ತಾಲೂಕು ಮಟ್ಟದ ಗ್ಯಾರಂಟಿ ಅನುಷ್ಟಾನ ಸಮಿತಿ ಸಭೆ ಆರ್ಥಿಕ ಸಬಲೀಕರಣಕ್ಕೆ ಗ್ಯಾರಂಟಿ ಯೋಜನೆಗಳು ಸಹಕಾರಿ
ಗದಗ 19: ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷಿ ಜನಪ್ರಿಯ ಯೋಜನೆಗಳಾದ ಪಂಚ ಗ್ಯಾರಂಟಿ ಯೋಜನೆಗಳು ರಾಜ್ಯದ ಬಡಕುಟುಂಬಗಳ ಆರ್ಥಿಕ ಸಬಲೀಕರಣಕ್ಕೆ ಸಹಕಾರಿಯಾಗಿವೆ. ಅರ್ಹರಿಗೆ ಯೋಜನೆಗಳ ಸೌಲಭ್ಯ ಸುಲಭವಾಗಿ ತಲುಪಲು ಅಧಿಕಾರಿ ವರ್ಗ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಬೇಕು ಎಂದು ತಾಲೂಕಾ ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ ತಿಳಿಸಿದರು.
ಜಿಲ್ಲಾಡಳಿತ ಭವನದ ವಿಡಿಯೋ ಕಾನ್ಫರನ್ಸ್ ಸಭಾಂಗಣದಲ್ಲಿ ಗುರುವಾರ ತಾಲೂಕಾ ಆಡಳಿತ, ತಾಲೂಕು ಪಂಚಾಯತ್ ಸಹಯೋಗದಲ್ಲಿ ಏರಿ್ಡಸಿದ ತಾಲೂಕು ಮಟ್ಟದ ಪಂಚಗ್ಯಾರಂಟಿ ಅನುಷ್ಟಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅಧಿಕಾರಿಗಳಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.
ಸೆಪ್ಟೆಂಬರ್ 19 ರಂದು ಜಿಲ್ಲಾಡಳಿತದಲ್ಲಿ ಪಂಚ ಗ್ಯಾರಂಟಿ ಅನುಷ್ಟಾನ ಸಮಿತಿ ಸಭೆಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್.ಕೆ.ಪಾಟೀಲ ನೇತೃತ್ವದಲ್ಲಿ ನಡೆಸಲಾಯಿತು. ಈ ಸಭೆಯಲ್ಲಿ ಮಾನ್ಯ ಸಚಿವರ ಸೂಚನೆ ನೀಡಿದಂತೆ ತಾಲೂಕಾ ಮಟ್ಟದಲ್ಲಿ ಪಂಚ ಗ್ಯಾರಂಟಿ ಯೋಜನೆಗಳು ಸಮರ್ಕವಾಗಿ ಶೇ 100 ರಷ್ಟು ಪ್ರಗತಿ ಸಾಧಿಸಬೇಕು ಹಾಗೂ ಪಂಚ ಗ್ಯಾರಂಟಿಗಳ ಅನುಷ್ಟಾನಕ್ಕೆ ಇರುವ ತಾಂತ್ರಿಕ ತೊಡಕುಗಳ ನಿವಾರಣೆಗೆ ಸಮಿತಿ ಚಟುವಟಿಕೆಯಿಂದ ಕಾರ್ಯನಿರ್ವಹಿಸುವಂತೆ ಹೇಳಿದ್ದರು. ಅವರ ಮಾರ್ಗದರ್ಶನದಂತೆ ನಾವೆಲ್ಲರೂ ಅರ್ಹರಿಗೆ ಗ್ಯಾರಂಟಿಗಳ ಸೌಲಭ್ಯ ತಲುಪುವಂತೆ ಕಾರ್ಯನಿರ್ವಹಿಸೋಣ ಎಂದರು.
