ತಾಲೂಕು ಕ್ರೀಡಾಂಗಣ ಕಾಮಗಾರಿ ಅಪೂರ್ಣ: ಜಿಲ್ಲಾ ಕ್ರೀಡಾಂಗಣಕ್ಕೆ ಭೂಮಿಯ ಹುಡುಕಾಟ
ಕಾರವಾರ 22: ಜಿಲ್ಲಾಕೇಂದ್ರ ಕಾರವಾರ ಒಂದು ಸುಸಜ್ಜಿತ ಕ್ರೀಡಾಂಗಣ ಇಲ್ಲದೆ ಬಳಲುತ್ತಿದೆ. ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದ ಅಥ್ಲೆಟ್ ಗಳು ಸಹ ಕೊರತೆಯಿರುವ ಮಾಲಾದೇವಿ ಕ್ರೀಡಾಂಗಣದಲ್ಲೇ , ಪ್ರಾಕ್ಟೀಸ್ ಮಾಡಿ ಸಾಧನೆ ಮಾಡಿದವರು. ಹೀಗಿರುವ ತಾಲೂಕು ಕ್ರೀಡಾಂಗಣಕ್ಕೆ ಒಂದು ಕಾಯಕಲ್ಪ ಕೊಡುವ ಯತ್ನ ಎರಡು ವರ್ಷದ ಹಿಂದೆ ನಡೆದಿತ್ತಾದರೂ ಅದು ಪೂರ್ಣ ಪ್ರಮಾಣದಲ್ಲಿ ಯಶಸ್ಸು ಕಾಣಲಿಲ್ಲ. ಚುನಾವಣೆಗೆ ಒಂದು ತಿಂಗಳು ಮುಂಚೆ ಆರಂಭವಾದ ಕಾಮಗಾರಿಗೆ ಅಕಾಲಿಕ ಮಳೆ ಹಾಗೂ ಮುಂಗಾರು ಅಡ್ಡಿಪಡಿಸಿತು. ಹೊಸ ಸರ್ಕಾರ ಬಂದ ಮೇಲೆ ಶಾಸಕರು ಬದಲಾದ ಪರಿಣಾಮ ನಡೆಯುತ್ತಿದ್ದ ಕಾಮಗಾರಿಗೂ ನೂರೆಂಟು ವಿಘ್ನಗಳು ಅಡ್ಡ ಬಂದವು.ಜಿಲ್ಲಾ ಕ್ರೀಡಾಂಗಣಕ್ಕೆ ಭೂಮಿ ಪಡೆವ ಯತ್ನ :ಇದೀಗ ಜಿಲ್ಲಾಡಳಿತ ಮತ್ತು ಯುವಜನ ಸೇವಾ ಕ್ರೀಡಾ ಇಲಾಖೆ ಜಿಲ್ಲಾ ಕ್ರೀಡಾಂಗಣಕ್ಕೆ ಭೂಮಿ ಪಡೆಯಲು ಪ್ರಯತ್ನ ಆರಂಭಿಸಿದೆ. 2020ರಲ್ಲೇ ಜಿಲ್ಲಾ ಕ್ರೀಡಾಂಗಣಕ್ಕೆ ಕಾರವಾರ ಹೊರ ವಲಯದ ಶಿರವಾಡದಲ್ಲಿ ಅರಣ್ಯ ಇಲಾಖೆಯ ಭೂಮಿಯನ್ನು ಗುರುತಿಸಲಾಗಿತ್ತು.
