ದೇವಾಲಯಗಳು ಸಂಸ್ಕೃತಿ-ಸಂಸ್ಕಾರದ ತಾಣಗಳು: ಮಧುಸೂದನಾಚಾರ್ಯ ಕಟ್ಟಿ

Temples Cultural Sites: Madhusudanacharya Katti

ದೇವಾಲಯಗಳು ಸಂಸ್ಕೃತಿ-ಸಂಸ್ಕಾರದ ತಾಣಗಳು: ಮಧುಸೂದನಾಚಾರ್ಯ ಕಟ್ಟಿ 

ವಿಜಯಪುರ: ದೇವಾಲಯಗಳು ಜನರನ್ನು ಒಗ್ಗೂಡಿಸುವ ಮತ್ತು ಜನರಲ್ಲಿ ಸಂಸ್ಕೃತಿ-ಸಂಸ್ಕಾರವನ್ನು ತುಂಬುವ ತಾಣಗಳಾಗಿವೆ. ನಾವು ದೇವಾಲಯಗಳಿಗೆ ತೆರಳುವುದರಿಂದ, ಭಗವಂತನ ದರ್ಶನ ಮಾಡುವುದರಿಂದ ಮಾನಸಿಕ ಶಾಂತಿ ಮತ್ತು ನೆಮ್ಮದಿ ದೊರೆಯುತ್ತದೆ. ಧರ್ಮಾಚರಣೆಯಿಂದ ಮನುಷ್ಯ ಸುಸಂಸ್ಕೃತನಾಗುತ್ತಾನೆ. ಮಾನವ ಭವ ಬಂಧನದಿಂದ ಹೊರಬಂದು ಎಲ್ಲವೂ ನಾನು, ನನ್ನದು, ನನ್ನಿಂದ, ನನಗಾಗಿಯೇ ಎಂಬ ಅಹಮಿಕೆವನ್ನು ತ್ಯಜಿಸಿ ಬದುಕಿದರೆ ಅವನ ಜನ್ಮ ಸಾರ್ಥಕವಾಗುತ್ತದೆ. ಮಾನವ ಭವ ಸಾಗರದಲ್ಲಿ ಮಾಯಾ ಜಿಂಕೆ ಬೆನ್ನು ಹತ್ತಿ ಆಸ್ತಿ-ಹಣ, ನಗ-ನಾಣ್ಯ, ಆದಾಯ, ಸಂಪತ್ತುಗಳ ಸಂಪಾದನೆಯಲ್ಲಿಯೇ ತನ್ನ ಇಡೀ ಜೀವನವನ್ನು ಕಳೆಯುತ್ತಿದ್ದಾನೆ. ಅಧ್ಯಾತ್ಮಿಕ ಮತ್ತು ಧಾರ್ಮಿಕ ಚಿಂತನಾ ಗೋಷ್ಠಿಗಳಲ್ಲಿ ಭಾಗವಹಿಸುವದರಿಂದ ಜನರು ಸಂಸಾರದ ಜಂಜಾಟದಿಂದ ಹೊರಬಂದು ಮಾನಸಿಕ ನೆಮ್ಮದಿ, ಸುಖ-ಶಾಂತಿ ಪಡೆಯಲು ಸಹಕಾರಿಯಾಗಲಿದೆ. ದೇವರು ಮತ್ತು ದೇವಸ್ಥಾನಗಳಿಗೆ ಹೋಗುವುದರಿಂದ ನಮ್ಮಲ್ಲಿ ಧನಾತ್ಮಕ ಶಕ್ತಿ ಉಂಟಾಗಿ ಮಾಡುವ ಕೆಲಸ-ಕಾರ್ಯಗಳಲ್ಲಿ ಸಾಫಲ್ಯ ಪಡೆಯಲು ಪೂರಕವಾಗುತ್ತದೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತದಲ್ಲಿ ಬರುವ ವಿವಿಧ ಪಾತ್ರಗಳು ನಮ್ಮ ಬದುಕಿನ ನೀತಿಯ ಸಂದೇಶವನ್ನು ತಿಳಿಸುತ್ತವೆ. ಅದರಲ್ಲಿ ಆಂಜನೇಯನು ಸ್ವಾಮಿನಿಷ್ಠೆ, ಕತೃತ್ವ ಶಕ್ತಿ, ದೈವಭಕ್ತಿ ಮತ್ತು ಶಕ್ತಿಯ ಅವತಾರ ಪುರುಷನಾಗಿದ್ದಾನೆ. ಆದ್ದರಿಂದ ನಾವೆಲ್ಲರೂ ಇಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಬದುಕಿನಲ್ಲಿ ಸಾರ್ಥಕತೆಯನ್ನು ಪಡೆಯಬೇಕು ಎಂದು ದಿವ್ಯ ಸಾನಿಧ್ಯ ವಹಿಸಿದ್ದ ಪಂಡಿತ ಮಧುಸೂದನಾಚಾರ್ಯ ಕಟ್ಟಿ ಅವರು ಉಪದೇಶಿಸಿದರು. 