ಪಂಚ ಗ್ಯಾರಂಟಿಗಳ ಅನುಷ್ಟಾನದಲ್ಲಿ ಇರುವ ತಾಂತ್ರಿಕ ಸಮಸ್ಯೆಗಳ ನಿವಾರಣೆಗೆ ಅಧಿಕಾರಿಗಳು ಮುತುವರ್ಜಿ ವಹಿಸಿ ಸಮಿತಿ ಸದಸ್ಯರನ್ನು ಒಳಗೊಂಡಂತೆ ಪ್ರತ್ಯೇಕ ಸಭೆಗಳನ್ನು ಏರಿ್ಡಸಿ ತಾಂತ್ರಿಕ ಸಮಸ್ಯೆಗಳ ಇತ್ಯರ್ಥಕ್ಕೆ ಮುಂದಾಗೋಣ. ಅಧಿಕಾರಿಗಳು ಸೂಕ್ತ ಸಹಕಾರದೊಂದಿಗೆ ಕೆಲಸ ನಿರ್ವಹಿಸಬೇಕು. ಸರ್ಕಾರದ ಉದ್ದೇಶ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಬಲವರ್ಧನೆಯಾಗಿದೆ. ಸರ್ಕಾರದ ಉದ್ದೇಶ ಸಾಕಾರಕ್ಕಾಗಿ ನಾವೆಲ್ಲ ಒಮ್ಮತದಿಂದ ಶ್ರಮಿಸೋಣ ಎಂದು ಹೇಳಿದರು.
ಸಮಿತಿ ಸದಸ್ಯರಾದ ಕೃಷ್ಣಗೌಡ ಪಾಟೀಲ ಮಾತನಾಡಿ ರಾಜ್ಯದ 1.10 ಕೋಟಿ ಕುಟುಂಬಗಳ ಬಡತನ ನಿರ್ಮುಲನೆ ಮಾಡುವಲ್ಲಿ ಪಂಚ ಗ್ಯಾರಂಟಿ ಯೋಜನೆಗಳು ಸಫಲವಾಗಿವೆ. ಪಂಚ ಗ್ಯಾರಂಟಿಗಳ ಸದ್ಭಳಕೆಯಿಂದ ಪ್ರತಿ ತಿಂಗಳು ಪ್ರತಿಕುಟುಂಬಕ್ಕೆ5,000 ರೂ ಸಹಾಯ ಸಿಗುತ್ತಿದೆ. ಬಡವರು ಹಸಿವಿನಿಂದ ಬಳಲಬಾರದು. ಜನಪ್ರತಿನಿಧಿಗಳಾದವರು ಸರ್ಕಾರದ ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸುವವರು ಎಂದರು.
ಪಡಿತರ ಪಡೆಯಲು ಹಾಗೂ ಹೊಸ ಪಡಿತರ ಚೀಟಿ ನೋಂದಣಿ ಹಾಗೂ ಆಧಾರ್ ಲಿಂಕ್, ಥಂಬ್ ಹೊಂದಾಣಿಕೆ ಆಗದೇ ಇರುವಂತಹ ಹಲವಾರು ತಾಂತ್ರಿಕ ತೊಂದರೆಗಳನ್ನಿಟ್ಟುಕೊಂಡು ಅರ್ಹ ಫಲಾನುಭವಿಗಳು ಗ್ಯಾರಂಟಿ ಸೌಲಭ್ಯಗಳಿಂದ ವಂಚಿತರಾಗಿದ್ದು ಅವರಿಗೆ ತಾಂತ್ರಿಕ ತೊಂದರೆಗಳ ನಿವಾರಣೆಗೆ ಪ್ರತ್ಯೇಕ ಸಭೆ ನಡೆಸಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿ ಸಫಲರಾಗೋಣ ಎಂದು ಸಲಹೆ ನೀಡಿದರು.
