ಕ್ರಷರ್‌ಗಳಿಗೆ ಅನುಮತಿ ನೀಡುವಾಗ ಕಟ್ಟುನಿಟ್ಟಿನ ನಿಯಮ ಪಾಲಿಸಿ: ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ
ಕಾರವಾರ 24: ಜಿಲ್ಲೆಯಲ್ಲಿ ಕಲ್ಲು ಕ್ರಷರ್‌ಗಳಿಗೆ ಅನುಮತಿ ನೀಡುವ ಮುನ್ನ ಕ್ರಷರ್ ಅಧಿನಿಯಮದಲ್ಲಿನ ಸರ‌್ಷಕಿತ ವಲಯ ಕುರಿತಂತೆ ರೂಪಿಸಿರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಸೂಚಿಸಿದರು.
ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ, ಜಿಲ್ಲಾ ಕಲ್ಲುಪುಡಿ ಮಾಡುವ ಘಟಕಗಳ ಲೈಸೆನ್ಸ್ ನೀಡುವಿಕೆ ಹಾಗೂ ನಿಯಂತ್ರಣ ಪ್ರಾಧಿಕಾರ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕಲ್ಲು ಕ್ರಶರ್‌ಗಳು ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಯಿಂದ ನಿಗಧಿಪಡಿಸಿದ ಅಂತರದಲ್ಲಿ ಇರಬೇಕು, ಜಿಲ್ಲಾ ರಸ್ತೆಯಿಂದ ಮತ್ತು ಇತರೆ ರಸ್ತೆಯಿಂದ, ಕಂದಾಯ ಗ್ರಾಮ, ದೇವಸ್ಥಾನ, ಶಾಲೆಯಿಂದ ನಿಗಧಿತ ದೂರದಲ್ಲಿರುವುದರ ಬಗ್ಗೆ ಸ್ಥಳ ಪರೀಶೀಲಿಸಿ, ಲಿಖಿತ ಆಭಿಪ್ರಾಯ ದಾಖಲಿಸಬೇಕು. ಕ್ರಷರ್‌ಗಳಿಂದ ಸಾರ್ವಜನಿಕರು ಮತ್ತು ಪರಿಸರಕ್ಕೆ ಯಾವುದೇ ತೊಂದರೆಯಾಗದಂತೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಅನುಮತಿಗಳನ್ನು ನೀಡುವಂತೆ ತಿಳಿಸಿದರು.ಜಿಲ್ಲೆಯಲ್ಲಿ ಪ್ರಸ್ತುತ ಈಗಾಗಲೇ ಕ್ರಶರ್‌ಗಳಿಗೆ ಅನುಮತಿ ಪಡೆದು ಲೈಸೆನ್ಸ್ ನವೀಕರಣ ಕೋರುವ ಅರ್ಜಿಗಳ ಕುರಿತಂತೆ ಸಂಬಂಧಪಟ್ಟ ದಾಖಲೆಗಳನ್ನು ಕೂಲಂಕುಷವಾಗಿ ಪರೀಶೀಲಿಸಿ, ಕಡ್ಡಾಯವಾಗಿ ಸ್ಥಳ ಪರೀಶೀಲನೆ ನಡೆಸುವಂತೆ ಸೂಚಿಸಿದರು.ಜಿಲ್ಲೆಯಲ್ಲಿ ಪ್ರಸ್ತುತ ಸಾಲಿನಲ್ಲಿ ಉಪ ಖನಿಜ ಗಣಿಗಾರಿಕೆ, ಸಾಗಾಣಿಕೆ, ದಾಸ್ತಾನು ಸಂಬಂಧಿಸಿದಂತೆ ಒಟ್ಟು 205 ಪ್ರಕರಣಗಳನ್ನು ಪತ್ತೆಹಚ್ಚಿ ರೂ.63.53 ಲಕ್ಷ ದಂಡ ವಿಧಿಸಲಾಗಿದೆ. ಅಕ್ರಮವಾಗಿ ಮರಳು ದಾಸ್ತಾನು ಮಾಡಿರುವ 9 ಪ್ರಕರಣಗಳನ್ನು ಪತ್ತೆ ಹಚ್ಚಿ ಅಂದಾಜು 529 ಮೆ. ಟನ್ ಮರಳನ್ನು ಜಫ್ತುಪಡಿಸಿ ಸರ್ಕಾರಿ ಕಾಮಗಾರಿಗಳಿಗೆ ಹಸ್ತಾಂತರಿಸಲಾಗಿದೆ.
ಜಿಲ್ಲೆಯಾದ್ಯಂತ ನಡೆಯುವ ಅನಧಿಕೃತ ಉಪ ಖನಿಜ ಗಣಿಗಾರಿಕೆ, ಸಾಗಾಣಿಕೆ, ದಾಸ್ತಾನು ಚಟುವಟಿಕೆ ತಡೆಗಟ್ಟಲು ಚಾಲಿತ ದಳಗಳನ್ನು ರಚಿಸಲಾಗಿದೆ ಎಂದು ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿ ಆಶಾ ಮಾಹಿತಿ ನೀಡಿದರು.ಸಭೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್, ಉಪ ವಿಭಾಗಾಧಿಕಾರಿ ಕನಿಷ್ಕ, ಡಿವೈಎಸ್‌ಪಿ ಗೀರೀಶ್ ಮತ್ತಿತರರು ಭಾಗವಹಿಸಿದ್ದರು.