ಸಾರ್, ಸೋಪ್ ಇಲ್ಲ, ಚಿಕನ್, ಬಾಳೆಹಣ್ಣು ಕೊಡುತ್ತಿಲ್ಲ್ಲ, ಬಸ್ ವ್ಯವಸ್ಥೆ ಒದಗಿಸಿ
ಕಾರವಾರ 21: ಸಾರ್, ಹಾಸ್ಟೆಲ್‌ನಲ್ಲಿ ಚಿಕನ್, ಬಾಳೆ ಹಣ್ಣು ನೀಡುತ್ತಿಲ್ಲ, 5 ವರ್ಷದಿಂದ ಹಾಸ್ಟೆಲ್‌ನಲ್ಲಿ ಮೆನು ಬದಲಾವಣೆ ಆಗಿಲ್ಲ, ಗೀಸರ್ ವ್ಯವಸ್ಥೆ ಸರಿ ಇಲ್ಲ, ಸಮಯಕ್ಕೆ ಸರಿಯಾಗಿ ಬಸ್ ಇಲ್ಲ, ನೋಟ್ ಬುಕ್ ನೀಡಿಲ್ಲ ಇಂತಹ ಹಲವಾರು ಸಮಸ್ಯೆಗಳನ್ನು ಮಕ್ಕಳ ರಕ್ಷಣಾ ಆಯೋಗದ ಸದಸ್ಯರಿಗೆ ಸಲ್ಲಿಸಿದ ವಿದ್ಯಾರ್ಥಿಗಳು, ಸಮಸ್ಯೆಗಳನ್ನು ನೇರವಾಗಿ ಎಲ್ಲರ ಮುಂದೆ ಹೇಳಲಾಗದೇ ಬಗ್ಗೆ ಹಲವು ಸಮಸ್ಯೆಗಳನ್ನು ಲಿಖಿತವಾಗಿ ಪತ್ರದ ಮೂಲಕ ನೇರವಾಗಿ ಸಲ್ಲಿಸಿದರು.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಉತ್ತರ ಕನ್ನಡ ಜಿಲ್ಲೆ ಅವರ ಸಹಯೋಗದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ, ಮಕ್ಕಳಿಂದ ಅಹವಾಲು ಸ್ವೀಕಾರ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸದಸ್ಯ ಡಾ.ತಿಪ್ಪೇಸ್ವಾಮಿ ಕೆ.ಟಿ ಅವರಿಗೆ ಜಿಲ್ಲೆಯ ವಿದ್ಯಾರ್ಥಿಗಳು ತಮ್ಮ ವಿವಿಧ ಸಮಸ್ಯೆಗಳ ಬಗ್ಗೆ ಮನವಿ ಸಲ್ಲಿಸಿದರು.
ಅಲ್ಪ ಸಂಖ್ಯಾತರ ಇಲಾಖೆ ವಸತಿ ನಿಲಯದ ವಿದ್ಯಾರ್ಥಿ ಮೆಹ್ತಾಬ್ ಮೂಸಾ ಮೊಗಲ್, ತನ್ನ ಹಾಸ್ಟೆಲ್‌ಗಳಲ್ಲಿನ ಸಮಸ್ಯೆಗಳ ಸರಮಾಲೆಯನ್ನು ವಿವರಿಸಿ, ಬಿಸಿಎಂ ವಿದ್ಯಾರ್ಥಿನಿಲಯಕ್ಕಿಂತಲೂ ಕಡಿಮೆ ಸಂಖ್ಯೆಯಲ್ಲಿರುವ ನಮಗೆ ಅವರಿಗಿಂತ ಹೆಚ್ಚಿನ ಸೌಲಭ್ಯಗಳು ದೊರೆಯಬೇಕಿತ್ತು ಆದರೆ ಇಲ್ಲಿ ನಮಗೆ ಊಟದಲ್ಲಿ ಚಿಕನ್ ಸರಿಯಾಗಿ ನೀಡುತ್ತಿಲ್ಲ, ಬಾಳೆಹಣ್ಣು ನೀಡುತ್ತಿಲ್ಲ, ಸೋಪ್ ಕಿಟ್ ನೀಡಿಲ್ಲ, 45 ವಿದ್ಯಾರ್ಥಿಗಳಿಗೆ ಒಂದೇ ಬಾತ್ ರೂಮ್ ಬಳಸಬೇಕಿದೆ, ಗಿಸರ್ ಇದ್ದರೂ ಎಲೆಕ್ಟ್ರಿಕಲ್ ಅವ್ಯವಸ್ಥೆಯ ಕಾರಣ ಬಿಸೀನೀರಿನ ಸೌಲಭ್ಯ ದೊರೆಯುತ್ತಿಲ್ಲ, ವಿದ್ಯುತ್ ವೈರ್‌ಗಳ ಸಂಪರ್ಕ ವ್ಯವಸ್ಥೆ ಸರಿಪಡಿಸುತ್ತಿಲ್ಲ, ಹಲವು ಸಮಸ್ಯೆಗಳಿದ್ದರೂ, ಪ್ರಸ್ತುತ ಹೊಸ ಹಾಸ್ಟೆಲ್ ನಿರ್ಮಾಣವಾಗಿದ್ದರೂ ಅಲ್ಲಿಗೆ ಶಿಫ್ಟ್ ಮಾಡುತ್ತಿಲ್ಲ, ಹಾಸ್ಟೆಲ್‌ನಲ್ಲಿ ಒಟ್ಟು ಜೀರೋ ಮೆಂಟನೆನ್ಸ್ ಇದೆ ಎಂದು ದೂರುಗಳನ್ನು ಸಲ್ಲಿಸಿದರು. ಈ ಕುರಿತಂತೆ ಹಾಸ್ಟೆಲ್ ವಾರ್ಡನ್‌ಗೆ ನೋಟಿಸ್ ನೀಡುವಂತೆ ಮತ್ತು ಜಿಲ್ಲಾ ಅಲ್ಪ ಸಂಖ್ಯಾತ ಇಲಾಖಾಧಿಕಾರಿಯಿಂದ ವರದಿ ಪಡೆಯುವಂತೆ ಡಾ.ತಿಪ್ಪೇಸ್ವಾಮಿ ಕೆ.ಟಿ ಸೂಚನೆ ನೀಡಿದರು.ಹಿಂದೂ ಶಾಲೆಯ ವಿದ್ಯಾರ್ಥಿನಿ ತಾನು ಬರುವ ಬಸ್ ತುಂಬಾ ರಷ್ ಇರುತ್ತದೆ, ಹಲವು ವಿದ್ಯಾರ್ಥಿಗಳಿಗೆ ತೊಂದೆರೆಯಾಗುತ್ತಿದೆ ಆದ್ದರಿಂದ ಸದಾಶಿವಗಡ ಹಿ ಕಾರವಾರ ಮಾರ್ಗದಲ್ಲಿ ಶಾಲಾ ಸಮಯದಲ್ಲಿ ಹೆಚ್ಚುವರಿ ಬಸ್ ವ್ಯವಸ್ಥೆ ಒದಗಿಸುವಂತೆ ಕೋರಿದರು. ಮೆಟ್ರಿಕ್ ನಂತರ ವಿದ್ಯಾರ್ಥಿನಿ ನಿಲಯ ಸಿದ್ದರದ ವಿದ್ಯಾರ್ಥಿಗಳು ಹಾಸ್ಟೆಲ್‌ನಿಂದ ಕಾಲೇಜಿಗೆ ತೆರಳಲು ಸಮಯಕ್ಕೆ ಸರಿಯಾದ ಬಸ್ ವ್ಯವಸ್ಥೆ ಇಲ್ಲ ಎಂದು ಮನವಿ ಸಲ್ಲಿಸಿದರು, ಈ ಬಗ್ಗೆ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಆಯೋಗದ ಸದಸ್ಯರು ತಿಳಿಸಿದರು.ಸರಸ್ವತಿ ವಿದ್ಯಾಲಯದ ವಿದ್ಯಾರ್ಥಿಗಳು ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಸರಕಾರದಿಂದ ನೀಡುವ ಸೌಲಭ್ಯಗಳು ಖಾಸಗಿ ಶಾಲೆಯ ಮಕ್ಕಳಿಗೂ ನೀಡಬೇಕು ಎಂದರು. ರಾಜ್ಯಾದ್ಯಂತ ಎಲ್ಲಾ ಶಾಲಾ ಮಕ್ಕಳಿಗೆ ಏಕರೂಪದ ಸೌಲಭ್ಯಗಳನ್ನು ಒದಗಿಸುವ ಕುರಿತಂತೆ ಆಯೋಗದಿಂದ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಆಯೋಗದ ಸದಸ್ಯರು ತಿಳಿಸಿದರು.
