ಬಿಸಿಲು: ಗರ್ಭಿಣಿ ಮಹಿಳೆಯರು ಮಧ್ಯಾಹ್ನ ಅವಧಿಯಲ್ಲಿ ಹೊರಹೋಗದಿರಿ

ಬಿಸಿಲು: ಗರ್ಭಿಣಿ ಮಹಿಳೆಯರು ಮಧ್ಯಾಹ್ನ ಅವಧಿಯಲ್ಲಿ ಹೊರಹೋಗದಿರಿ Sun: Pregnant women should not go out during the afternoon

ಲೋಕದರ್ಶನ ವರದಿ  

      ಬಳ್ಳಾರಿ 06:  ಜಿಲ್ಲೆಯಲ್ಲಿ ಬಿಸಿಲಿನ ಪ್ರಖರತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಧ್ಯಾಹ್ನದ ಅವಧಿಯಲ್ಲಿ ಗರ್ಭಿಣಿ ಮಹಿಳೆಯರು ಹೊರಗಡೆ ಓಡಾಡಬಾರದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರು ಹೇಳಿದರು. ಶುಕ್ರವಾರ ವಿದ್ಯಾನಗರ ಬಡಾವಣೆಯ ಕರಿಮಾರೆಮ್ಮ ದೇವಸ್ಥಾನದ ಬಳಿಯ ನಮ್ಮ ಕ್ಲಿನಿಕ್ ಗೆ ಭೇಟಿ ನೀಡಿ ಸಾರ್ವಜನಿಕರೊಂದಿಗೆ ಅವರು ಮಾತನಾಡಿದರು. 

ದಿನದಿಂದ ದಿನಕ್ಕೆ ಜಿಲ್ಲೆಯಲ್ಲಿ ಬಿಸಿಲಿನ ಪ್ರಖರತೆಯು ಹೆಚ್ಚುತ್ತಿರುವುದರಿಂದ ಮಧ್ಯಾಹ್ನ 12 ರಿಂದ 03 ಗಂಟೆ ಅವಧಿಯಲ್ಲಿ ಬಿಸಿಲಿನ ತೀವ್ರತೆಯು ಹೆಚ್ಚು ಕಂಡುಬರುತ್ತಿರುವ ಹಿನ್ನಲೆಯಲ್ಲಿ ಗರ್ಭಿಣಿ ಮಹಿಳೆಯರು ಆದಷ್ಟು ಮನೆಯಲ್ಲಿಯೇ ಇರುವ ಮೂಲಕ ಆರೋಗ್ಯದ ಕಾಳಜಿಗೆ ಒತ್ತು ನೀಡಬೇಕು. ಕುಟುಂಬದ ಸದಸ್ಯರು ಸಹ ಮುತುವರ್ಜಿ ವಹಿಸಬೇಕು ಎಂದು ತಿಳಿಸಿದರು. 

ದೇಹದಲ್ಲಿ ನೀರಿನಾಂಶದಿಂದ ಆಗಬಹುದಾದ ಅನಾನುಕೂಲತೆಗಳನ್ನು ತಡೆಗಟ್ಟಲು ಹೆಚ್ಚು ನೀರನ್ನು ಕುಡಿಯಲು ಆದ್ಯತೆ ಮಾಡಿಕೊಳ್ಳಬೇಕು. ಬೇಸಿಗೆ ಹಿನ್ನಲೆಯಲ್ಲಿ ಬಾಣಂತಿಯರು ನವಜಾತ ಶಿಶುವಿಗೆ ತಾಯಿ ಹಾಲು ಕಡಿಮೆ ಆಗಬಹುದೆಂಬ ಭಾವನೆಯಿಂದ ತಾಯಿ ಹಾಲು ಬಿಟ್ಟು ಬೇರೆ ಏನನ್ನೂ ಕೊಡಬಾರದು. ತಾಯಿ ಹಾಲಿನಲ್ಲಿ ಸಾಕಷ್ಟು ನೀರಿನಾಂಶ ಇರುವುದರಿಂದ ದಿನಕ್ಕೆ ಕನಿಷ್ಟ 10 ರಿಂದ 12 ಬಾರಿ ಅಥವಾ ಮಗು ಅತ್ತಾಗಲೆಲ್ಲಾ ಹಾಲುಣಿಸಬೇಕು ಎಂದು ತಿಳಿಸಿದರು. 

