ಬೆಂಗಳೂರು, ಜೂನ್ 5 (ಯುಎನ್ಐ) ಲೋಕಸಭಾ ಚುನಾವಣೆಯ ಹೀನಾಯ ಸೋಲಿನ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಕೀಯ ಸನ್ಯಾಸ ತೆಗೆದುಕೊಳ್ಳುವುದು ಒಳಿತು ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ ರಾವ್ ಹೇಳಿದ್ದಾರೆ. ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ದೇಶದ ಪ್ರಧಾನಿಯಾಗುವ ಕನಸು ಕಟ್ಟಿಕೊಂಡಿದ್ದರು. ಆದರೆ ಅದನ್ನು ಜನತೆ ತಿರಸ್ಕರಿಸಿದ್ದಾರೆ ಎಂದರು. ಈಗ ರಾಹುಲ್ ಗಾಂಧಿ ಅವರಿಗೆ ಯಾವುದೇ ಕೆಲಸ ಇಲ್ಲ. ಐದು ವರ್ಷಗಳ ಕಾಲ ನಿರಾತಂಕವಾಗಿ ನಿದ್ದೆ ಮಾಡಲಿ ಎಂದು ವ್ಯಂಗವಾಡಿದ್ದಾರೆ. 125 ವರ್ಷಗಳ ಇತಿಹಾಸ ಇರುವ ಕಾಂಗ್ರೆಸ್ ಪಕ್ಷ ಕಳೆದ ಲೋಕಸಭಾ ಚುನಾವಣೆಯಲ್ಲಿ ಮತ್ತು ಇತ್ತೀಚೆಗೆ ತಾನೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲೂ ವಿರೋಧ ಪಕ್ಷದ ಸ್ಥಾನ ಗಳಿಸಲು ಬೇಕಾದ ಸಂಖ್ಯಾಬಲ ಗಳಿಸುವಲ್ಲಿ ವಿಫಲವಾಗಿದೆ. ದೇಶದಲ್ಲಿ ಕಾಂಗ್ರೆಸ್ ಮುಳುಗುತ್ತಿರುವ ಹಡಗು ಎಂಬುದಕ್ಕೆ ಇದಕ್ಕಿಂತ ಬೇರೆ ನಿದರ್ಶನ ಬೇಕಿಲ್ಲ ಎಂದು ಅವರು ಹೇಳಿದರು.