ತುಂಗಭದ್ರಾ ನದಿಗೆ ಬಿಡುತ್ತಿರುವ ಕೆಮಿಕಲ್ ಮಿಶ್ರಿತ ನೀರು ತಡೆಯಿರಿ
ರಾಣೇಬೆನ್ನೂರ 18: ತಾಲೂಕಿನ ಕೋಡಿಯಾಲ ಹೊಸಪೇಟೆಯ ಸಿಮೆಂಟ್ ಕಂಪನಿಯಿಂದ ತುಂಗಭದ್ರಾ ನದಿಗೆ ಬಿಡುತ್ತಿರುವ ಕೆಮಿಕಲ್ ಮಿಶ್ರಿತ ನೀರನ್ನು ತಡೆಯಬೇಕು ಎಂದು ಒತ್ತಾಯಿಸಿ ತಾಲೂಕಿನ ನದಿಹರಳಹಳ್ಳಿ ಗ್ರಾಮಸ್ಥರು ಶುಕ್ರವಾರ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಮಮತಾ ಹೊಸಗೌಡ್ರ ಮೂಲಕ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಮನವಿ ಸಲ್ಲಿಸಿದರು.ಕಂಪನಿಯ ನೀರನ್ನು ನದಿಗೆ ಬಿಡುತ್ತಿರುವ ಕಾರಣ ನೀರು ಕಲುಷಿತಗೊಳ್ಳುತ್ತಿದೆ. ಅಲ್ಲದೆ, ಕೋಡಿಯಾಲ ಹೊಸಪೇಟೆಯಲ್ಲಿ ನೀರು ನದಿಗೆ ಸೇರಿದರೆ ಮೊದಲು ನದಿಹರಳಹಳ್ಳಿ ಗ್ರಾಮಕ್ಕೆ ಬರುತ್ತದೆ. ಕಲುಷಿತ ನೀರು ಸೇವನೆಯಿಂದ ಗ್ರಾಮದಲ್ಲಿ ಅಂಗವಿಕಲತೆ, ಪಾರ್ಶ್ವವಾಯು, ಚರ್ಮರೋಗ, ಗರ್ಭಕೋಶದ ತೊಂದರೆ ಸೇರಿ ನಾನಾ ಸಮಸ್ಯೆ ಎದುರಿಸುವಂತಾಗಿದೆ. ಕೃಷಿ ಜಮೀನಿನಲ್ಲಿ ಬಿತ್ತನೆ ಮಾಡಿದ ಬೆಳೆಗಳು ವಿಷಪೂರಿತ ಆಗುತ್ತಿವೆ. ಕಂಪನಿಯಿಂದ ಹೊರಸೂಸುವ ಹೊಗೆ ಬೆಳೆಗಳ ಮೇಲೆ ಕುಳಿತು ಬೆಳೆ ಬಾರದಂತಹ ಪರಿಸ್ಥಿತಿ ನಿರ್ವಣವಾಗಿದೆ. ಗ್ರಾಮಸ್ಥರು ಶ್ವಾಸಕೋಶದ ತೊಂದರೆ ಅನುಭವಿಸುವಂತಾಗಿದೆ. ಆದ್ದರಿಂದ ಜಿಲ್ಲಾಡಳಿತ ಕೂಡಲೇ ಸೂಕ್ತ ಕ್ರಮ ಕೈಗೊಂಡು ಕಂಪನಿಯಿಂದ ಕಲುಷಿತ ನೀರನ್ನು ನದಿಗೆ ಬೀಡದಂತೆ ತಡೆಯಬೇಕು. ಕಂಪನಿಯಿಂದ ರೈತರಿಗೆ ಆಗುತ್ತಿರುವ ನಷ್ಟಕ್ಕೆ ಅವರನ್ನೇ ಹೊಣೆ ಮಾಡಿ ರೈತರಿಗೆ ಪರಿಹಾರ ಕೊಡಿಸಬೇಕು ಎಂದು ಒತ್ತಾಯಿಸಿದರು.ಗ್ರಾಮದ ವಕೀಲ ಶಿವನಗೌಡ ಕೋಟೆಗೌಡರ, ಸಿದ್ದಪ್ಪ ಬೂದನೂರ, ಪ್ರಕಾಶ ಪುಟ್ಟಪ್ಪನವರ, ಗುರು ಮೇಗಳಮನಿ, ಪ್ರಕಾಶ ಹರವಿ, ನಾಗರಾಜ ಮುದಕಪ್ಪನವರ, ಓಂಪ್ರಕಾಶ ಹರವಿ, ಚೇತನ ನೇಕಾರ, ನಾಗರಾಜ ಪೇಮನಹಳ್ಳಿ ಮತ್ತಿತರರು ಉಪಸ್ಥಿತರಿದ್ದರು.