ಅದಕ್ಕೆ ಪರ್ಯಾಯವಾಗಿ ಕದ್ರಾ ವ್ಯಾಪ್ತಿಯಲ್ಲಿ ಅರಣ್ಯ ಬೆಳೆಸಲು ಪಡಾ ಭೂಮಿ ನೀಡುವ ಬಗ್ಗೆ ಚರ್ಚೆ ಸಹ ಆಗಿತ್ತು. 2022ರಲ್ಲಿ ಶಿರವಾಡ ಪಂಚಾಯತ ವ್ಯಾಪ್ತಿಯ 3.5 ಹೆಕ್ಟೇರ್ ಅರಣ್ಯ ಭೂಮಿಯನ್ನು ಕ್ರೀಡಾ ಇಲಾಖೆಗೆ, ಜಿಲ್ಲಾ ಕ್ರೀಡಾಂಗಣ ನಿರ್ಮಿಸಲು ನೀಡಲು ಸಹಮತ ವ್ಯಕ್ತವಾಯಿತು. ಆದರೆ ತನ್ನ ಭೂಮಿಗೆ 1.30 ಕೋಟಿ ಹಣ ಪಾವತಿಸಬೇಕೆಂದು ಅರಣ್ಯ ಇಲಾಖೆಯು , ಕ್ರೀಡಾ ಇಲಾಖೆಗೆ ಶರತ್ತು ವಿಧಿಸಿತು. ಈ ಶರತ್ತು ಕಾರಣ ಅರಣ್ಯ ಭೂಮಿ ಪಡೆಯಲು ಬಹುದೊಡ್ಡ ತೊಡಕಾಗಿ ಕುಳಿತಿದ್ದು , ಅಷ್ಟೊಂದು ಹಣ ಯುವ ಜನ ಸೇವಾ ಇಲಾಖೆಯಿಂದ ನೀಡಲು ಅಸಾಧ್ಯ ಎಂದು ಕ್ರೀಡಾ ಇಲಾಖೆ ಕೈ ಕಟ್ಟಿ ಕುಳಿತಿದೆ.
ಈ ಅನುಮಾನಕ್ಕೆ ಬೇರೆ ದಾರಿ ಹುಡುಕಲು ಸ್ಥಳೀಯ ಶಾಸಕರಾಗಲಿ, ಉಸ್ತುವಾರಿ ಸಚಿವರಾಗಲಿ ಅಷ್ಟಾಗಿ ಆಸಕ್ತಿ ತಾಳಿಲ್ಲ. ಜಿಲ್ಲಾ ಕ್ರೀಡಾಂಗಣದಲ್ಲಿ 400 ಮೀಟರ್ ಸಿಂಥಟೆಕ್ಸ ಟ್ರ್ಯಾಕ್ , ಪ್ರೇಕ್ಷಕರ ಗ್ಯಾಲರಿ, ಇಂಡೋರ್ ಸ್ಟೇಡಿಯಂ , ಕ್ರೀಡಾಂಗಣಕ್ಕೆ ಕಂಪೌಂಡ್ ನಿರ್ಮಿಸಲು ಯುವಜನ ಸೇವಾ ಕ್ರೀಡಾ ಇಲಾಖೆ ಯೋಜಿಸಿದೆ. ಆದರೆ ಭೂಮಿಗೆ 1 ಕೋಟಿ, 30 ಲಕ್ಷ ನೀಡಲು ಸಾಧ್ಯವಾಗದೇ ಕೈ ಚೆಲ್ಲಿ ಕುಳಿತಿದೆ.ಮಾಲಾದೇವಿ ಕ್ರೀಡಾಂಗಣ ಕಾಮಗಾರಿಗೆ ಆಮೆ ನಡಿಗೆ :ಇತ್ತ ತಾಲೂಕು ಕ್ರೀಡಾಂಗಣ ಮಾಲಾದೇವಿ ಮೈದಾನದಲ್ಲಿ ನಿರ್ಮಿಸುತ್ತಿರುವ ಕ್ರೀಡಾಪಟುಗಳ ಮೂಲಭೂತ ಸೌಕರ್ಯ ಹಾಗೂ ವಿಶ್ರಾಂತಿ ಕಟ್ಟಡ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ. ಕಾರಣಅನುದಾನ ಕೊರತೆಯಿಂದ ಬಳಲುತ್ತಿದೆ. ಕಳೆದ 20 ತಿಂಗಳಿಂದ ಕಾಮಗಾರಿ ಕುಂಟುತ್ತಾ ಸಾಗಿದೆ. ಕೊನೆಯ ಪಕ್ಷ ಮೈದಾನದಲ್ಲಿ ನೀರು ನಿಲ್ಲದಂತೆ ಎತ್ತರಿಸಲು ಕ್ರಮ ತೆಗೆದು ಕೊಳ್ಳಬೇಕೆಂದು ಡಿ. 