ನವದೆಹಲಿ, ನ 30- ನೇಪಾಳದಲ್ಲಿ ನಡೆಯಲಿರುವ ದಕ್ಷಿಣ ಏಷ್ಯನ್ ಕ್ರೀಡಾಕೂಟಕ್ಕೆ ಭಾರತ ಬ್ಯಾಡ್ಮಿಂಟನ್ ತಂಡದ ಆಯ್ಕೆಯನ್ನು ಮಹಿಳೆಯರ ಡಬಲ್ಸ್ ಆಟಗಾರ್ತಿ ಪ್ರಜಕ್ತಾ ಸಾವಂತ್ ಪ್ರಶ್ನಿಸಿದ್ದಾರೆ.
ದೇಶೀಯ ಟೂರ್ನಿಗಳಲ್ಲಿ ಭಾಗವಹಿಸದೇ ಇದ್ದರೂ ಕೂಡ ಕೆಲವರನ್ನು ಭಾರತ ತಂಡಕ್ಕೆ ನೇರವಾಗಿ ಆಯ್ಕೆ ಮಾಡಲಾಗುತ್ತಿದೆ ಎಂದು ಭಾರತ ಬ್ಯಾಡ್ಮಿಂಟನ್ ಅಸೋಸಿಯೇಷನ್ ಗೆ ಪ್ರಜಕ್ತಾ ಸಾವಂತ್ ಪ್ರಶ್ನೆ ಮಾಡಿದ್ದಾರೆ. ಇದರ ಬೆನ್ನಲ್ಲೆ ಉತ್ತರ ನೀಡಿರುವ ಬಿಎಐ, ಆಟಗಾರ್ತಿಯ ಎಲ್ಲ ಆರೋಪಗಳನ್ನು ತಳ್ಳಿ ಹಾಕಿದೆ.
"ಬಿಎಐ ತನಗೆ ಇಷ್ಟಬಂದ ಆಟಗಾರ ಅಥವಾ ಆಟಗಾರ್ತಿಯರನ್ನು ಭಾರತ ತಂಡಕ್ಕೆ ಆಯ್ಕೆ ಮಾಡುತ್ತಿದೆ ಎಂದು ಆರೋಪಿಸಿ ಸರಣಿ ಟ್ವೀಟ್ ಮಾಡಿದ್ದಾರೆ. "ದಕ್ಷಿಣ ಏಷ್ಯನ್ ಕ್ರೀಡಾಕೂಟಕ್ಕೆ ಭಾರತ ತಂಡವನ್ನು ಈಗಾಗಲೇ ಅನಧೀಕೃತವಾಗಿ ಅಂತಿಮಗೊಳಿಸಲಾಗಿದೆ. ಆಟಗಾರರು-ಆಟಗಾರ್ತಿಯರು ತಮ್ಮ ಫೇಸ್‍ಬುಕ್ ಹಾಗೂ ಇನ್‍ಸ್ಟಾಗ್ರಾಂಗಳಲ್ಲಿ ನೇಪಾಳಕ್ಕೆ ತೆರಳುವ ಬಗ್ಗೆ ಸ್ಟೇಟಸ್ ಹಾಕಿಕೊಂಡಿದ್ದಾರೆ. ಯಾವ ಆಧಾರದ ಮೇಲೆ ತಂಡವನ್ನು ಆಯ್ಕೆ ಮಾಡಲಾಗಿದೆ?? ಎಂದು ಭಾರತ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷ ಹಿಮಾಂತ್ ಬಿಸ್ವಾ ಶರ್ಮಾ ಅವರಿಗೆ ಪ್ರಜಕ್ತಾ ಸಾವಂತ್ ಪ್ರಶ್ನೆ ಮಾಡಿದ್ದಾರೆ.
