ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಉತ್ಸವ- ಸಿದ್ಧಾಂತ ಶಿಖಾಮಣಿ ಬದುಕಿಗೆ ಮಾರ್ಗದರ್ಶಿ ವೀರಶೈವ: ಡಾ.ಎಸ್‌.ಎಂ.ಗಂಗಾಧರಯ್ಯ

Sri Jagadguru Renukacharya Jayanti Festival - Siddhanta Shikhamani is a guide to life, Veerashaiva:

ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಉತ್ಸವ- ಸಿದ್ಧಾಂತ ಶಿಖಾಮಣಿ ಬದುಕಿಗೆ ಮಾರ್ಗದರ್ಶಿ ವೀರಶೈವ: ಡಾ.ಎಸ್‌.ಎಂ.ಗಂಗಾಧರಯ್ಯ

ಬೆಳಗಾವಿ, ಮಾ.16 : ಜಗದ್ಗುರು ರೇಣುಕಾಚಾರ್ಯರ ಸಿದ್ಧಾಂತ ಶಿಖಾಮಣಿ ಪುಸ್ತಕ ಓದಿ ತಿಳಿದುಕೊಂಡವರ ಜೀವನ ಅದ್ಭುತ ದಾರಿಯಲ್ಲಿ ಸಾಗುತ್ತದೆ ಎಂದು ವಿಜಯಪುರ ಸ್ನಾತಕೋತ್ತರ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ.ಎಸ್‌.ಎಂ. ಗಂಗಾಧರಯ್ಯ ಅವರು ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಂಯುಕ್ತ ಆಶ್ರಯದಲ್ಲಿ ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಭಾನುವಾರ (ಮಾ.16) ಆಯೋಜಿಸಲಾಗಿದ್ದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಉತ್ಸವ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.ವೀರಶೈವ ಲಿಂಗಾಯತ ಮಠಗಳು ಎಲ್ಲ ಸಮಾಜದ ಜನರಿಗೆ ಅನ್ನ ಮತ್ತು ಆಶ್ರಯಗಳನ್ನು ನೀಡುತ್ತ ಬಂದಿವೆ. ಉತ್ತರ ಕರ್ನಾಟಕದ ಮಠಗಳ ಕಾರ್ಯ ತುಂಬಾ ಮೆಚ್ಚುವಂತದ್ದು, ಹೀಗೆ ವೀರಶೈವ ಲಿಂಗಾಯತ ಸಮಾಜ ಎಲ್ಲ ಸಮಾಜದ ಜನರೊಂದಿಗೆ ಒಂದಾಗಿ ನಡೆಯಬೇಕು ಮತ್ತು ಎಲ್ಲ ಸಮಾಜದ ಜನರು ಶ್ರೀ ಜಗದ್ಗುರು ರೇಣುಕಾಚಾರ್ಯರ ಬಗ್ಗೆ ತಿಳಿದುಕೊಳ್ಳಬೇಕು. ಸಿದ್ಧಾಂತ ಶಿಖಾಮಣಿನ್ನು ಓದಿ ತಿಳಿದುಕೊಂಡರೆ ಎಲ್ಲ ವಿಷಯಗಳ ಬಗ್ಗೆ ತಿಳಿಯುತ್ತದೆ ಎಂದು ಹೇಳಿದರು.