ಕಣವಿ ತಿಮ್ಮಾಪುರದಲ್ಲಿ ತೆಲುಗು ಶಾಸನ ಪತ್ತೆ
ಕಂಪ್ಲಿ 13: ಕಂಪ್ಲಿ ತಾಲ್ಲುಕಿನ ನಂ.10 ಮುದ್ದಾಪುರ ಗ್ರಾ.ಪಂ.ವ್ಯಾಪ್ತಿಯ ಕಣವಿ ತಿಮ್ಮಾಪುರ ಗ್ರಾಮದಲ್ಲಿ ಶ್ರೀಕೃಷ್ಣ ದೇವರಾಯನ ಕಾಲದ ಶಿಲಾ ಶಾಸನವನ್ನು ಸಹಾಯಕ ಪ್ರಾಧ್ಯಾಪಕ ತಳವಾರ ನರಸಿಂಹ ಪತ್ತೆ ಹಚ್ಚಿದ್ದಾರೆ. ಇದು ವಿಜಯನಗರ ಕಾಲದ ಶಾಸನವಾಗಿದ್ದು, ಇದರ ಕಾಲ ಸಾಮಾನ್ಯ ಶಕ 1516 ಎಂದು ತಳವಾರ ನರಸಿಂಹ ಅವರು ಗುರುತಿಸಿದ್ದಾರೆ.
ಇದು ಶ್ರೀಕೃಷ್ಣ ದೇವರಾಯನ ಕಾಲದ ಶಾಸನವಾಗಿದೆ. ಶಾಸನವನ್ನು ಕನ್ನಡ ಲಿಪಿಯಲ್ಲಿ ಬರೆಯಲಾಗಿದೆ. ಆದರೆ ಶಾಸನದ ಭಾಷೆ ತೆಲುಗು ಆಗಿದೆ. ಮೇಲ್ಭಾಗದಲ್ಲಿ 18 ಸಾಲುಗಳು ಹಾಗೂ ಎಡ ಭಾಗದ ಅಂಚಿನಲ್ಲಿ ಎರಡು ಸಾಲುಗಳಿಂದ ಕೂಡಿದೆ. ಮೇಲ್ನೋಟಕ್ಕೆ ಈ ಶಾಸನವು ದಾನ ಶಾಸನ ಎಂಬಂತೆ ಗೋಚರಿಸುತ್ತಿದೆ ಎಂದು ತಿಳಿಸಿದರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಪರಶಿವಮೂರ್ತಿಯವರು ಈ ಶಾಸನ ತೆಲುಗು ಭಾಷೆಯಲ್ಲಿದೆ. ಹೆಚ್ಚಿನ ಅಧ್ಯಯನ ಮಾಡಲು ಸ್ಥಳಕ್ಕೆ ಬರುವುದಾಗಿ ತಿಳಿಸಿದ್ದಾರೆ.
ಮೈಸೂರಿನ ಕೇಂದ್ರ ಪುರಾತತ್ವ ಇಲಾಖೆಯ ಶಾಸನ ತಜ್ಞ ಡಾ.ನಾಗರಾಜಪ್ಪ ಅವರು ಶಾಸನದ ಪಡಿಯಚ್ಚು ತೆಗೆದಿದ್ದು, ಹೆಚ್ಚಿನ ಅಧ್ಯಯನ ಮಾಡುತ್ತಿದ್ದಾರೆ. ತಳವಾರ ನರಸಿಂಹ ಅವರು ಈ ಶಾಸನದ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನ ಮಾಡುತ್ತಿದ್ದೇವೆಂದು ಪತ್ರಿಕೆಗೆ ತಿಳಿಸಿದರು. ಈ ಶಾಸನ ಪತ್ತೆ ಹಚ್ಚುವಲ್ಲಿ ಯಲ್ಲಪ್ಪ, ನಾಗರಾಜ್, ಮಾರ್ಪ ಮತ್ತು ಗ್ರಾಮಸ್ಥರ ಸಹಕಾರನವನ್ನು ಸ್ಮರಿಸಿದರು.