ಮೈಕ್ರೋ ಫೈನಾನ್ಸ್ಗಳು ಆರ್.ಬಿ,ಐ ಮಾರ್ಗಸೂಚಿ ಉಲ್ಲಂಘಸಿದಲ್ಲಿ ಕಠಿಣ ಕ್ರಮ ; ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ
ಕಾರವಾರ 04 :- ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮೈಕ್ರೋ ಫೈನಾನ್ಸ್ಗಳು, ಲೇವಾದೇವಿ ವ್ಯವಹಾರಸ್ಥರು, ಮೈಕ್ರೋ ಫೈನಾನ್ಸ್ ಹಣಕಾಸು ಸಂಸ್ಥೆಗಳು ಭಾರತೀಯ ರಿಸರ್ವ್ ಬ್ಯಾಂಕ್ನ ಮಾರ್ಗಸೂಚಿ ಹಾಗೂ ನಿಯಮಗಳನ್ನು ಉಲ್ಲಂಘಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಎಚ್ಚರಿಕೆ ನೀಡಿದರು. ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ನಿಯಂತ್ರಣದ ಕುರಿತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ರಾಜ್ಯದಾದ್ಯಂತ ಮೈಕ್ರೋ ಫೈನಾನ್ಸ್ಗಳಲ್ಲಿ ಸಾಲ ಪಡೆದ ಗ್ರಾಹಕರಿಗೆ ಕಿರುಕುಳದಂತಹ ಪ್ರಕರಣಗಳು ಅಧಿಕವಾಗಿವೆ. ಇದಕ್ಕೆಲ್ಲಾ ಕಾರಣ ಆರ್.ಬಿ.ಐ ಮಾರ್ಗಸೂಚಿಗಳು ಹಾಗೂ ನಿಯಮಗಳ ಪಾಲಿಸದೇ ಇರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ ಎಂದರು.
ಮೈಕ್ರೋ ಫೈನಾನ್ಸ್ಗಳು ಸಾಲ ಕೊಡುವ ಮುನ್ನ ಸಾಲಗಾರರ ಕುಟುಂಬದ ಆದಾಯ ಸೇರಿದಂತೆ ಮತ್ತಿತರ ಪೂರ್ವಾಪರಗಳನ್ನು ಪರೀಶೀಲನೆಯನ್ನು ಮಾಡಿ, ಅವರ ಆದಾಯದ ಶೇ. 50 ರಷ್ಟು ಮಾತ್ರ ಸಾಲ ನೀಡಬೇಕು. ಆದರೆ, ಅವರು ಸಾಲ ತೆಗೆದುಕೊಳ್ಳುವ ಸಾಮರ್ಥ್ಯ ನೋಡದೇ ಸಾಲವನ್ನು ನೀಡುತ್ತಿರುವುದು ಕಂಡುಬರುತ್ತಿದ್ದು , ಇದಕ್ಕೆ ಆಸ್ಪದ ನೀಡಬಾರದು. ಸಾಲ ನೀಡುವವರು ಹಾಗೂ ತೆಗೆದುಕೊಳ್ಳುವವರು ಇಬ್ಬರೂ ಸಹ ಆರ್ಥಿಕ ಶಿಸ್ತನ್ನು ಪಾಲಿಸಬೇಕು ಎಂದರು.
