ತೋಂಟದ ಶ್ರೀಗಳ ವ್ಯಸನ ಮುಕ್ತ ಸಮಾಜಕ್ಕಾಗಿ ಪಾದಯಾತ್ರೆ ದ್ವಿಮುಖ ನೀತಿಯನ್ನು ಅನುಸರಿಸುತ್ತಿದೆ

The Padayatra for an Addiction-Free Society of Thontada Sri is following a two-pronged policy

ತೋಂಟದ ಶ್ರೀಗಳ ವ್ಯಸನ ಮುಕ್ತ ಸಮಾಜಕ್ಕಾಗಿ ಪಾದಯಾತ್ರೆ ದ್ವಿಮುಖ ನೀತಿಯನ್ನು ಅನುಸರಿಸುತ್ತಿದೆ  

ಗದಗ 04: ಜಗದ್ಗುರು ತೋಂಟದರ್ಯ ಮಠದ ಪೀಠಾಧಿಪತಿಗಳಾದ ಡಾ. ಸಿದ್ಧರಾಮ ಸ್ವಾಮೀಜಿಗಳು ಎಪ್ರಿಲ್ 6 ರಿಂದ 3 ದಿನಗಳ ಕಾಲ ಅವಳಿ ನಗರದ ಸಿಮೀತ ವ್ಯಾಪ್ತಿಯಲ್ಲಿ ವ್ಯಸನ ಮುಕ್ತ ಸಮಾಜಕ್ಕಾಗಿ ಪಾದಯಾತ್ರೆ ಮಾಡುತ್ತಿದ್ದಾರೆ. ಆದರೆ ತಮ್ಮದೇ ಮಠದ ಆಸ್ತಿಯಲ್ಲಿ ಬಾರ್ ಆಂಡ್ ರೆಸ್ಟೋರೆಂಟ್ ನಡೆಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಇತ್ತ ವ್ಯಸನ ಮುಕ್ತ ಸಮಾಜಕ್ಕಾಗಿ ಪಾದಯಾತ್ರೆ ಮಾಡುತ್ತಿರುವುದು ಖಂಡನಿಯವಾಗಿದೆ. ಜೊತೆಗೆ ಶ್ರೀಗಳ ಆಪ್ತವಲಯದಲ್ಲಿರುವವರನ್ನು ಮೊದಲು ವ್ಯಸನದಿಂದ ಮುಕ್ತಗೊಳ್ಳಿಸಿ ನಂತರ ಪಾದಯಾತ್ರೆ ಮಾಡಬೇಕು ಎಂದರು. ಈ ಪಾದಯಾತ್ರೆಯು ಮಗುವನ್ನು ಜೋಳಿಗೆಯಲ್ಲಿ ಹಾಕಿ ಮಗುವನ್ನು ಚುವಟಿ ನಂತರ ತಾವೇ ಜೋಗುಳ ಹಾಡುವ ರೀತಿಯಲ್ಲಿ ಪಾದಯಾತ್ರೆ ನಡೆಯುತ್ತಿದೆ ಈ ಕಾರಣಕ್ಕಾಗಿ ನಾವು ಖಂಡಿಸುತ್ತೇವೆ ಎಂದು ಹಿಂದೂ ವೀರಶೈವ ಲಿಂಗಾಯತ ಯುವ ವೇದಿಕೆಯ ರಾಜ್ಯ ಸಂಚಾಲಕ ರಾಜು ಖಾನಪ್ಪನವರ ಹೇಳಿದರು. 

ಗದಗ ಜಿಲ್ಲಾ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಲಿಂ. ಸಿದ್ದಲಿಂಗೇಶ್ವರ ಸ್ವಾಮೀಜಿಗಳು ಹೋಟೆಲ್ ಉದ್ಘಾಟನೆಗೆ ಹೋಗಲು ನಿರಾಕರಿಸಿ, ಅನ್ನ ಮಾರಾಟ ಮಾಡುವುದನ್ನು ನಾನು ವಿರೋಧಿಸುತ್ತೇನೆ ಎಂದು ಹೇಳಿದ್ದರು. ಆದರೆ, ಕೆಲವು ದಿನಗಳ ನಂತರ ಅನ್ನದ ಜೊತೆಗೆ ಮಾಂಸಹಾರ, ಸಾರಾಯಿ ವ್ಯಾಪಾರ ಕೇಂದ್ರ ಬಾರ್ ಆಂಡ್ ರೆಸ್ಟೋರೆಂಟ್ ಉದ್ಘಾಟನೆಗೆ ಹೋಗಿದ್ದರು. ಇದು ಅಂದಿನ ಸ್ವಾಮೀಜಿಗಳ ದ್ವಿಮುಖ ನೀತಿಯನ್ನು ಎತ್ತಿ ತೋರಿಸುತ್ತದೆ. ಜಾತ್ಯಾತೀತ ಮಠ ಎಂದು ಹೇಳಿಕೊಂಡು ಹಿಂದೂ ಸಂಪ್ರದಾಯವನ್ನು ಸ್ವಾಮೀಜಿಗಳು ಹಾಳು ಮಾಡುತ್ತಿದ್ದರು ಎಂದು ಲಿಂಗೈಕ್ಯ ಶ್ರೀಗಳ ವಿರುದ್ಧವೂ ತಮ್ಮ ಆಕ್ರೋಶವನ್ನು ಹೊರಹಾಕಿದರು. 

ತೋಂಟದಾರ್ಯ ಮಠದ ಜಾತ್ರೆ ವ್ಯಾಪಾರ ಕೇಂದ್ರವಾಗಿದೆ. ಶ್ರೀಮಠದ ಜಾತ್ರೆಯಲ್ಲಿ ಹಿಂದೂಗಳಿಗಿಂತ ಅನ್ಯಧರ್ಮೀಯ ವ್ಯಾಪಾರಸ್ಥರೇ ಹೆಚ್ಚು ಇರುತ್ತಾರೆ. ಒಂದು ತಿಂಗಳಿಗೂ ಹೆಚ್ಚು ಕಾಲ ಇಲ್ಲಿ ದೇಶದ ನಾನಾ ರಾಜ್ಯಗಳಿಂದ ಬಂದು ವ್ಯಾಪಾರ ಮಾಡುತ್ತಾರೆ. ಇದರಿಂದ ಸ್ಥಳೀಯ ವ್ಯಾಪಾರಸ್ಥರು ವ್ಯವಹಾರದ ಸಂಕಷ್ಟ ಜೊತೆಗೆ ಆರ್ಥಿಕವಾಗಿ ಹಿನ್ನೆಡೆಯಲ್ಲಿ ಎದುರಿಸುತ್ತಾರೆ ಎಂದು ಕಿಡಿ ಕಾರಿದರು. ಪತ್ರಿಕಾಗೋಷ್ಠಿಯಲ್ಲಿ ವಿಶ್ವನಾಥ ಶೀರಿ, ಸತೀಶ್ ಕುಂಬಾರ, ಶಿವಯೋಗಿ ಹಿರೇಮಠ, ವೆಂಕಟೇಶ ದೊಡ್ಡಮನಿ, ಕುಮಾರ ನಡಗೇರಿ, ಕಿರಣ್ ಹಿರೇಮಠ, ಸಂತೋಷ ಹುಯಿಲಗೋಳ ಉಪಸ್ಥಿತರಿದ್ದರು.