ಗ್ಯಾರಂಟಿ ಸಮಿತಿ ಜಿಲ್ಲಾ ಅಧ್ಯಕ್ಷ ಬಿ.ಬಿ.ಅಸೂಟಿ ಮಾತನಾಡಿ ಪಡಿತರ ಪಡೆಯಲು ಪಡಿತರದಾರರು ಥಂಬ್ ನೀಡಿದರೂ ತಾಂತ್ರಿಕ ಸಮಸ್ಯೆಗಳಿಂದ ಪಡಿತರ ಪಡೆಯಲು ಸಾಧ್ಯವಾಗುತ್ತಿಲ್ಲ. ಅಲ್ಲದೇ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮೀ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಿ ಹಲವಾರು ತಿಂಗಳುಗಳೇ ಗತಿಸಿದರೂ ಈವರೆಗೂ ಮಂಜೂರಾತಿ ದೊರೆತಿರುವುದಿಲ್ಲ. ಇಂತಹ ಹಲವಾರು ಸಮಸ್ಯೆಗಳಿದ್ದು ಅವುಗಳ ನಿವಾರಣೆಗೆ ವಿಶೇಷ ಶಿಬಿರ ಹಮ್ಮಿಕೊಳ್ಳುವ ಮೂಲಕ ಸ್ಥಳದಲ್ಲೇ ತಾಂತ್ರಿಕ ಸಮಸ್ಯೆಗಳ ಇತ್ಯರ್ಥಕ್ಕೆ ಮುಂದಾಗೋಣ ಎಂದರು.
ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಸಿ.ಆರ್.ಮುಂಡರಗಿ ಮಾತನಾಡಿ ಗ್ಯಾರಂಟಿಗಳ ಅನುಷ್ಟಾನ ಪ್ರತಿಶತ ನೂರರಷ್ಟು ಸಾಧನೆಗೆ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡೋಣ. ತಾಂತ್ರ್ರಿಕ ತೊಡಕುಗಳ ನಿವಾರಣೆಗೆ ಉನ್ನತ ಅಧಿಕಾರಿಗಳ ಗಮನಕ್ಕೆ ತಂದು ಶೀಘ್ರ ಸಮಸ್ಯೆ ಇತ್ಯರ್ಥಕ್ಕೆ ಶ್ರಮಿಸುವ ಮೂಲಕ ಸರ್ಕಾರದ ಉದ್ದೇಶ ಸಾಕಾರಕ್ಕೆ ಅಧಿಕಾರಿಗಳು ಶ್ರಮಿಸಬೇಕು ಎಂದು ಸೂಚಿಸಿದರು.
ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಯ್ಯ ಕೆ. ಮಾತನಾಡಿ ಕಳೆದ ಪ್ರಗತಿ ಪರೀಶೀಲನಾ ಸಭೆಯ ನಡುವಳಿಯನ್ನು ಹಾಗೂ ಆಗಿರುವ ಪ್ರಗತಿ ಅಂಕಿ ಅಂಶಗಳನ್ನು ಸಭೆಗೆ ಮಂಡಿಸುತ್ತಾ ಶೇ 100 ರಷ್ಟು ಪ್ರಗತಿ ನಮ್ಮ ಗುರಿಯಾಗಿರಲಿ. ರಾಜ್ಯದಲ್ಲಿಯೇ ಗದಗ ತಾಲೂಕು ಪಂಚ ಗ್ಯಾರಂಟಿ ಅನುಷ್ಟಾನದಲ್ಲಿ ಉನ್ನತ ಸ್ಥಾನದಲ್ಲಿರುವಂತೆ ನೋಡಿಕೊಳ್ಳೋಣ ಎಂದರು.