" ಗೋಪಿಚಂದ್ ಅಕಾಡೆಮಿಯವರು ಮಾತ್ರ ಭಾರತ ತಂಡದಲ್ಲಿ
ಆಡಬೇಕೆ? ಈ ಅಕಾಡೆಮಿಯವರು ಆಲ್ ಇಂಡಿಯಾ ಟೂರ್ನಿಗಳಲ್ಲಿ ಭಾಗವಹಿಸುವುದೇ ಇಲ್ಲ. ಆದರೂ, ಅವರಿಗೆ ಭಾರತ ತಂಡದಲ್ಲಿ ನೇರವಾಗಿ ಹೇಗೆ ಆಯ್ಕೆ ಮಾಡಲಾಗುತ್ತದೆ? ಹಿಮಾಂತ್ ಬಿಸ್ವಾ ಶರ್ಮಾ ದಯವಿಟು ಉತ್ತರ ನೀಡಿ ? ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ.
ಇದರ ಬೆನ್ನಲ್ಲೆ ಪ್ರತಿಕ್ರಿಯಿಸಿರುವ ಅಧ್ಯಕ್ಷ ಹಿಮಾಂತ್ ಬಿಸ್ವಾ ಶರ್ಮಾ ಅವರು, " ನಿಗದಿಪಡಿಸಿರುವ ಮಾನದಂಡದ ಆಧಾರದ ಮೇಲೆ ಭಾರತ ತಂಡವನ್ನು ಆಯ್ಕೆ ಮಾಡಲಾಗುತ್ತದೆ. ಇದರಲ್ಲಿ ಯಾವುದೇ ರಾಜಕೀಯ ಅಥವಾ ತನಗೆ ಇಷ್ಟಬಂದವರನ್ನು ಆಯ್ಕೆ ಮಾಡಲು ಸಾಧ್ಯವಿಲ್ಲ. ದಕ್ಷಿಣ ಏಷ್ಯನ್ ಕ್ರೀಡಾಕೂಟಕ್ಕೂ ಭಾರತ ತಂಡವನ್ನು ಮಾನದಂಡದ ಆಧಾರದ ಮೇಲೆ ಅಂತಿಮಗೊಳಿಸಲಾಗಿದೆ. ಈ ಬಗ್ಗೆ ನಾವು ದೆಹಲಿ ಹಾಗೂ ಕೇರಳ ಹೈಕೋರ್ಟ್‍ನಲ್ಲಿ ಅಫಿಡೆವಿಟ್ ಮಾಡಿಸಿದ್ದೇವೆ ಎಂದು ಸ್ಪಷ್ಟನೆ ನೀಡಿದರು.
"ದಕ್ಷಿಣ ಏಷ್ಯನ್ ಕ್ರೀಡಾಕೂಟಕ್ಕೆ ಭಾರತ ತಂಡಕ್ಕೆ ಮಹಿಳಾ ಡಬಲ್ಸ್ ವಿಭಾಗದಲ್ಲಿ ಕುಹೋ ಗಾರ್ಗ್, ಮೇಘನಾ ಜಕ್ಕಂಪುಡಿ ಹಾಗೂ ಅನುಷ್ಕಾ ಪರಿಖ್ ಅವರಿಗೆ ಆಯ್ಕೆ ಮಾಡಲಾಗುತ್ತಿದೆ. ಪ್ರಸಕ್ತ ವರ್ಷದ ಆರಂಭದಲ್ಲಿ ಶಿಖಾ ಗೌತಮ್ ಹಾಗೂ ಅಶ್ವಿನಿ ಭಟ್ ಅವರು ರಾಷ್ಟ್ರೀಯ ಚಾಂಪಿಯನ್‍ಶಿಪ್ ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. ಆದರೆ, ಅವರನ್ನು ಕಡೆಗಣಿಸಲಾಗಿದೆ. ಪದೇ-ಪದೆ ಬಿಎಐನಿಂದ ಈ ಆಟಗಾರ್ತಿಯರಿಗೆ ಇದೇ ಅನ್ಯಾಯ ಮಾಡಲಾಗುತ್ತಿದೆ" ಪ್ರಜಕ್ತಾ ಸಾವಂತ್ ಆರೋಪಿಸಿದ್ದಾರೆ.