ನಗರಸಭೆ ಬಜೆಟ್ ಪೂರ್ವ ಭಾವಿ ಸಭೆಯಲ್ಲಿ ಗಣ್ಯರ ಸಲಹೆ
ಕಾರವಾರ 25: ನಗರದ ಮುಖ್ಯ ಬೀದಿಗಳಲ್ಲಿ ಬೆಳಕಿನ ವ್ಯವಸ್ಥೆ ಹಾಗೂ ಸವಿತಾ ಹೋಟೆಲ್ ಎದುರುಗಿನ ಕೆಡವಿದ ಕಟ್ಟಡ ಅವಶೇಷ ತೆಗಿಸಿ, ಪ್ರವಾಸಿಗರಿಗೆ ಕಾರವಾರ ಚೆಂದದ ಸಿಟಿ ಎಂಬ ಕಲ್ಪನೆ ಬರುವಂತೆ ಮಾಡಿ ಎಂಬ ಸಲಹೆ ಇಲ್ಲಿನ ನಗರಸಭೆ ಸಭಾಂಗಣದಲ್ಲಿ ಮಂಗಳವಾರ ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ವ್ಯಕ್ತವಾಯಿತು. ಪಾದಚಾರಿ ಮಾರ್ಗಗಳ ಸುಧಾರಣೆ, ಗ್ರೀನ್ ಕಾರವಾರ ಮಾಡಲು ಇನ್ನು ಹೆಚ್ಚು ಹಸೀರೀಕರಣ, ನಗರದೊಳಗಿನ ಉದ್ಯಾನವನಗಳ ನಿರ್ವಹಣೆಗೆ ಆದ್ಯತೆ ನೀಡಬೇಕು. ಜೊತೆಗೆ ಅಗತ್ಯವಿರುವ ಸ್ಥಳಗಳಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ಸ್ಥಾಪಿಸಬೇಕು, ಉತ್ತಮವಾಗಿ ನೀರಿನ ವ್ಯವಸ್ಥೆ ಮಾಡಿ ,ನಿರ್ವಹಿಸಬೇಕುನಗರಸಭೆ ಅಧ್ಯಕ್ಷ ರವಿರಾಜ್ ಅಂಕೋಲೇಕರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಾರ್ವಜನಿಕರ ಪರವಾಗಿ ಕೇವಲ ನಾಲ್ವರು ಮಾತ್ರ ಪಾಲ್ಗೊಂಡಿದ್ದರು. ನಗರಸಭೆಯ ಓರ್ವ ಸದಸ್ಯರೂ ಭಾಗಿಯಾಗದಿರುವುದಕ್ಕೆ ಅಸಮಾಧಾನವೂ ವ್ಯಕ್ತವಾಯಿತು.ವಕೀಲ ಅನಿರುದ್ಧ ಹಳದಿಪುರಕರ ಮಾತನಾಡಿ, ನಗರದಲ್ಲಿ ಪಾದಚಾರಿ ಮಾರ್ಗಗಳು ಹಾಳಾಗಿವೆ. ಸಸಿಗಳನ್ನು ನೆಟ್ಟು, ಪೋಷಿಸಲು ಈ ಹಿಂದೆ ನಗರಸಭೆಯಿಂದ ತಲಾ ರೂ.1 ಸಾವಿರ ಮೊತ್ತ ದಾನಿಗಳಿಂದ ಸಂಗ್ರಹಿಸಲಾಗಿತ್ತು. ಸಸಿಗಳು ಒಣಗಿದ್ದು, ನಿರ್ವಹಣೆಯ ಕೊರತೆ ಕಾಣುತ್ತಿದೆ. ಗಾಂಧಿ ಉದ್ಯಾನದಲ್ಲಿ ಮಹಾತ್ಮ ಗಾಂಧೀಜಿ ಕಾರವಾರಕ್ಕೆ ಭೇಟಿ ನೀಡಿದ್ದ ವಿಷಯಗಳ ಬಗ್ಗೆ ಮಾಹಿತಿ ವಿವರಿಸುವ ಫಲಕಗಳನ್ನು ಅಳವಡಿಸಬೇಕು ಎಂದು ಸಲಹೆ ನೀಡಿದರು.ದಲಿತ ಸಂಘರ್ಷ ಸಮಿತಿಯ ತಾಲೂಕು ಘಟಕದ ಸಂಚಾಲಕ ದೀಪಕ್ ಕುಡಾಳ್ಕರ, ಜಿಲ್ಲಾಸ್ಪತ್ರೆಗೆ ಸಾಗುವ ಮಾರ್ಗದಲ್ಲಿ ಸಾರ್ವಜನಿಕ ಶೌಚಾಲಯಗಳಿಲ್ಲ. ನಗರದಲ್ಲಿ ವಾಹನ ನಿಲುಗಡೆಗೆ ಸರಿಯಾದ ಸ್ಥಳವಿಲ್ಲ. ನಿಯಮ ಪಾಲನೆ ಮಾಡದೆ ಬಹುಮಹಡಿ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಹಲವು ಕಟ್ಟಡಗಳಿಗೆ ಒಳಚರಂಡಿ ಸಂಪರ್ಕ ನೀಡಿಲ್ಲ ಎಂದರು.ಸಾಮಾಜಿಕ ಕಾರ್ಯಕರ್ತೆ ಖೈರುನ್ನೀಸಾ ಶೇಖ್ ನಿವೇಶನಗಳಲ್ಲಿ ಕಸ ಎಸೆಯುವುದಕ್ಕೆ ಕಡಿವಾಣ ಹಾಕಲು ವಿನಂತಿಸಿದರು.ವಾಹನ ನಿಲುಗಡೆಗೆ ಸ್ಥಳ ನಿಗದಿ ಕುರಿತು ಪೊಲೀಸ್ ಅಧಿಕಾರಿಗೊಳೊಂದಿಗೆ ಸದ್ಯದಲ್ಲಿಯೇ ಸಭೆ ನಡೆಸುತ್ತೇವೆ. ಸಭೆಯಲ್ಲಿ ಬಂದ ಸಲಹೆಗಳನ್ನು ಆಧರಿಸಿ ಯೋಜನೆಗಳನ್ನು ರೂಪಿಸಲಾಗವುದು ಎಂದು ಪೌರಾಯುಕ್ತ ಜಗದೀಶ ಹುಲಿಗೆಜ್ಜಿ ಹೇಳಿದರು.2024ಹಿ25ನೇ ಸಾಲಿನಲ್ಲಿ ರೂ 14.60 ಕೋಟಿ ಆದಾಯ ಗುರಿ ಇಟ್ಟುಕೊಳ್ಳಲಾಗಿತ್ತು. ಈಗಾಗಲೇ ರೂ.9.20 ಕೋಟಿ ಆದಾಯ ಸಂಗ್ರಹವಾಗಿದೆ ಎಂದು ಪೌರಾಯುಕ್ತರು ಮಾಹಿತಿ ನೀಡಿದರು.ನಗರಸಭೆಯ ಉಪಾಧ್ಯಕ್ಷೆ ಪ್ರೀತಿ ಜೋಶಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಮಾಲಾ ಹುಲಸ್ವಾರ ಉಪಸ್ಥಿತರಿದ್ದರು.......