ಸೆಪ್ಟೆಂಬರ್ 2024ರ ಅಂತ್ಯದವರೆಗೆ ಜಿಲ್ಲೆಯಲ್ಲಿ ಗೃಹಲಕ್ಷ್ಮೀ ಯೋಜನೆಯಡಿ 248525 ನೊಂದಣಿಯಾದ ಅರ್ಜಿಗಳ ಪೈಕಿ 242603 ಅರ್ಜಿಗಳಿಗೆ ಮಂಜೂರಾತಿ ದೊರೆತಿದೆ. ಗದಗ ತಾಲೂಕಿನಲ್ಲಿ 78334 ನೊಂದಣಿಯಾದ ಅರ್ಜಿಗಳ ಪೈಕಿ 76191 ಅರ್ಜಿಗಳಿಗೆ ಮಂಜೂರಾತಿ ದೊರೆತಿದೆ. ಜಿಲ್ಲೆಯಲ್ಲಿ ವಾಕರಸಾಸಂಸ್ಥೆಯಿಂದ ದಿ:11-6-2023 ರಿಂದ 9-12-2024ರವರೆಗೆ 76920593 ಫಲಾನುಭವಿಗಳು ಶಕ್ತಿ ಯೋಜನೆಯ ಸೌಲಭ್ಯ ಪಡೆದಿದ್ದು ಸಂಸ್ಥೆಗೆ 238.77 ಕೋಟಿ ರೂ.ಆದಾಯವಾಗಿದೆ. ಅಗಸ್ಟ 2024 ರ ಮಾಹೆಯಲ್ಲಿ ಗದಗ ತಾಲೂಕಿನಲ್ಲಿ 71176 ಪಡಿತರ ಕಾರ್ಡುದಾರರಿಗೆ ಡಿ.ಬಿ.ಟಿ. ಮೂಲಕ 38734670 ರೂ. ಹಣ ಸಂದಾಯಿಸಲಾಗಿದೆ.
ಗೃಹಜ್ಯೋತಿ ಯೋಜನೆಗೆ ಗದಗ ವಿಭಾಗದಲ್ಲಿ 53268 ಸ್ಥಾವರಗಳು ಅರ್ಹವಿದ್ದು ನವೆಂಬರ್ 30 ರವರೆಗೆ 52909 ಸ್ಥಾವರಗಳ ನೊಂದಣಿಯಾಗಿದೆ. ಜಿಲ್ಲೆಯಲ್ಲಿ ಯುವನಿಧಿ ಯೋಜನೆಯಿಂದ ಅಕ್ಟೋಬರ್ -2024 ರಲ್ಲಿ 2133 ಫಲಾನುಭವಿಗಳಿಗೆ 5,01,000 ರೂ. ಡಿ.ಬಿ.ಟಿ ಮೂಲಕ ಹಣ ವರ್ಗಾಯಿಸಲಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ಒದಗಿಸಿದರು.
ಸಭೆಯಲ್ಲಿ ಸಮಿತಿ ಸದಸ್ಯರುಗಳಾದ ದಯಾನಂದ ಪವಾರ, ಸಂಗು ಕರಕಲಕಟ್ಟಿ, ಮೀನಾಕ್ಷಿ ಬೆನಕಣ್ಣವರ, ಶಂಭು ಕಾಳೆ, ನಿಂಗಪ್ಪ ದೇಸಯಿ, ಸಂಗಮೇಶ ಹಾದಿಮನಿ, ರಮೇಶ , ದೇವರೆಡ್ಡಿ ತಿರ್ಲಾಪುರ, ಮಲ್ಲಪ್ಪ ದಂಡಿನ, ಗಣೇಶ ಸಿಂಗ್ ಮಿಟಾಡಿ, ಮಲ್ಲಪ್ಪ ಬಾರಕೇರ, ಭಾಷಾ ಮಲ್ಲಸಮುದ್ರ, ಸಾವಿತ್ರಿ ಹೂಗಾರ ಪಾಲ್ಗೊಂಡು ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು. ಪಂಚ ಗ್ಯಾರಂಟಿಗಳ ಅನುಷ್ಟಾನ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.