ವೇತನ ಹೆಚ್ಚಿಸಿಕೊಂಡಿರುವ ಜನಪ್ರತಿನಿಧಿಗಳ ನಡೆ ಖಂಡನೀಯ

The actions of public representatives who have increased their salaries are condemnable

ವೇತನ ಹೆಚ್ಚಿಸಿಕೊಂಡಿರುವ ಜನಪ್ರತಿನಿಧಿಗಳ ನಡೆ ಖಂಡನೀಯ 

ಬಳ್ಳಾರಿ 22: ಕರ್ನಾಟಕ ರಾಜ್ಯದ ಎಲ್ಲ ಸಚಿವ ಹಾಗೂ ಶಾಸಕರು ಪಕ್ಷಾತೀತವಾಗಿ ತಮ್ಮ ಸಂಬಳ ಮತ್ತು ಭತ್ಯೆಯನ್ನು ಹೆಚ್ಚಿಸಿಕೊಂಡಿದ್ದಾರೆ. ರಾಜ್ಯದ ವಿದ್ಯಾರ್ಥಿ, ಯುವಜನರು ಸೇರಿದಂತೆ ರೈತ ಕಾರ್ಮಿಕರಾದಿಯಾಗಿ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಸರ್ಕಾರದ ಈ ನಡೆಯು ಪ್ರಜಾತಂತ್ರವನ್ನು ನಗೆಪಾಟಲು ಮಾಡಿದೆ. ಕಳೆದ ಮೂರು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಸರಿಯಾಗಿ ವಿದ್ಯಾರ್ಥಿ ವೇತನ ದೊರೆತಿಲ್ಲ. ಕಳೆದ ವರ್ಷವಷ್ಟೇ ಕಾರ್ಮಿಕರ ಮಕ್ಕಳ ವಿದ್ಯಾರ್ಥಿ ವೇತನದ ಮೊತ್ತವನ್ನು ಗಣನೀಯವಾಗಿ ಕಡಿತಗೊಳಿಸಲಾಗಿದೆ. ರಾಜ್ಯದ ಸಾವಿರಾರು ಸರ್ಕಾರಿ ಶಾಲೆಗಳಲ್ಲಿ 59ಸಾವಿರಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಸಮರ​‍್ಕ ಕಟ್ಟಡ, ಶೌಚಾಲಯ ಕುಡಿಯುವ ನೀರು ಮುಂತಾದ ಕನಿಷ್ಠ ಸೌಕರ್ಯಗಳಿರದೇ ರಾಜ್ಯದ ಅನೇಕ ಸರ್ಕಾರಿ ಶಿಕ್ಷಣ ಸಂಸ್ಥೆಗಳು ಶೋಚನೀಯ ಪರಿಸ್ಥಿತಿಯಲ್ಲಿವೆ. ಇವುಗಳ ಪರಿಸ್ಥಿತಿಯನ್ನು ಉತ್ತಮ ಪಡಿಸುವುದರ ಬದಲಿಗೆ ಸರ್ಕಾರವು ಅನೇಕ ಶಾಲೆಗಳನ್ನು ಮುಚ್ಚಲು ಹೊರಟಿದೆ. ಇನ್ನು ರಾಜ್ಯದ ವಿಶ್ವವಿದ್ಯಾಲಯಗಳಂತೂ ಅನುದಾನದ ಕೊರತೆಯಿಂದ ತೀವ್ರ ಸಂಕಷ್ಟಕ್ಕೆ ಗುರಿಯಾಗಿವೆ. ರಾಜ್ಯದ ಅನೇಕ ವಿಶ್ವವಿದ್ಯಾಲಯಗಳಲ್ಲಿ ವರ್ಷಗಳಿಂದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ನೇಮಕಾತಿಯಾಗಿಲ್ಲ. ಇತ್ತೀಚೆಗಷ್ಟೆ, ಅನುದಾನ ನೀಡದೇ ರಾಜ್ಯ ಸರ್ಕಾರವು ರಾಜ್ಯದ 9 ವಿಶ್ವವಿದ್ಯಾಲಯಗಳನ್ನು ಮುಚ್ಚಲು ಹೊರಟಿದೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಜನರ ತೆರಿಗೆಯನ್ನು ಶಿಕ್ಷಣ, ಆರೋಗ್ಯ, ಉದ್ಯೋಗ ಸೇರಿದಂತೆ ಜನಕಲ್ಯಾಣ ಯೋಜನೆಗಳಿಗೆ ವ್ಯಯಿಸುವುದನ್ನು ಬಿಟ್ಟು ತಮ್ಮ ವೇತನಗಳನ್ನು ಹೆಚ್ಚಿಸಿಕೊಂಡಿರುವ ಜನಪ್ರತಿನಿಧಿಗಳ ಈ ನಡೆಗೆ ಎಐಡಿಎಸ್‌ಓ ಜಿಲ್ಲಾ ಕಾರ್ಯದರ್ಶಿ ಕಂಬಳಿ ಮಂಜುನಾಥ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಈ ನಿಲುವನ್ನು ಹಿಂಪಡೆದು ರಾಜ್ಯದ ಜನರ ಏಳಿಗೆಗೆ ಈ ಹಣವನ್ನು ಮೀಸಲಿಡಬೇಕೆಂದು ಕರ್ನಾಟಕ ರಾಜ್ಯ ಸರ್ಕಾರವನ್ನು ಎಐಡಿಎಸ್‌ಒ ಆಗ್ರಹಿಸಿದೆ.