ಅವರು ನಗರದ ಅಥಣಿ ರಸ್ತೆಯ ಅಲ್‌-ಅಮೀನ್ ಆಸ್ಪತ್ರೆ ಎದುರಿಗೆ ಇರುವ ಎನ್‌.ಜಿ.ಓ. ಕಾಲನಿಯಲ್ಲಿರುವ ಆಂಜನೇಯ ದೇವಸ್ಥಾನದಲ್ಲಿ 5 ನೇಯ ವರ್ಷದ ಜಾತ್ರಾ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡುತ್ತಿದ್ದರು.  

ಭಾರತ ಅನೇಕತೆಯಲ್ಲಿ ಏಕತೆಯನ್ನು ಹೊಂದಿದ ರಾಷ್ಟ್ರ. ಇಲ್ಲ್ಲಿ ಹಲವು ಧರ್ಮ, ಜಾತಿ, ಜನಾಂಗ, ಮತ-ಪಂಥ, ಭಾಷೆಯ ಜನರು ವಾಸಿಸುತ್ತಿದ್ದರೂ ನಾವೆಲ್ಲರೂ ಒಂದು ಎಂಬ ಭಾವದೊಂದಿಗೆ ಸುಖ-ಶಾಂತಿ, ನೆಮ್ಮದಿ ಮತ್ತು ಸಹೋದರತ್ವ, ಭ್ರಾತೃತ್ವ, ಸಾಮರಸ್ಯತೆ ಮತ್ತು ಐಕ್ಯತಾ ಭಾವದಿಂದ ಬದುಕುತ್ತಿದ್ದಾರೆ. ದೇವಸ್ಥಾನದ ಅಭಿವೃದ್ಧಿಗಾಗಿ ಎಲ್ಲರೂ ತನು-ಮನ-ಧನದ ಮೂಲಕ ಸಹಾಯ-ಸಹಕಾರ ನೀಡಿದಾಗ ಮಾತ್ರ ಇಂತಹ ಭವ್ಯ ದೇವಸ್ಥಾನಗಳು ನಗರದಲ್ಲಿಯೇ ಮಾದರಿ ದೇವಸ್ಥಾನ ಆಗಲು ಸಾಧ್ಯ. ಪ್ರತಿಯೊಂದು ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಎಲ್ಲರೂ ಏಕೋಭಾವದಿಂದ ಪಾಲ್ಗೊಂಡು ನಮ್ಮ ಧರ್ಮ, ಸಂಸ್ಕೃತಿ, ಸಂಸ್ಕಾರ, ಆಚರಣೆ, ಸಂಪ್ರದಾಯ ಮತ್ತು ಪರಂಪರೆಯನ್ನು ಎತ್ತಿ ಹಿಡಿಯಬೇಕು ಎಂದರು.  

ಮುಖ್ಯ ಅತಿಥಿ ಪ್ರೊ. ಬಿ.ಎಸ್‌.ಬೆಳಗಲಿ ಅವರು ಮಾತನಾಡುತ್ತಾ, ಹೇಗೆ ಈ ಭೂಮಿಯಲ್ಲಿ  ಬಿತ್ತಿದ ಬೀಜವು ಮುಂದೊಂದು ದಿನ ಹೆಮ್ಮರವಾಗಿ ಆಗಿ ಫಲ ಕೊಡುವಂತೆ, ತಾಯಂದಿರು ಮಕ್ಕಳ ಮನದಲ್ಲಿ ಸಂಸ್ಕೃತಿ-ಸಂಸ್ಕಾರ, ಜೀವನ-ಸಾಮಾಜಿಕ ಮೌಲ್ಯ, ಸದಾಚಾರ, ಸದ್ಚಿಂತನೆ, ಸದ್ಭಾವ, ಸನ್ನಡತೆ, ಸಚ್ಚ್ಯಾರಿತ್ರ್ಯ, ಸದಾಶಯ, ಸಮಭಾವ ಮತ್ತು ಸಮಷ್ಠಿಭಾವದಂತಹ ಗುಣಗಳನ್ನು ಬಿತ್ತಿ ಉತ್ತಮ ಮೌಲ್ಯಯುತ ಸಮಾಜ ನಿರ್ಮಾಣ ಮಾಡುವಲ್ಲಿ ಜವಾಬ್ದಾರಿ ಹೆಚ್ಚಾಗಿದೆ. ವಸುದೈವ ಕುಟುಂಬಕಂ ಎನ್ನುವ ಸಂಸ್ಕೃತಿಯ ನಾಡು ನಮ್ಮದು. ದೇಶದಲ್ಲಿ ಅನಾಥಾಶ್ರಮ ಮತ್ತು ವ್ರದ್ಧಾಶ್ರಮಗಳು ಕಡಿಮೆಯಾಗಬೇಕು. ಕುಟುಂಬದ ಎಲ್ಲ ಸದಸ್ಯರೂ ಕೂಡಿ ಬದುಕಿ-ಬಾಳುವ ಸಂಸ್ಕೃತಿ ನಮ್ಮದಾಗಬೇಕು. ಕೇವಲ ಶಾಲೆಗಳು ಜ್ಞಾನ ನೀಡುವ ಕೇಂದ್ರಗಳಾಗದೇ ಮಕ್ಕಳಿಗೆ ಪಠ್ಯದ ಜತೆಗೆ ಹೇಗೆ ಇರಬೇಕು, ಇತರರೊಂದಿಗೆ ಸಹಬಾಳ್ವೆ, ಹೇಗೆ ಬದುಕಬೇಕು, ಸಂಸ್ಕೃತಿ-ಸಂಸ್ಕಾರ, ದೇಶಪ್ರೇಮ. ಸಮಗ್ರತೆ, ಐಕ್ಯತೆ, ಭಾವೈಕ್ಯತೆ ಮತ್ತು ಸಾಮರಸ್ಯತೆಯಿಂದ ಜೀವನ ನಡೆಸುವ ಬಗ್ಗೆ ಅರಿವು ಮೂಡಿಸುವದರ ಮೂಲಕ ಮೌಲ್ವಿಕ ಮತ್ತು ನೈತಿಕ ಶಿಕ್ಷಣವನ್ನು ನೀಡುವಂತಾಗಬೇಕು. ಅಂದಾಗ ಮಾತ್ರ ಸ್ವಾಮಿ ವಿವೇಕಾನಂದರ ಕನಸಿನ ಭಾರತ ನಿರ್ಮಾಣವಾಗಲು ಸಾಧ್ಯ ಎಂದು ಕಿವಿಮಾತು ಹೇಳಿದರು. 

