ವಿದ್ಯಾರ್ಥಿಗಳು ಛಲದೊಂದಿಗೆ ಪರೀಕ್ಷೆ ಎದುರಿಸಿ: ಯಶಸ್ವಿ ಫಲ ಸಿಗುತ್ತದೆ
ಕಂಪ್ಲಿ 14: ನಿರಂತರ ಕಲಿಕೆ ಮತ್ತು ತಂತ್ರಜ್ಞಾನದಿಂದ ಅಳವಡಿಸಿಕೊಂಡಾಗ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಸುಲಭವಾಗಿ ಎದುರಿಸಲು ಸಾಧ್ಯ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಸಿದ್ದಲಿಂಗಮೂರ್ತಿ ಹೇಳಿದರು.
ತಾಲೂಕಿನ ದೇವಲಾಪುರ ಗ್ರಾಮದ ಸರ್ಕಾರಿ ಹಿ. ಪ್ರೌಢಶಾಲೆಯಲ್ಲಿ ಶುಕ್ರವಾರ ಸರಸ್ವತಿ ಪೂಜೆ, ಶಾಲಾ ವಾರ್ಷಿಕೋತ್ಸವ ಹಾಗೂ ವರ್ಗಾವಣೆಗೊಂಡ ಶಿಕ್ಷಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಗುರಿ ಮತ್ತು ಛಲದೊಂದಿಗೆ ಪರೀಕ್ಷೆಯಲ್ಲಿ ಸಾಧನೆ ಮಾಡಲು ಸಾಧ್ಯ ಶಿಕ್ಷಕರು ನಿರಂತರವಾಗಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಜತೆಗೆ ಎಲ್ಲಾ ರಂಗದಲ್ಲಿ ಉತ್ತಮವಾಗಿ ಬೆಳೆಸುತ್ತಿದ್ದಾರೆ. ಮಕ್ಕಳು ಪಾಠದ ಜೊತೆಗೆ ಪಠ್ಯೇತರ ಚಟುವಟಿಕೆಗಳ ಪಾಲ್ಗೊಂಡು, ವಿದ್ಯಾವಂತರಾಗುತ್ತಿದ್ದಾರೆ. ತಳಮಟ್ಟದಿಂದ ಮಕ್ಕಳಿಗೆ ಶಿಕ್ಷಣದ ಬುನಾದಿ ಹಾಕಿದಾಗ ಮಾತ್ರ ಭವಿಷ್ಯ ಉಜ್ವಲವಾಗಿರುತ್ತದೆ. ಕೆಲವೊಂದು ಸರ್ಕಾರಿ ಶಾಲೆಗಳ ಕೊಠಡಿಗಳು ದುರಸ್ಥಿಗೆ ಒಳಪಟ್ಟಿರುವುದು ಗಮನಕ್ಕೆ ಬಂದಿದ್ದು, ದುರಸ್ಥಿಗೆ ಸೂಕ್ತಕ್ರಮ ಕೈಗೊಳ್ಳಲಾಗುವುದು ಎಂದರು. ಮುಖ್ಯಗುರು ಎಚ್.ಪಿ.ಸೋಮಶೇಖರ ಮಾತನಾಡಿ, ಶಿಕ್ಷಣದ ಜೊತೆ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳು ಪಾಲ್ಗೊಂಡಾಗ ಮಾತ್ರ ಎಲ್ಲಾ ವಿವಿಧ ಸಾಧನೆ ಮಾಡಲು ಸಾಧ್ಯ. ಖಾಸಗಿ ಶಾಲೆಗಳಿಗೆ ನಾವೇನು ಕಮ್ಮಿಲ್ಲ ಎಂಬಂತೆ ಸರ್ಕಾರಿ ಶಾಲಾ ಮಕ್ಕಳು ತಮ್ಮ ಪ್ರತಿಭೆಗಳನ್ನು ಹೊರ ಹಾಕುತ್ತಿರುವುದು ಮೆರಗು ಬಂದಂತಾಗಿದೆ. ಶಿಕ್ಷಣ ಎಂಬ ತೊಟ್ಟಿಲಿನಲ್ಲಿ ಬೆಳೆದು, ಒಳ್ಳೆಯ ಹುದ್ದೆಗಳನ್ನು ಪಡೆದಾಗ ಪೋಷಕರ ಹಾಗೂ ಶಿಕ್ಷಕರಿಗೆ ಖುಷಿ ತರುತ್ತದೆ. ಆ ನಿಟ್ಟಿನಲ್ಲಿ ಮಕ್ಕಳು ವಿದ್ಯೆಯನ್ನು ಪಡೆಯಬೇಕು ಎಂದರು.ಎಸ್ಡಿಎಂಸಿ ಅಧ್ಯಕ್ಷ ಕುರಿ ನಾಗೇಶ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಶಾಲೆಯಲ್ಲಿ ಸರಸ್ವತಿ ಪೂಜೆ ನೆರವೇರಿತು. ಶಾಲೆಯಿಂದ ಬೇರೆ ಕಡೆಗೆ ವರ್ಗಾವಣೆಗೊಂಡ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸುವ ಮೂಲಕ ಬೀಳ್ಡೋಡಲಾಯಿತು.
ಕಾರ್ಯಕ್ರಮದಲ್ಲಿ ಎಂ.ಎ.ನಾಗನಗೌಡ, ಪ್ರೌಢಶಾಲಾ ಅಧ್ಯಕ್ಷ ಟಿ.ಎಂ.ಬಸವರಾಜ, ಹಿ.ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಹನುಮಂತಪ್ಪ, ಇಸಿಒಗಳಾದ ರೇವಣ್ಣ, ವಿರೇಶ, ಸಿಆರ್ ಪಿಗಳಾದ ಈರೇಶ, ರೇಣುಕಾರಾಧ್ಯ, ಚಂದ್ರಯ್ಯ, ಭೂಮೇಶ, ದೊಡ್ಡಬಸಪ್ಪ, ಎನ್ ಜಿಒ ಸದಸ್ಯರಾದ ಮುದುಕಪ್ಪ, ಸುನೀತಾ, ಪ್ರೌಢಶಾಲೆಯ ಪ್ರಭಾರಿ ಮುಖ್ಯಶಿಕ್ಷಕಿ ಶಾಮಲಾ, ಎಸ್ಡಿಎಂಸಿ ಸದಸ್ಯರಾದ ದೇವರಮನೆ ತಿಮ್ಮಣ್ಣ, ಹೆಚ್.ಪರಶುರಾಮ ಸೇರಿದಂತೆ ಜನಪ್ರತಿನಿಧಿಗಳು, ಮುಖಂಡರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.