ಸಾಮಾಜಿಕ ಮಾಧ್ಯಮ ಸಕಾರಾತ್ಮಕ ಕಾರ್ಯಗಳಿಗೆ ಬಳಕೆಯಾಗಲಿ- ಪೊಲೀಸರೆದುರು ಮಾಹಿತಿ ಮುಚ್ಚಿಡಬಾರದು
ಕೊಪ್ಪಳ 24: ಭಾರತ ಸಾಕಷ್ಟು ಅಭಿವೃದ್ಧಿ ಹೊಂದಿದರೂ ಮಹಿಳಾ ಶೋಷಣೆಯ ಪ್ರಕರಣಗಳಿಗೆ ಇನ್ನೂ ಅಂಕುಶ ಬಿದ್ದಿಲ್ಲ. ಮಹಿಳೆಯರು ಸ್ವಯಂ ರಕ್ಷಣಾ ಕಲೆಗಳಿಗೆ ಆದ್ಯತೆ ನೀಡಿ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್.ಅರಸಿದ್ಧಿ ಕರೆ ನೀಡಿದರು. ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಮಹಿಳಾ ದಿನಾಚರಣೆ ಅಂಗವಾಗಿ ಕಾಲೇಜಿನ ಮಹಿಳಾ ಸಬಲೀಕರಣ ವಿಭಾಗ, ಮಹಿಳೆಯರ ಅನೈತಿಕ ಕಳ್ಳ ಸಾಗಾಣಿಕೆ, ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ತಡೆ, ವಾಣಿಜ್ಯ ಲೈಂಗಿಕ ಶೋಷಣೆ ತಡೆಗೆ ಸಂಬಂಧಿಸಿದಂತೆ ನಡೆದ ಕಾನೂನು ಅರಿವು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಈ ನಿಟ್ಟಿನಲ್ಲಿ ಯುವಕರಿಗೂ ಸೂಕ್ಷ್ಮತೆ ಅಗತ್ಯ. ಸಾಮಾಜಿಕ ಮಾಧ್ಯಮಗಳನ್ನು ಸಕಾರಾತ್ಮಕ ಕಾರ್ಯಗಳಿಗೆ ಬಳಸಬೇಕು. ಮಹಿಳೆಯರು ಶೋಷಣೆಗೆ ಸಂಬಂಧಿಸಿದಂತೆ ಯಾರಿಗೂ ಹೆದರಬೇಕಿಲ್ಲ. ಮುಖ್ಯವಾಗಿ ಪೊಲೀಸರೆದುರು ಯಾವುದೇ ಮಾಹಿತಿ ಮುಚ್ಚಿಡಬಾರದು ಎಂದ ಎಸ್ಪಿ, ಈಚೆಗೆ ಸಾಣಾಪುರದಲ್ಲಿ ನಡೆದ ಅತ್ಯಾಚಾರ ಪ್ರಕರಣದ ನಿದರ್ಶನ ವಿವರಿಸಿದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಮಹಾಂತಸ್ವಾಮಿ ಪೂಜಾರ, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಪ್ರಕಾಶ ಕಡಗದ, ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಹೇಮಂತಕುಮಾರ ವೇದಿಕೆಯಲ್ಲಿದ್ದರು. ಈ ಸಂದರ್ಭದಲ್ಲಿ ಕಾಲೇಜಿನ ಬೋಧಕ ಸಿಬ್ಬಂದಿ ಡಾ.ಪ್ರಕಾಶ್ ಬಳ್ಳಾರಿ, ಡಾ.ವಿಪ್ಲವಿ, ಗೀತಾ.ಜಿ, ಡಾ.ನಾಗರಾಜ ದೊರೆ, ಡಾ.ಬೋರೇಶ್, ವೈ.ಬಿ.ಅಂಗಡಿ, ಮಾರುತಿ ತಳವಾರ, ಬಸವರಾಜ ಕರುಗಲ್, ವಸಂತಕುಮಾರ್, ಅನ್ನಪೂರ್ಣ ಹಾಗೂ ವಿದ್ಯಾರ್ಥಿಗಳು ಇದ್ದರು. ಕಾಲೇಜಿನ ಪ್ರಾಂಶುಪಾಲ ಡಾ.ಡಿ.ಎಚ್.ನಾಯ್ಕ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವಿಜಯಲಕ್ಚ್ಮೀ ಕೆಂಗೇರಿ ಪ್ರಾರ್ಥಿಸಿದರು. ಡಾ.ಮಹಾಂತೇಶ ನೆಲಾಗಣಿ ನಿರೂಪಿಸಿದರು. ಡಾ.ತುಕಾರಾಮ ನಾಯ್ಕ ಸ್ವಾಗತಿಸಿದರು.ಕಾಲೇಜಿನ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕರು, ಮಹಿಳಾ ಸಬಲೀಕರಣ ಘಟಕದ ಸಂಯೋಜಕರಾದ ಡಾ.ಭಾಗ್ಯಜ್ಯೋತಿ ಪ್ರಾಸ್ತಾವಿಕ ಮಾತನಾಡಿದರು. ಜ್ಞಾನೇಶ್ವರ ಪತ್ತಾರ ವಂದಿಸಿದರು.ಬಾಕ್ಸ್...ಉಪನ್ಯಾಸ ಮಾಲಿಕೆ: ಮಹಿಳೆಯರ ಸಬಲೀಕರಣ ಮತ್ತು ಮಹಿಳೆಯರಿಗಾಗಿ ಇರುವ ಸರಕಾರಿ ಯೋಜನೆಗಳ ಕುರಿತು ಶಿಶು ಅಭಿವೃದ್ಧಿ ಯೋಜನಾಧಿಕಾರಿ ರೋಹಿಣಿ ಕೋಟಗಾರ, ಮಹಿಳೆಯರ ಲೈಂಗಿಕ ದೌರ್ಜನ್ಯ ತಡೆ ಕುರಿತು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಮತ್ತು ಪರೀವೀಕ್ಷಣಾಧಿಕಾರಿ ಶಿವಲೀಲಾ, ಅನೈತಿಕವಾಗಿ ಮಹಿಳೆಯರ ಕಳ್ಳ ಸಾಗಾಣಿಕೆ ತಡೆ ಹಾಗೂ ವಾಣಿಜ್ಯ ಲೈಂಗಿಕ ಶೋಷಣೆ ತಡೆ ಕುರಿತು ನ್ಯಾಯವಾದಿ ಹನುಮಂತರಾವ್ ಉಪನ್ಯಾಸ ನೀಡಿದರು. ಫೋಟೋ ಕೊಪ್ಪಳ: ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ನಡೆದ ಕಾನೂನು ಅರಿವು ಕಾರ್ಯಾಗಾರವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್.ಅರಸಿದ್ಧಿ ಉದ್ಘಾಟಿಸಿದರು.