ಆರ್.ಬಿ.ಐ ಮಾರ್ಗಸೂಚಿಯ ಪ್ರಕಾರ ಮೈಕ್ರೋ ಫೈನಾನ್ಸ್ಗಳು ರೂ. 3 ಲಕ್ಷದವರೆಗೆ ಮಾತ್ರ ಸಾಲ ನೀಡಲು ಅವಕಾಶವಿದೆ. ಸಾಲ ಮರುಪಾವತಿಯನ್ನು ಕಾನೂನಿನ ಅನ್ವಯ ಕ್ರಮಗಳನ್ನು ಕೈಗೊಳ್ಳಬೇಕು. ಒಬ್ಬನೇ ವ್ಯಕ್ತಿಗೆ ಹಲವು ಸಾಲಗಳನ್ನು ನೀಡಬಾರದು. ಸಾಲ ಮತ್ತು ಬಡ್ಡಿಯ ವಿವರಗಳನ್ನು ಸ್ಪಷ್ಟವಾಗಿ ತಿಳಿಸಿ, ಒಪ್ಪಿಗೆ ಪತ್ರ ಪಡೆದು ಸಾಲ ನೀಡಬೇಕು. ಕಾನೂನನ್ನು ಉಲ್ಲಂಘಿಸಿ, ಸಾಲಗಾರರ ಮೇಲೆ ದೌರ್ಜನ್ಯ, ಅವರ ಗೌರವಕ್ಕೆ ಧಕ್ಕೆಯಾಗುವಂತೆ ಕೆಟ್ಟ ಪದಗಳಲ್ಲಿ ಬೈಯುವುದು, ಫೋನ್ ಮಾಡಿ ಬೆದರಿಸುವುದು, ದಬ್ಬಾಳಿಕೆ, ಕಿರುಕುಳ ನೀಡುವುದು ಮಾಡಿದ್ದಲ್ಲಿ ಅಂತಹವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಎಂ.ಮಾತನಾಡಿ, ಜಿಲ್ಲೆಯಲ್ಲಿ 201 ಮೈಕ್ರೋ ಫೈನಾನ್ಸ್ ಸಂಸ್ಥೆಗಳಿದ್ದು, ಹಳಿಯಾಳ, ಜೋಯಿಡಾ, ಮುಂಡಗೋಡ, ಸಿದ್ದಾಪುರ, ಬನವಾಸಿ ಭಾಗದಲ್ಲಿ ಮೀಟರ್ ಬಡ್ಡಿ ನಡೆಯುತ್ತಿದೆ. ಸಾಲ ನೀಡುವ ಮತ್ತು ವಸೂಲಿ ಮಾಡುವ ಕ್ರಮಗಳು ಸರಳವಾಗಿ ಆಗಬೇಕು. ಸಾಲ ವಸೂಲಾತಿಗಾಗಿ ಫೈನಾನ್ಸ್ ಕಂಪನಿಗಳು ಬೆಳಗ್ಗೆ 9ಗಂಟೆಗೂ ಮುನ್ನ ಸಂಜೆ 6 ರ ನಂತರ ಸಾಲಗಾರರ ಮನೆಗೆ ಹೋಗಬಾರದು. ಯಾವುದೇ ರೀತಿಯ ದೌರ್ಜನ್ಯಗಳನ್ನು ನಡೆಸಬಾರದು. ಜಿಲ್ಲೆಯಲ್ಲಿ ಇದುವರೆಗೂ 7 ಪ್ರಕರಣ ದಾಖಲಿಸಿ, 37 ಲಕ್ಷ ವಶಪಡಿಸಿಕೊಳ್ಳಲಾಗಿದ್ದು, ಸಾಲ ವಸೂಲಿಗಾಗಿ ಕ್ರಿಮಿನಲ್ಗಳನ್ನು ಬಳಸಿಕೊಂಡಲ್ಲಿ ಕಾನೂನು ಉಲ್ಲಂಘಿಸಿದ್ದಲ್ಲಿ ಅಂತಹವರ ಮೇಲೆ ನಿರ್ದ್ಯಾಕ್ಷಿಣ್ಯವಾಗಿ ಕಾನೂನಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಭೆಯಲ್ಲಿ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಜಗದೀಶ್, ಲೀಡ್ ಬ್ಯಾಂಕ್ ಮೆನೇಜರ್ ಭಾರತಿ ವಸಂತ್, ಸಹಕಾರ ಇಲಾಖೆ ಸಹಾಯಕ ನಿಬಂಧಕ ಶ್ರೀನಿವಾಸ್ ಸಜ್ಜನ, ವಿವಿಧ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.