19 ರಂದು ಜಿಲ್ಲಾಧಿಕಾರಿ , ಕ್ರೀಡಾ ಇಲಾಖೆ ,ಅಥ್ಲೆಟ್ ಅಸೋಸಿಯೇಷನ್ , ನೆಹರು ಯುವಕ ಕೇಂದ್ರದ ಸಂಯುಕ್ತ ಸಭೆಯಲ್ಲಿ ನಿರ್ಣಯಿಸಲಾಗಿದೆ. ಕ್ರೀಡಾಪಟುಗಳ ಸೌಕರ್ಯ ಸಂಕೀರ್ಣ ಕಾಮಗಾರಿ ಮುಗಿದರೆ ,ತಾಲೂಕು ಕ್ರೀಡಾಂಗಣ ಅಭಿವೃದ್ಧಿ ನಿಧಿ ಬಳಸಿ ಕೆಲ ಸೌಕರ್ಯ ಕಲ್ಪಿಸಬಹುದು ಎಂದು ಸಭೆಯಲ್ಲಿ ವಿಸ್ತ್ರತ ಚರ್ಚೆಯಾಗಿದೆ. ಇನ್ನು ತಾಲೂಕುಕ್ರೀಡಾಂಗಣದಲ್ಲಿ ಜಿಲ್ಲಾ ರಂಗ ಮಂದಿರಕ್ಕೆ ಕ್ರೀಡಾ ಇಲಾಖೆ ಹಿಂದೆ 20 ಗುಂಟೆ ಭೂಮಿ ನೀಡಿದೆ. ರಂಗ ಮಂದಿರ ಶಿಥಿಲಾವಸ್ಥೆ ತಲುಪಿದೆ. ರಂಗಮಂದಿರಕ್ಕೆ ಬೇರೆಡೆ ಭೂಮಿ ಕೊಟ್ಟು , ರಂಗ ಮಂದಿರ ಆವರಿಸಿಕೊಂಡಭೂಮಿ ಲಭ್ಯವಾದರೆ ತಾಲೂಕು ಕ್ರೀಡಾಂಗಣಕ್ಕೆ ಒಂದು ಚೌಕಟ್ಟು ದೊರೆಯುತ್ತಿತ್ತು ಎನ್ನುತ್ತಾರೆ ಜಿಲ್ಲಾ ಅಥ್ಲೆಟ್ ಅಸೋಸಿಯೇಷನ್ ಅಧ್ಯಕ್ಷ ಸದಾನಂದ ನಾಯ್ಕ.ಜಿಲ್ಲಾಕೇಂದ್ರದಲ್ಲಿ ಕ್ರೀಡಾ ಸೌಕರ್ಯಕ್ಕೆ ಒಂದು ಕಾಯಕಲ್ಪ ಕೊಡಬೇಕು ಎಂಬ ಹಂಬಲ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅವರಿಗೆ ಇದ್ದು, ಸರ್ಕಾರದ ಗಮನ ಸೆಳೆಯಲು ಪ್ರಯತ್ನಗಳು ಆರಂಭವಾದಂತಿವೆ....
..ಕೋಟ್ ...*ಜಿಲ್ಲಾಕೇಂದ್ರದಲ್ಲಿ ಜಿಲ್ಲಾ ಕ್ರೀಡಾಂಗಣ ನಿರ್ಮಿಸಲು ಭೂಮಿ ಇದೆ. ಅದಕ್ಕೆ 1.30 ಕೋಟಿ ಹಣ ಪಾವತಿಸುವುದು ಇಲಾಖೆಗೆ ಕಷ್ಟ. ಅರಣ್ಯ ಇಲಾಖೆಯು ಸದುದ್ದೇಶಕ್ಕೆ ಕ್ರೀಡಾಂಗಣ ನಿರ್ಮಾಣಕ್ಕೆ ಉಚಿತವಾಗಿ ಭೂಮಿ ಕೊಟ್ಟರೆ, ಕ್ರೀಡಾಂಗಣ ನಿರ್ಮಾಣಕ್ಕೆ ದಾರಿ ಸುಲಭವಾಗಲಿದೆ .-ರವಿ ನಾಯ್ಕ.ಸಹಾಯಕ ನಿರ್ದೇಶಕ.ಜಿಲ್ಲಾ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ.ಕಾರವಾರ.......