ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಸಮುದಾಯದ ಸಮೀಕ್ಷೆ ಆರಂಭ
ಸಮೀಕ್ಷೆ ಪ್ರದೇಶಗಳಿಗೆ ಭೇಟಿ ನೀಡಿದ ಡಿಸಿ ಡಾ.ವಿಜಯಮಹಾಂತೇಶ
ಹಾವೇರಿ 05: ಗೌರವಾನ್ವಿತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್‌ದಾಸ್ ಅವರ ಏಕ ವಿಚಾರಣಾ ಆಯೋಗ ಪರಿಶಿಷ್ಟ ಜಾತಿಯ ಒಳ ಮೀಸಲಾತಿ ವರ್ಗೀಕರಣ-2025ಕ್ಕೆ ಸಂಬಂಧಿಸಿದಂತೆ, ಹಾವೇರಿ ಜಿಲ್ಲೆಯಲ್ಲಿ ಮೇ 5 ರಿಂದ ಮೂರು ಹಂತದಲ್ಲಿ ಪರಿಶಿಷ್ಟ ಜಾತಿ ಸಮುದಾಯ ವಿವಿಧ ಅಂಶಗಳ ಬಗ್ಗೆ ದತ್ತಾಂಶಗಳನ್ನು ಶೇಖರಿಸಲು ಸಮೀಕ್ಷೆ ಆರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಪರಿಶಿಷ್ಟ ಜಾತಿ ಒಳ ಮೀಸಲಾತಿ ವರ್ಗೀಕರಣ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಅಧ್ಯಕ್ಷರಾದ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ತಿಳಿಸಿದರು. ಸೋಮವಾರ ಇಜಾರಿಲಕ್ಮಾಪೂರದಲ್ಲಿ ಸಮೀಕ್ಷೆ ಕಾರ್ಯದ ಸಿಬ್ಬಂದಿಗಳೊಂದಿಗೆ ಭೋವಿ ಜನಾಂಗವಾಸಿಸುವ ಕಾಲೋನಿ ಮನೆಗಳಿಗೆ ಭೇಟಿ ನೀಡಿ, ಅಲ್ಲಿನ ಜನರೊಂದಿಗೆ ಮಾತನಾಡಿ, ಜಾತಿಗಣತಿ ಬಗ್ಗೆ ನಿಮಗೆ ಮಾಹಿತಿ ಇದೆಯಾ ನೀವು ಯಾವ ಜಾತಿಗೆ ಸೇರಿದ್ದೀರಿ, ಈ ಹಿಂದೆ ಯಾವುದಾದರು ಮೀಸಲಾತಿ ಪಡೆದುಕೊಂಡಿದ್ದೀರಾ ನಿಮ್ಮ ಬಳಿ ನಿಮ್ಮ ಜಾತಿಗೆ ಸಂಬಂದಿಸಿದ ಪ್ರಮಾಣ ಪತ್ರಗಳ ದಾಖಲೆ ಇವೇಯಾ ಎಂಬ ಮುಂತಾದ ವಿಷಯಗಳ ಕುರಿತು ಜನರಿಂದ ಮಾಹಿತಿ ಪಡೆದುಕೊಂಡರು. ಈ ಗಣತಿ ಸಮಯದಲ್ಲಿ ಗಣತಿದಾರರು ಮನೆ ಮನೆಗೆ ಭೇಟಿ ನೀಡಿ ಪರಿಶಿಷ್ಟ ಜಾತಿ ಸಮುದಾಯದ ವಿವಿಧ ಅಂಶಗಳ ಬಗ್ಗೆ ದತ್ತಾಂಶಗಳನ್ನು ಶೇಖರಿಸುತ್ತಿದ್ದಾರೆ. ಈ ಸಮಯದಲ್ಲಿ ಸಾರ್ವಜನಿಕರು ಗಣತಿದಾರರಿಗೆ ಆಧಾರ್ ಕಾರ್ಡ್, ಪಡಿತರ ಚೀಟಿ(ರೇಷನ್ ಕಾರ್ಡ್) ಮೊಬೈಲ್ ನಂಬರ್ ಕಡ್ಡಾಯವಾಗಿ ನೀಡಬೇಕು. ನಿಖರ ಮಾಹಿತಿ ನೀಡಬೇಕು ಹಾಗೂ ತಪ್ಪು ಮಾಹಿತಿ ನೀಡಬಾರದು ಎಂದು ಸಲಹೆ ನೀಡಿದರು. ವಡ್ಡರ ಓಣಿ ಜನಸಂಖ್ಯೆ ಕುರಿತ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಿಂದ ಮಾಹಿತಿ ಪಡೆದುಕೊಂಡ ಜಿಲ್ಲಾಧಿಕಾರಿಗಳು, ಪ್ರತಿಯೊಂದು ಮನೆಗೆ ಭೇಟಿ ನೀಡಿ, ಅವರುಗಳಿಗೆ ಜಾತಿ ಗಣತಿ ಎಂದರೇನು ಎಂಬುವುದನ್ನು ಮೊದಲು ಮನದಟ್ಟು ಮಾಡಿ, ಅದರ ಪ್ರಯೋಜನ ಕುರಿತು ಮಾಹಿತಿ ನೀಡಿ. ನಂತರ ಅವರ ಕುಟುಂಬ ಸದಸ್ಯರ ಸಂಪೂರ್ಣ ಮಾಹಿತಿ ಪಡೆದು ವ್ಯವಸ್ಥಿತವಾಗಿ ಮೊಬೈಲ್ ಆಪ್‌ನಲ್ಲಿ ದಾಖಲಿಸುವಂತೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರುಚಿ ಬಿಂದಲ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಪ್ರಶಾಂತ ವರಗಪ್ಪನವರ, ತಾಲೂಕಾ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಆಂಜನೇಯ ಎಚ್.ಹುಲ್ಲಾಳ ಇತರರು ಉಪಸ್ಥಿತರಿದ್ದರು.