ಈಗಾಗಲೇ ಆಸ್ಪತ್ರೆಗೆ ಬರುವ ರೋಗಿಗಳು ಮತ್ತು ಅವರ ಕುಟುಂಬದ ಸದಸ್ಯರಲ್ಲಿ  ನಿರ್ಜಲೀಕರಣ ತಡೆಗಾಗಿ ಎಲ್ಲಾ ಆರೋಗ್ಯ ಕೇಂದ್ರಗಳಿಗೆ ಓ.ಆರ್‌.ಎಸ್‌. ಕಾರ್ನರ್ ಮಾಡಲು ಸೂಚಿಸಲಾಗಿದೆ. ಆಸ್ಪತ್ರೆ ಭೇಟಿ ಸಂದರ್ಭದಲ್ಲಿ ಓ.ಆರ್‌.ಎಸ್ ದ್ರಾವಣ ಸೇವಿಸುವ ಮೂಲಕ ದೇಹದಲ್ಲಿ ನಿರ್ಜಲೀಕರಣದಿಂದಾಗುವ ಅಪಾಯಗಳನ್ನು ತಪ್ಪಿಸಬಹುದಾಗಿದೆ ಎಂದರು. 

ಈಗಾಗಲೇ ಬಿಸಿಲಿನ ಶಾಖಾಘಾತದಿಂದ ಸಂಭವಿಸಬಹುದಾದ ತೊಂದರೆಯನ್ನು ತಪ್ಪಿಸಲು ತಕ್ಷಣ ಚಿಕಿತ್ಸೆ ನೀಡಲು ಜಿಲ್ಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ತಲಾ 01 ಬೆಡ್, ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ 02 ಬೆಡ್, ಜಿಲ್ಲಾ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಕನಿಷ್ಟ 5 ಬೆಡ್‌ಗಳ ಕೊಠಡಿಗಳನ್ನು ಕಾಯ್ದಿರಿಸಲು ಸೂಚಿಸಲಾಗಿದೆ ಎಂದರು. 

ಜಿಲ್ಲೆಯ ಗ್ರಾಮ ಮಟ್ಟದಲ್ಲಿರುವ ಆಯುಷ್ಮಾನ್ ಆರೋಗ್ಯ ಮಂದಿರ ಸೇರಿದಂತೆ ಎಲ್ಲ ಆರೋಗ್ಯ ಕೇಂದ್ರಗಲ್ಲಿ ಬಿಸಿಲಿನ ಶಾಖಾಘಾತದ ಚಿಕಿತ್ಸೆಗೆ ಸಂಬಂಧಿಸಿದಂತೆ ಅಗತ್ಯ ತುರ್ತು ಓಷಧಿಗಳು ಕೊರತೆಯಾಗದಂತೆ ದಾಸ್ತಾನು ಇರಿಸಿಕೊಳ್ಳಲಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ನಮ್ಮ ಕ್ಲಿನಿಕ್ ವೈದ್ಯಾಧಿಕಾರಿ ಡಾ.ಮುಜಾಮಿಲ್ ಫಿರ್ದೊಜ್, ಸಿಬ್ಬಂದಿ ಗಂಗಾ ಭವಾನಿ, ಪದ್ಮಾ, ಝೈಬಾ ನಾಜ್ ಹಾಗೂ ಸಾರ್ವಜನಿಕರು ಹಾಜರಿದ್ದರು.