ಸುಮಿತ್ರಾ ಮಹಾಜನ್ ರಾಜ್ಯದ ನೂತನ ರಾಜ್ಯಪಾಲರಾಗಲಿದ್ದಾರೆಯೇ ..?

Sumitra Mahajan

ಬೆಂಗಳೂರು, ನ 29-ಅನಾರೋಗ್ಯದಿಂದ ಬಳಲುತ್ತಿರುವ  ರಾಜ್ಯಪಾಲ  ವಜುಭಾಯ್ ವಾಲಾ  ಅವರಿಗೆ   ವಿಶ್ರಾಂತಿ  ಕಲ್ಪಿಸಿ  ಅವರ ಸ್ಥಾನದಲ್ಲಿ  ಹೊಸಬರನ್ನು  ತರಲು  ಕೇಂದ್ರ ಸರ್ಕಾರ  ಗಂಭೀರವಾಗಿ ಆಲೋಚಿಸುತ್ತಿದೆ  ಎಂಬ ಮಾತುಗಳು   ಉನ್ನತವಲಯದಲ್ಲಿ ದಟ್ಟವಾಗಿ ಕೇಳಿಬರುತ್ತಿವೆ. 

  ಹೃದ್ರೋಗದಿಂದ  ಬಳಲುತ್ತಿರುವ  ರಾಜ್ಯಪಾಲ ವಜುಬಾಯಿ ವಾಲಾ ಅವರು ಕಳೆದ ಮೂರು ದಿನಗಳಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು,  ಅವರಿಗೆ  ದೀರ್ಘ  ವಿಶ್ರಾಂತಿ  ಅಗತ್ಯವಿದೆ ಎಂದು  ವೈದ್ಯರು  ಸಲಹೆ ನೀಡಿದ್ದಾರೆ ಎನ್ನಲಾಗಿದೆ.

  2014 ರ ನವೆಂಬರ್ 1 ರಂದು ಕರ್ನಾಟಕ ರಾಜ್ಯಪಾಲರಾಗಿ ನೇಮಕಗೊಂಡ ವಿ.ಆರ್.ವಾಲಾ ಅವರು ಐದು ವರ್ಷಗಳ ಅವಧಿಯನ್ನು  ಇತ್ತೀಚಿಗೆ ಪೂರ್ಣಗೊಳಿಸಿದ್ದಾರೆ. ರಾಜ್ಯಪಾಲರಾಗಿ  ಅತ್ಯುತ್ತಮವಾಗಿ  ಕಾರ್ಯನಿರ್ವಹಿಸಿರುವ  ವಜುಬಾಯಿ ವಾಲಾ,  ಅನೇಕ ರಾಜಕೀಯ ಬಿಕ್ಕಟ್ಟುಗಳ  ನಡುವೆ ಯಾವುದೇ ವಿವಾದಕ್ಕೀಡಾಗದೆ  ಉತ್ತಮವಾಗಿ ನಿಭಾಯಿಸಿ  ಹೆಸರು ಪಡೆದುಕೊಂಡಿದ್ದಾರೆ.  

  ಹಿರಿಯ ಬಿಜೆಪಿ ನಾಯಕಿ,  ಲೋಕಸಭೆಯ  ಮಾಜಿ ಸ್ಪೀಕರ್  ಸುಮಿತ್ರಾ ಮಹಾಜನ್   ಕರ್ನಾಟಕದ ಮುಂದಿನ ರಾಜ್ಯಪಾಲ ಹುದ್ದೆ ಆಲಂಕರಿಸಲು ಉತ್ಸುಕರಾಗಿದ್ದಾರೆ ಎಂದು ವಿಶ್ವಸನೀಯ ಮೂಲಗಳು ಹೇಳಿವೆ

 ಮೂಲಗಳ ಪ್ರಕಾರ,  ಖುದ್ದು  ವಜುಬಾಯಿ ವಾಲಾ ಅವರೇ  ಅನಾರೋಗ್ಯದಿಂದ ರಾಜ್ಯಪಾಲರ  ಕರ್ತವ್ಯ ನಿರ್ವಹಿಸಲು  ಕಷ್ಟವಾಗುತ್ತಿದೆ ಎಂದು  ಪ್ರಧಾನಿ ನರೇಂದ್ರ ಮೋದಿ,  ಗೃಹ ಸಚಿವ  ಅಮಿತ್ ಷಾ ಅವರಿಗೆ  ತಿಳಿಸಿದ್ದಾರೆ  ಎನ್ನಲಾಗಿದೆ.

   ಮಹತ್ವದ  ಕರ್ನಾಟಕ  ರಾಜ್ಯಪಾಲರ  ಹುದ್ದೆಗೆ   ಹಲವು   ಪ್ರಮುಖರ ಹೆಸರುಗಳು   ಕೇಳಿಬರುತ್ತಿವೆ. ಆದರೆ   ವಿವಾದರಹಿತ ವ್ಯಕ್ತಿತ್ವ ಹೊಂದಿರುವ   ಹಿರಿಯ ಬಿಜೆಪಿ ನಾಯಕಿ,   ಮಾಜಿ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್   ಕರ್ನಾಟಕ ರಾಜಭವನ  ಪ್ರವೇಶಿಸುವ ಸಾಧ್ಯತೆಗಳು  ಹೆಚ್ಚು  ಎಂದು ಹೇಳಲಾಗುತ್ತಿದೆ