ಶಾಂತಿಯುತ ಬದುಕಿಗಾಗಿ ಆಧ್ಯಾತ್ಮಿಕ ಚಿಂತನೆ ಎಲ್ಲರಿಗೂ ಅವಶ್ಯಕ : ಶಿವಾಚಾರ್ಯ ಸ್ವಾಮಿ
ಕಂಪ್ಲಿ 28: ಶಾಂತಿಯುತ ಬದುಕಿಗಾಗಿ ಆಧ್ಯಾತ್ಮಿಕ ಚಿಂತನೆ ಎಲ್ಲರಿಗೂ ಅವಶ್ಯಕ. ಈ ನಿಟ್ಟಿನಲ್ಲಿ ಇಂತಹ ಧಾರ್ಮಿಕ ಸಭೆಗಳು ಜನರಿಗೆ ಉತ್ತಮ ಮಾರ್ಗದರ್ಶನ ನೀಡುತ್ತವೆ ಎಂದು ಗಿರಿವಾರ ಶ್ರೀ ವೇ.ಮೂ.ಶಿವಾಚಾರ್ಯ ಸ್ವಾಮಿ ಹೇಳಿದರು. ಪಟ್ಟಣದ ಶ್ರೀ ಗೊಗ್ಗ ಬಸಯ್ಯ ಮಹಾದೇವಮ್ಮ ಸ್ಮಾರಕ ಮಂಗಲ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶ್ರೀ ಗೊಗ್ಗ ಚನ್ನಬಸಯ್ಯನವರ 41ನೇ ವಾರ್ಷಿಕ ಪುಣ್ಯಸ್ಮರಣೆ ಹಾಗೂ ಶ್ರೀ ಸಿದ್ಧಲಿಂಗ ಜಗದ್ಗುರುಗಳ 89ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಆಧ್ಯಾತ್ಮಕ ಪ್ರವಚನದ ಕುರಿತು ಆಶೀರ್ವಚನ ನೀಡಿ ಮಾತನಾಡಿ, ಕಾಯಕ ಹಾಗೂ ದಾಸೋಹದ ಮಹತ್ವವನ್ನು ಸಾರುವ ಸಲುವಾಗಿ ಶ್ರೀ ಗೊಗ್ಗಬಸಯ್ಯನವರು ತಮ್ಮ ಸೇವಾ ಕಾರ್ಯ ಚಟುವಟಿಕೆಗಳ ಮೂಲಕ ಇಂದಿಗೂ ಆಶಾಕಿರಣರಾಗಿದ್ದಾರೆ. ಇವರ ಧಾರ್ಮಿಕ ಸೇವಾ ಕಾರ್ಯವನ್ನು ಶ್ರೀ ಗೊಗ್ಗ ಚನ್ನಬಸವರಾಜ ಅವರು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.
ದಾನ ಮತ್ತು ಜ್ಞಾನಿಯಾಗಿ ನಾಡಿಗೆ ಕೊಡುಗೆ ನೀಡಿದ್ದಾರೆ. ಜ್ಞಾನಿ, ದಾನಿ, ಸ್ವಾಮಿ ಇವರು ಕಾಲಿಟ್ಟ ಸ್ಥಳವು ಸೂರ್ಯ ಚಂದ್ರ ಇರುವವರೆಗೂ ಬೆಳಕು ಬೀಳುತ್ತದೆ. ಶರಣ, ಸಂತರ ಪ್ರವಚನಗಳ ದರ್ಶನವನ್ನು ಮಕ್ಕಳಿಗೆ ಮಾಡಿಸಬೇಕಾಗಿದೆ ಎಂದರು. ನಂತರ ಶ್ರೀ ಗೊಗ್ಗ ಬಸಯ್ಯ ಮೆಮೋರಿಯಲ್ ಟ್ರಸ್ಟ್ ಅಧ್ಯಕ್ಷ ಗೊಗ್ಗ ಚನ್ನಬಸವರಾಜ ಅವರು ಮತನಾಡಿ, ಗೊಗ್ಗ ಚನ್ನಬಸಯ್ಯನವರ ಹಾಗೂ ್ರ ಸಿದ್ಧಲಿಂಗ ಜಗದ್ಗುರುಗಳ ಆಧ್ಯಾತ್ಮಕ ಚಿಂತನೆಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಂಡಾಗ ಮಾತ್ರ ನೆಮ್ಮದಿಯ ಬದುಕಿಗೆ ಸಾಕ್ಷಿಯಾಗಲಿದೆ.
ಇವರಿಬ್ಬರ ಸೇವಾ ಕಾರ್ಯಗಳು ಇಂದಿನ ಯುವ ಪೀಳಿಗೆಗೆ ಮಾರ್ಗದರ್ಶಕವಾಗಿವೆ. ಮಕ್ಕಳು ಆಧ್ಯಾತ್ಮಿಕ ಚಿಂತನೆಗಳನ್ನು ಬೆಳೆಸಿಕೊಳ್ಳುವ ಜತೆಗೆ ಸಂಸ್ಕೃತಿ, ಸಂಸ್ಕಾರ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ತದನಂತರ ಪ್ರತಿ ವರ್ಷದಂತೆ ಈ ಬಾರಿಯೂ 5 ಜನ ಬಡ ಮಕ್ಕಳ ವ್ಯಾಸಂಗಕ್ಕಾಗಿ ಸುಮಾರು 21200 ರೂ.ಗಳ ಶಾಲಾ ಶುಲ್ಕದ ಚೆಕ್ ಅನ್ನು ವಿತರಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಎಂ.ಎಸ್.ಶಶಿಧರ ಶಾಸ್ತ್ರಿ, ಅರವಿ ಬಸವನಗೌಡ, ಎಂ.ಶರಣಯ್ಯಸ್ವಾಮಿ, ಗೊಗ್ಗ ಕಾರ್ತಿಕ, ಗೊಗ್ಗ ಸಿದ್ದರಾಮಯ್ಯ ಸೇರಿದಂತೆ ಮಹಿಳೆಯರು ಹಾಗೂ ಇತರರು ಪಾಲ್ಗೊಂಡಿದ್ದರು. ಜ.001: ಕಂಪ್ಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಡ ಮಕ್ಕಳ ವ್ಯಾಸಂಗದ ಶಾಲಾ ಶುಲ್ಕದ ಚೆಕ್ ಅನ್ನು ವಿತರಿಸಲಾಯಿತು.