ಲೋಕದರ್ಶನ ವರದಿ
ಹಳಿಯಾಳ: ತಾಲೂಕಿನ ಬಂಟರಗಾಳಿ, ಸಾತ್ನಳ್ಳಿ, ಅರ್ಲವಾಡ ಗ್ರಾಮಗಳ ವ್ಯಾಪ್ತಿಯ ಕೆರೆಗಳನ್ನು ಹೂಳೆತ್ತಿದ್ದು, ಬೆಳವಟಗಿ ಮತ್ತು ತೆಗ್ನಳ್ಳಿ ಗ್ರಾಮಗಳ ಕೆರೆಗಳ ಹೂಳೆತ್ತುವ ಕಾರ್ಯವು ಧಾರವಾಡದ ಟಾಟಾ ಹಿಟಾಚಿ ಕನ್ಸಟ್ರಕ್ಷನ್ಸ್ ಮಶೀನರಿ ಕಂಪನಿ ಪ್ರಾವೈಟ್ ಲಿಮಿಟೆಡ್ ಇವರ ಸಹಯೋಗದಲ್ಲಿ ನಡೆಸಲಾಗಿದೆ ಎಂದು ಕೆರೆ ಹೂಳೆತ್ತುವ ಯೋಜನೆಯ ಸಂಘಟಕರಾದ ವಿಆರ್ಡಿಎಮ್ ಟ್ರಸ್ಟ್ದವರು ತಿಳಿಸಿದ್ದಾರೆ.
ಟಾಟಾ ಹಿಟಾಚಿ ಕಂಪನಿಯವರು ತಮ್ಮ ಉದ್ಯಮ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ನಿಧಿಯಡಿ ಕೆರೆಗಳ ಹೂಳೆತ್ತಲು ಸಹಕಾರ ನೀಡಿದ್ದಾರೆ. ಕೆರೆಗಳಲ್ಲಿನ ಹೂಳನ್ನು ರೈತರು ತಮ್ಮ ಟ್ರ್ಯಾಕ್ಟರ್ಗಳಲ್ಲಿ ಸ್ವಂತ ಖರ್ಚಿನಿಂದ ತಮ್ಮ ಹೊಲಗಳಿಗೆ ಸಾಗಿಸುತ್ತಿದ್ದಾರೆ. ಕೆನರಾಬ್ಯಾಂಕ್-ದೇಶಪಾಂಡೆ ಆರ್ಸೆಟಿ ಸಂಸ್ಥೆ ಕೆರೆಗಳ ಹೂಳೆತ್ತುವ ಕಾರ್ಯವನ್ನು ಮೇಲ್ವಿಚಾರಣೆ ಮಾಡುತ್ತಿದೆ. ಸಿಎಸ್ಆರ್ ನಿಧಿಯಡಿ ಸಹಕಾರ ನೀಡಿದ ಟಾಟಾ ಹಿಟಾಚಿ ಕಂಪನಿಯ ಅಧಿಕಾರಿಗಳು ಬಂದು ಕೆರೆಗಳ ಹೂಳೆತ್ತುವ ಕಾರ್ಯವನ್ನು ವೀಕ್ಷಿಸಿದ್ದಾರೆ.
ಸಚಿವ ಆರ್.ವಿ. ದೇಶಪಾಂಡೆಯವರು ಅಧ್ಯಕ್ಷರಾಗಿರುವ ವಿಆರ್ಡಿಎಮ್ ಟ್ರಸ್ಟ್ ಸತತ ಮೂರು ವರ್ಷಗಳಿಂದ ಉದ್ಯಮಿಗಳ ಸಹಾಯ ಸಹಕಾರದಿಂದ ಹಳಿಯಾಳ ಮತ್ತು ಜೊಯಿಡಾ ತಾಲೂಕಿನ ಹೂಳು ತುಂಬಿರುವ ಕೆರೆಗಳ ಹೂಳನ್ನು ತೆಗೆದು ಅದನ್ನು ರೈತರು ತಮ್ಮ ಹೊಲ-ಗದ್ದೆಗಳಿಗೆ ತೆಗೆದುಕೊಂಡು ಹೋಗುವಂತೆ ಮಾಡಲಾಯಿತು. ಕೆರೆಗಳಲ್ಲಿನ ಹೂಳು ತೆರವುಗೊಳಿಸಿದ್ದರಿಂದ ಕೆರೆಗಳ ಪುನರುಜ್ಜೀವನ ಕಾರ್ಯದಿಂದ ಕೆರೆಗಳಿಗೆ ಹೊಸ ಕಾಯಕಲ್ಪ ದೊರೆಯಿತು.
ಪರಿಣಾಮ ಬಹುತೇಕ ಎಲ್ಲ ಕೆರೆಗಳಲ್ಲಿ ಮೇ ಕೊನೆವರೆಗೆ ನೀರು ಉಳಿದಿದೆ. ಇದರಿಂದ ಅಂತರ್ಜಲ ಹೆಚ್ಚಿಸಿದ್ದು, ಕೆರೆಗಳ ನೀರು ಸಂಗ್ರಹಿಸುವ ಸಾಮಥ್ರ್ಯ ಕೂಡ ವೃದ್ದಿಯಾಗಿದೆ. ರೈತರಿಗೆ ಮತ್ತು ಜಾನುವಾರಗಳಿಗೆ ತುಂಬಾ ಅನುಕೂಲಕರವಾಗಿದೆ. ಹಳಿಯಾಳ ತಾಲೂಕಿನ ಕೆರೆಗಳಿಗೆ ಕಾಳಿ ನದಿಯಿಂದ ಕೊಳವೆ ಮಾರ್ಗದ ಮೂಲಕ ನೀರು ತುಂಬಿಸುವ ಯೋಜನೆಗೆ ಕೆರೆಗಳ ಹೂಳೆತ್ತುವ ಕಾರ್ಯವು ಪೂರಕವಾಗಲಿದೆ ಎಂದು ವಿ.ಆರ್. ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ನ ಆಡಳಿತಾಧಿಕಾರಿ ಪ್ರಕಾಶ ಪ್ರಭು ತಿಳಿಸಿದ್ದಾರೆ.