾ ಉಪಾಧ್ಯಾಯ ನಿರೂಪಿಸಿ ವಂದಿಸಿದರು.