ವೀರಶೈವರಲ್ಲಿ ಶ್ರೇಣೀಕೃತ ವ್ಯವಸ್ಥೆ ಇದೆ ಎನ್ನುವವರು ಶ್ರೀ ಜಗದ್ಗುರು ರೇಣುಕಾಚಾರ್ಯರ ಸಿದ್ಧಾಂತ ಶಿಖಾಮಣಿಯನ್ನು ಓದಿ ತಿಳಿದುಕೊಂಡರೆ ವೀರಶೈವದಲ್ಲಿ ಶ್ರೇಣೀಕೃತ ವ್ಯವಸ್ಥೆ ಇಲ್ಲ ಎಂಬುದು ಗೊತ್ತಾಗುತ್ತದೆ. ವೀರಶೈವ ಸಮಾಜದ ಎಲ್ಲ ಜನರು ಮೊದಲು ಒಂದಾಗಬೇಕು, ಲಿಂಗ ಧರಿಸಬೇಕು, ವಿಭೂತಿ ಹಚ್ಚಬೇಕು ಶಿವನ ಧ್ಯಾನ ಮಾಡಬೇಕು ಮತ್ತು ಸಿದ್ಧಾಂತ ಶಿಖಾಮಣಿ ಹಾಗೂ ಶರಣರ ವಚನಗಳನ್ನು ತಮ್ಮ ಮಕ್ಕಳಿಗೆ ಓದಲು ಹೇಳಬೇಕು ಎಂದು ಗಂಗಾಧರಯ್ಯ ತಿಳಿಸಿದರು.ಹುಕ್ಕೇರಿ ಮಠದ ಚಂದ್ರಶೇಖರ ಮಹಾಸ್ವಾಮಿಗಳು, ಕಾರಂಜಿ ಮಠದ ಗುರುಸಿದ್ಧ ಮಹಾಸ್ವಾಮಿಗಳು, ನಾಗನೂರು ರುದ್ರಾಕ್ಷಿಮಠದ ಅಲ್ಲಮಪ್ರಭು ಮಹಾಸ್ವಾಮಿಗಳು, ಅರಳಿಕಟ್ಟೆಯ ತೋಂಟದಾರ್ಯ ವಿರಕ್ತ ಮಠದ ಶಿವಮೂರ್ತಿ ಮಹಾಸ್ವಾಮಿಗಳು ಹಾಗೂ ಹುಣಶೀಕಟ್ಟಿ ಹಿರೇಮಠದ ಬಸವರಾಜ ದೇವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಉತ್ಸವ ಸಮಿತಿಯ ಗೌರವಾಧ್ಯಕ್ಷಕ ಮಹಾಂತೇಶ ಕವಟಗಿಮಠ, ಜಿಲ್ಲಾ ಅಧ್ಯಕ್ಷ ಚಂದ್ರಶೇಖರರಯ್ಯ ಸವಡಿ (ಸಾಲಿಮಠ) , ಕಲ್ಲಪ್ಪ ಗಾಣಗೇರ, ವಿಜಯ ಜಾಧವ, ಎಂ.ಬಿ. ಜಿರಲಿ, ರತ್ನಪ್ರಭಾ ಬೆಲ್ಲದ, ನೀಲಗಂಗಾ ಚರಂತಿಮಠ, ಸಿ.ಬಿ ಸಂಗೊಳ್ಳಿ, ಪತ್ರಕರ್ತರಾದ ಶ್ರೀಶೈಲ್ ಮಠದ, ಬಸವರಾಜ ಹಳಂಗಡಿ ಹಾಗೂ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಭವ್ಯ ಮೆರವಣಿಗೆ:ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಉತ್ಸವದ ಅಂಗವಾಗಿ ಚನ್ನಮ್ಮ ವೃತ್ತದಲ್ಲಿ ರೇಣುಕಾಚಾರ್ಯ ಭಾವಚಿತ್ರಕ್ಕೆ ವಿಶೇಷ ಪೂಜೆ ನೆರವೇರಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು.ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ವಿವಿಧ ಮಠಾಧೀಶರು ಕನ್ನಡ ಸಂಸ್ಕೃತ ಇಲಾಖೆ ಉಪ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ ಇಲಾಖೆ ಸಮಾಜದ ಮುಖಂಡರು ಉಪಸ್ಥಿತರಿದ್ದರು. ಚನ್ನಮ್ಮ ವೃತ್ತದಿಂದ ಆರಂಭಗೊಂಡ ಮೆರವಣಿಗೆಯು ಬಿಮ್ಸ್‌ ಹಾಗೂ ಕೃಷ್ಣ ದೇವರಾಯ ವೃತ್ತದ ಮೂಲಕ ರಂಗಮಂದಿರದವರೆಗೆ ನಡೆಯಿತು.