ಬದುಕಲು ಕಲಿಸುವದೇ ವಿದ್ಯಾರ್ಥಿ ಜೀವನ: ಸಂತೋಷ ಬಂಡೆ

Student life teaches you how to live: I am happy

ಬದುಕಲು ಕಲಿಸುವದೇ ವಿದ್ಯಾರ್ಥಿ ಜೀವನ: ಸಂತೋಷ ಬಂಡೆ  

ಇಂಡಿ 28: ಶಿಕ್ಷಣದಿಂದ ಸಿಗುವ ಜ್ಞಾನಾರ್ಜನೆಯು ಪ್ರತಿಯೊಬ್ಬರ ಆಸ್ತಿ. ವಿದ್ಯಾರ್ಥಿ ಬದುಕೆಂಬುದು ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುವ ಕ್ರಿಯಾಶೀಲ ಅವಧಿ. ಪುಸ್ತಕದ ವಿದ್ಯೆಯೊಂದಿಗೆ ಬದುಕನ್ನು ಕಲಿಯುವ ಕಾಲವಿದು. ಇದು ಮಕ್ಕಳ ಮೌಲ್ಯಾತ್ಮಕ ವ್ಯಕ್ತಿತ್ವ ರೂಪಿಸುವ ಪ್ರಮುಖ ಕಾಲಘಟ್ಟವಾಗಿದೆ ಎಂದು ಶಿಕ್ಷಕ ಸಾಹಿತಿ ಸಂತೋಷ ಬಂಡೆ ಹೇಳಿದರು.  

       ಗುರುವಾರದಂದು ತಾಲೂಕಿನ ಹಳಗುಣಕಿ ಗ್ರಾಮದ ಕರ್ನಾಟಕ ಪಬ್ಲಿಕ್ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ 7 ನೇ ವರ್ಗದ ವಿದ್ಯಾರ್ಥಿಗಳ ಶುಭ ಕೋರುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.  

          ವಿದ್ಯಾರ್ಥಿಗಳು ಶ್ರಮವಹಿಸಿ ಅಧ್ಯಯನ ಮಾಡುವ ಪ್ರವೃತ್ತಿಯನ್ನು ರೂಢಿಸಿಕೊಳ್ಳುವ ಜೊತೆಗೆ ಸ್ವಾವಲಂಬಿ ಬದುಕಿಗೆ ಅಗತ್ಯವಾದ ಮಾನವೀಯ ಮೌಲ್ಯ ಮತ್ತು ಜೀವನ ಕೌಶಲ್ಯ ಬೆಳೆಸಿಕೊಂಡು ದೇಶದ ಉತ್ತಮ ಪ್ರಜೆಗಳಾಗಬೇಕು ಎಂದು ಹೇಳಿದರು.  

        ಮಕ್ಕಳಿಗೆ ಆಚಾರ, ವಿಚಾರ ಕಲಿಸಿ ಉತ್ತಮ ಸಂಸ್ಕಾರ ನೀಡುವ ಜತೆಗೆ ಅಕ್ಷರಾಭ್ಯಾಸ ಮಾಡಲು ಮನೆಯಲ್ಲಿ ಉತ್ತಮ ವಾತಾವರಣ ಕಲ್ಪಿಸಬೇಕು. ವಿದ್ಯಾರ್ಥಿ ದೆಸೆಯಲ್ಲಿ ಅಡ್ಡದಾರಿ ಹಿಡಿದು ಬದುಕನ್ನು ಖೆಡ್ಡದಲ್ಲಿ ಕೆಡವಿಕೊಳ್ಳುವುದು ಬೇಡ. ಪಾಲಕರ ಪ್ರೀತಿ, ಗುರುವೃಂದದ ಮಾರ್ಗದರ್ಶನ, ವಿದ್ಯಾರ್ಥಿಗಳ ನಿರಂತರ ಪರಿಶ್ರಮದಿಂದ ಖಂಡಿತ ಗುರಿ ತಲುಪಲು ಸಾಧ್ಯ ಎಂದು ಹೇಳಿದರು.  

        ಶಿಕ್ಷಕಿ ಸವಿತಾ ಹಾದಿಮನಿ ಮಾತನಾಡಿ, ಇಂದಿನ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣದ ಜತೆಗೆ ಒಳ್ಳೆಯ ಸಂಸ್ಕಾರ ನೀಡುವುದು ತಂದೆ-ತಾಯಿಗಳ ಮುಖ್ಯ ಆಧ್ಯತೆಯಾಗಬೇಕು ಎಂದು ಹೇಳಿದರು.  

       ಮುಖ್ಯ ಶಿಕ್ಷಕ ಸಿ ಎಸ್ ಹೆಗಡ್ಯಾಳ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ಡಿ ಸಿ ಹರಿಜನ ಕಾರ್ಯಕ್ರಮ ನಿರ್ವಹಿಸಿದರು. ಎಸ್ ಎಸ್ ಬಿರಾದಾರ ಸ್ವಾಗತಿಸಿದರು. ಕವಿತಾ ತೋಟದ ವಂದಿಸಿದರು. ಎಸ್ ಡಿ ಎಂ ಸಿ ಸದಸ್ಯೆ   

ಸುಮಿತ್ರಾ ತಾಂಬೆ, ಶಿಕ್ಷಕರಾದ ಎಸ್ ವ್ಹಿ ಪೂಜಾರಿ, ಅರಶುಲ್ ನಿಧಾ ಹಾಗೂ ಅತಿಥಿ ಶಿಕ್ಷಕರಾದ ಕೆ ಡಿ ಕುಂಬಾರ, ಎಸ್ ಕೆ ಮಡಿವಾಳ, ಭಾಗ್ಯಶ್ರೀ ಪೂಜಾರಿ ಸೇರಿದಂತೆ ಶಾಲಾ ಮಕ್ಕಳು ಭಾಗವಹಿಸಿದ್ದರು. ಮಕ್ಕಳು ತಮ್ಮ ಅನಿಸಿಕೆಗಳನ್ನು ತಿಳಿಸಿದರು. ವಿಶೇಷ ಪ್ರತಿಭಾವಂತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.