ಕಾರವಾರದ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿ ನಿಲಯದ ವಿದ್ಯಾರ್ಥಿಗಳು ತಮಗೆ ನೋಟ್ ಬುಕ್ ನೀಡಿಲ್ಲ ಎಂದು ದೂರಿದರು, ನೋಟ್ ಬುಕ್ ಸರಬರಾಜು ಕುರಿತಂತೆ ಇಂಡೆಂಟ್ ಸಲ್ಲಿಸಿದ್ದು, ಸರಬರಾಜು ಆದ ಕೂಡಲೇ ವಿತರಿಸಲಾಗುವುದು ಎಂದು ಆಧಿಕಾರಿಗಳು ಸಮಜಾಯಿಷಿ ನೀಡಿದರು, ಶೈಕ್ಷಣಿಕ ವರ್ಷ ಮುಗಿಯುತ್ತಾ ಬಂದಿದ್ದು ಇಷ್ಟು ವಿಳಂಬವಾಗಿ ಇಂಡೆಂಟ್ ಸಲ್ಲಿಸಿರುವುದಕ್ಕೆ ಅಸಮಧಾನ ವ್ಯಕ್ತಪಡಿಸಿದ ಸದಸ್ಯರು ಈ ಬಗ್ಗೆ ಉತ್ತರ ನೀಡುವಂತೆ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳಿಗೆ ಪತ್ರ ಬರೆಯುವಂತೆ ತಿಳಿಸಿದರು.
ತಮ್ಮ ಶಾಲೆಯಲ್ಲಿ ಮತ್ತು ಹಾಸ್ಟೆಲ್‌ನಲ್ಲಿ ಯಾವುದೇ ಸಮಸ್ಯೆಯಿಲ್ಲ, ಎಲ್ಲಾ ಚೆನ್ನಾಗಿದೆ ಎಂದ ವಿದ್ಯಾರ್ಥಿಗಳಿಗೆ, ಶಾಲಾ ಶಿಕ್ಷಕರು ಮತ್ತು ಹಾಸ್ಟೆಲ್ ವಾರ್ಡನ್‌ಗಳ ಮುಂದೆ ನೀವು ಸಮಸ್ಯೆಗಳನ್ನು ತಿಳಿಸದೇ ಇರಬಹುದು, ನಿಮ್ಮಲ್ಲಿ ಉತ್ತಮ ಸೌಲಭ್ಯಗಳಿದ್ದರೆ ತುಂಬಾ ಒಳ್ಳೆಯದು ಆದರೂ ನಿಮ್ಮ ಶಾಲೆ, ಹಾಸ್ಟೆಲ್‌ಗಳಿಗೆ ಅನೀರೀಕ್ಷಿತ ಭೇಟಿ ನೀಡಿ ಪರೀಶೀಲನೆ ನಡೆಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ವಿರೂಪಾಕ್ಷ ಗೌಡ ಪಾಟೀಲ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸೋನಲ್ ಐಗಾಳ್, ಡಿವೈಎಸ್ಪಿ ಗೀರೀಶ್, ಕಾರ್ಮಿಕ ಅಧಿಕಾರಿ ಲಲಿತಾ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸತೀಶ್ ನಾಯ್ಕ್, ಹಾಗೂ ವಿವಿಧ ಶಾಲೆ ಮತ್ತು ಹಾಸ್ಟೆಲ್‌ಗಳ ವಿದ್ಯಾರ್ಥಿಗಳು ಹಾಜರಿದ್ದರು.