ಸಾಯಿ ಮಂದಿರದಲ್ಲಿ ಬೆಳ್ಳಿ ಕವಚ ಕಳ್ಳತನ: 8 ಲಕ್ಷ ಬೆಲೆಯ ಬೆಳ್ಳಿ ದೋಚಿದ ಕಳ್ಳರು

Silver kavach theft at Sai temple: Thieves loot silver worth 8 lakhs

ಸಾಯಿ ಮಂದಿರದಲ್ಲಿ ಬೆಳ್ಳಿ ಕವಚ ಕಳ್ಳತನ: 8 ಲಕ್ಷ ಬೆಲೆಯ ಬೆಳ್ಳಿ ದೋಚಿದ ಕಳ್ಳರು 

ಕಾರವಾರ 15 : ನಗರದ ಸಾಯಿಕಟ್ಟಾದ ಸಾಯಿಮಂದಿರದಲ್ಲಿ ಇಂದು ಬೆಳಗಿನ ಜಾವ ದರೋಡೆಕೋರರು ಸಾಯಿ ಮಂದಿರದ ಬೆಳ್ಳಿ ಆಭರಣ ದೋಚಿದ್ದಾರೆ. ಶಿರಡಿ ಸಾಯಿ ಬಾಬಾ ಮಂದಿರದ ಬಾಗಿಲು ಮುರಿದು ಸುಮಾರು 12 ಕೆ.ಜಿ ಗೂ ಅಧಿಕ ಬೆಳ್ಳಿಯ ಆಭರಣ ದೋಚಿದ್ದಾರೆ.ಸೋಮವಾರ ರಾತ್ರಿ ಸಾಯಿಮಂದಿರದ ಎದರುಗಡೆಯ ಮೈದಾನದಲ್ಲಿ ಕ್ರಿಕೆಟ್‌ ಪಂದ್ಯಾವಳಿ ಆಯೋಜನೆ ಮಾಡಲಾಗಿತ್ತು. ಈ ಪಂದ್ಯಾವಳಿ ಸುಮಾರು ಎರಡು ಗಂಟೆಗೆ ಮುಕ್ತಾಯವಾಗಿದೆ. ಮಂಗಳವಾರ ಬೆಳಗಿನ 3 ರಿಂದ 5 ಗಂಟೆ ಮಧ್ಯೆ ಈ ಕಳ್ಳತನ ನಡೆದಿದೆ ಎಂದು ಪೊಲೀಸರು ಅಂದಾಜಿಸಿದ್ದಾರೆ. ಸಾಯಿಬಾಬಾ ದೇವಾಲಯದ ಬಾಗಿಲು ಮುರಿದು ಒಳ ಪ್ರವೇಶಿಸಿದ ಇಬ್ಬರು ಕಳ್ಳರು ಸಾಯಿಬಾಬ ವಿಗ್ರಹದ ಅಕ್ಕ ಪಕ್ಕದ ಎರಡು ಬೆಳ್ಳಿಯ ಸಿಂಹ, ದೇವರ ಪಾದುಕೆ ಹಾಗೂ ಬೆಳ್ಳಿ ಚತ್ರಿಯನ್ನು ಎಗರಿಸಿದ ದೃಶ್ಯ ಮಂದಿರದ ಸಿ.ಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.ಮಂಗಳವಾರ ಮುಂಜಾನೆ ದೇವರ ಪೂಜೆಗೆ ಆಗಮಿಸಿದ ಪೂಜಾರಿಗೆ ಕಳ್ಳತನದ ಕೃತ್ಯ ಗಮನಕ್ಕೆ ಬಂತು. ಅವರು ಕಾರವಾರ ನಗರ ಪೋಲಿಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೋಲಿಸರು ತನಿಖೆ ಕೈಕೊಂಡಿದ್ದು ಕಳ್ಳರ ಸೆರೆಗೆ ಬಲೆ ಬೀಸಿದ್ದಾರೆ. ದರೋಡೆಕೋರರ ಬಂಧನಕ್ಕೆ ಹಲವು ತಂಡ ರಚಿಸಲಾಗಿದೆ. ಕಾರವಾರ ತಾಲೂಕಿನಲ್ಲಿ ಕಳೆದ ನಾಲ್ಕು ತಿಂಗಳಲ್ಲಿ ಮೂರನೇ ದೇವಸ್ಥಾನ ಕಳ್ಳತನ ಪ್ರಕರಣ ಇದಾಗಿದೆ. 

..