ಲಕ್ಷ್ಮಣ ಶಿಂಧೆ, ಬಿ.ಡಿ.ಕಡಕೋಳ, ಶಂಕರ ಹಾರಿವಾಳ, ಪಾಂಡುರಂಗ ತಳವಾರ, ಅನೀಲ ಪಾಟೀಲ, ರಮೇಶ ಕೋಷ್ಠಿ, ವೆಂಕಟೇಶ ವೈದ್ಯ, ಮಂಜುಳಾ ಜೋಶಿ, ಭಾರತಿ ಬಣಗಾರ, ಮಹಾದೇವಿ ಪಾಟೀಲ ಇನ್ನಿತರರು ಸಹ ವೇದಿಕೆಯ ಮೇಲಿದ್ದರು. 

ಶ್ರೀರಾಮ ಹಾಗೂ ಬನ್ನಿ ಮಹಾಂಕಾಳಿ ಮೂರ್ತಿ ನಿರ್ಮಾಣ ಹಾಗೂ ಎಲ್ಲ ಪ್ರತಿಷ್ಠಾಪನೆಗಾಗಿ ದೇಣಿಗೆ ನೀಡಿದ ದೇವಸ್ಥಾನದ ಮಹಿಳಾ ಬಳಗದ ಸದಸ್ಯರಿಗೆ ಹಾಗೂ ಐದು ದಿನಗಳವರೆಗೆ ಸೇವೆ ಸಲ್ಲಿಸಿದ ಯುವಕರಿಗೆ ಸನ್ಮಾನ ಮಾಡಲಾಯಿತು. ಮಕ್ಕಳು ಮತ್ತು ಮಹಿಳೆಯರಿಗಾಗಿ ಆಯೋಜಿಸಿದ  ವಿವಿಧ ಸ್ಫರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಪಾರಿತೋಷಕ ನೀಡಲಾಯಿತು.  

ಎಸ್‌.ಎಸ್‌.ಪಟ್ಟಣಶೆಟ್ಟಿ, ಅಪ್ಪು ಪಾಟೀಲ, ಅಮರದೀಪ ಕವಲಗಿ, ಸುಜಯ ಹಲಕುಡೆ, ಶ್ರೀಶೈಲ ಮಠಪತಿ, ಸುಜಾತಾ ನಾಗನೂರ, ಸವಿತಾ ಉಮ್ಮಾಜಿಗೋಳ, ಗಾಯತ್ರಿ ಬಳೂಲಗಿಡದ, ಶಶಿಕಲಾ ತಳವಾರ, ಸಂಜಾತಾ ತಾಳಿಕೋಟಿ, ಕಾವ್ಯ ಸಂಬಣ್ಣಿ, ರಾಜಶ್ರೀ ಮುಧೋಳ ಇನ್ನಿತರರು ಸೇರಿದಂತೆ ಸುತ್ತಮುತ್ತಲಿನ ಎಲ್ಲ ಬಡಾವಣೆಯ ನೂರಾರು ಮಕ್ಕಳು, ಮಹಿಳೆಯರು, ಹಿರಿಯರು ಭಾಗವಹಿಸಿದ್ದರು.