ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶ್ರೀನಿವಾಸ ಮಾನೆ ಭೂಮಿಪೂಜೆ

Srinivasa Mane Bhumi Puja for road development works


ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ  ಶ್ರೀನಿವಾಸ ಮಾನೆ ಭೂಮಿಪೂಜೆ  

ಹಾನಗಲ್ 25: ತಾಲೂಕಿನ ಅಕ್ಕಿಆಲೂರಿನ ಹಲವೆಡೆಗಳಲ್ಲಿ ಪ್ರಸಕ್ತ ಸಾಲಿನ ಲೆಕ್ಕ ಶೀರ್ಷಿಕೆ 3054 ಮುಖ್ಯಮಂತ್ರಿಗಳ ವಿಶೇಷ ಮಂಜೂರಾತಿ ಕಾರ್ಯಕ್ರಮದಡಿ ಒಟ್ಟು 75 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಶ್ರೀನಿವಾಸ ಮಾನೆ ಭೂಮಿಪೂಜೆ ನೆರವೇರಿಸಿದರು. 

      ಈ ಸಂದರ್ಭದಲ್ಲಿ ಶಾಸಕ ಮಾನೆ, ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳ ಜಾರಿಯ ಹೊರತಾಗಿಯೂ ಸಹ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ರಾಜ್ಯ ಸರ್ಕಾರ ಅನುದಾನ ದೊರಕಿಸುತ್ತಿದೆ. ಗ್ಯಾರಂಟಿ ಯೋಜನೆಗಳಿಗೆ ದೊಡ್ಡ ಪ್ರಮಾಣದ ಹಣ ವ್ಯಯವಾಗುತ್ತಿರುವ ಹಿನ್ನೆಲೆಯಲ್ಲಿ ಅಭಿವೃದ್ಧಿ ಕಾರ್ಯಗಳ ಅನುಷ್ಠಾನಕ್ಕೆ ಸಹಜವಾಗಿ ಸ್ವಲ್ಪಮಟ್ಟಿನ ಹಿನ್ನಡೆ ಆಗಲಿದೆ. ನೇರವಾಗಿ ಫಲಾನುಭವಿಗಳ ಖಾತೆಗೆ ಯಾವುದೇ ಮಧ್ಯವರ್ತಿಗಳ ಕಾಟ ಇಲ್ಲದೇ ನೇರವಾಗಿ ಬಹುದೊಡ್ಡ ಪ್ರಮಾಣದ ನೆರವು ಗೃಹಲಕ್ಷ್ಮೀ, ಅನ್ನಭಾಗ್ಯ, ಯುವನಿಧಿ ಯೋಜನೆಗಳ ಮೂಲಕ ಸಿಗುತ್ತಿದೆ. ಶಕ್ತಿ, ಗೃಹಜ್ಯೋತಿ ಯೋಜನೆಗಳ ಲಾಭವೂ ಸಿಗುತ್ತಿದೆ. ತಾಲ್ಲೂಕಿನಲ್ಲಿ ಅಗತ್ಯವಿದ್ದಲ್ಲಿ ರಸ್ತೆ ನಿರ್ಮಾಣ, ಸಾರ್ವಜನಿಕರ ನೆಮ್ಮದಿಯ ಜೀವನಕ್ಕೆ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಗಮನ ನೀಡಲಾಗಿದೆ. ಮುಖ್ಯವಾಗಿ ಸಾಕಷ್ಟು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ರಸ್ತೆ ನಿರ್ಮಾಣ ಕಾಮಗಾರಿಗಳನ್ನೂ ಸಹ ಕೈಗೆತ್ತಿಕೊಳ್ಳಲಾಗಿದೆ. ಗ್ರಾಮೀಣ ಜನರ ಬದುಕು ಹಸನಾಗಿಸುವ ನಿಟ್ಟಿನಲ್ಲಿ ಕಾಳಜಿ ವಹಿಸಲಾಗಿದೆ ಎಂದು ತಿಳಿಸಿದರು. 

  ಗ್ರಾಪಂ ಅಧ್ಯಕ್ಷ ಮಕ್ಬೂಲ್‌ಅಹ್ಮದ್ ರುಸ್ತುಂಖಾನವರ, ಜಿಪಂ ಮಾಜಿ ಸದಸ್ಯ ಟಾಕನಗೌಡ ಪಾಟೀಲ, ತಾಪಂ ಮಾಜಿ ಅಧ್ಯಕ್ಷ ಎಲ್‌.ಕೆ.ಶೇಷಗಿರಿ, ಮಾಜಿ ಸದಸ್ಯ ಮೆಹಬೂಬಅಲಿ ಬ್ಯಾಡಗಿ, ಸತ್ತಾರಸಾಬ ಅರಳೇಶ್ವರ ಸೇರಿದಂತೆ ಗ್ರಾಪಂ ಸದಸ್ಯರು, ಮುಖಂಡರು ಇದ್ದರು.