ಲೋಕದರ್ಶನ ವರದಿ
ಶಿರಹಟ್ಟಿ 14: ಯಳವತ್ತಿಯ ಜಾಗೃತದೇವಿ ಶ್ರೀ ಉಡಚಮ್ಮದೇವಿಯ ಮಹಾ ಪಲ್ಲಕ್ಕಿ ಉತ್ಸವ ಕಾರ್ಯಕ್ರಮವು ಸಾವಿರಾರು ಭಕ್ತರ ನಡುವೆ ಅದ್ದೂರಿಯಾಗಿ ನಡೆಯಿತು.
ಬೆಳಿಗ್ಗೆ 9 ಗಂಟೆಗೆ ದೇವಿಯ ಉತ್ಸವ ಮೂರ್ತಿ ಯನ್ನು ಹೊತ್ತಂತಹ ಪಾಲಕಿ ಮೆರವಣಿಗೆಯು ದೇವಸ್ಥಾನದ ಮುಂಭಾಗದಿಂದ ನೂರಾರು ಮುತೈದೆಯರು ಕುಂಭಗಳನ್ನು ಹೊತ್ತುಕೊಂಡು ಪಾಲಕಿ ಮುಂದೆ ಸಾಗಿದರೆ, ಮುತೈದೆಯರ ಮುಂದೆ ಮುಂದೆ ಊರಿನ ರೈತರೆಲ್ಲ ಅಮ್ಮನ ಪಾಲಕಿ ಉತ್ಸವಕ್ಕೆ ತಮ್ಮ ಹೊಲಮನೆಗಳ ಕೆಲಸಗಳನ್ನು ಬದಿಗೊತ್ತಿ ತಮ್ಮ ಎಲ್ಲ ಜೋಡೆತ್ತ್ತುಗಳನ್ನು ಶೃಂಗಾರ ಮಾಡಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರೆ ಅವರ ಮುಂದೆ ಬ್ಯಾಂಡ್ ಮೇಳ, ಭಜನೆ ಮೇಳಗಳು ಸಾಗಿದವು.
ಉಡಚಮ್ಮ ದೇವಸ್ಥಾನದಿಂದ ಸಾಗಿದ ಮೆರವಣಿಗೆಯು ಪ್ರಸಿದ್ಧವಾದ ಮಳಲಮ್ಮ ಬಾವಿಯನ್ನು ತಲುಪಿ ಬಾವಿಯ ದಂಡೆಯ ಮೇಲೆ ಮತ್ತೇ ಪೂಜಾ ಕೈಂಕರ್ಯಗಳನ್ನು ಪೂರ್ಣಗೊಳಿಸಿ ಉಡಚಮ್ಮ ದೇವಿಯ ಸ್ವಂತ ಅಣ್ಣನೆಂದೇ ಪ್ರತೀತಿ ಹೊಂದಿದ ಊರಿನ ಆರಾಧ್ಯ ದೇವ ಗುಂಡೇಶ್ವರನ ದರ್ಶನಕ್ಕೆಂದು ಊರಿನ ಪ್ರಮುಖ ಬೀದಿಗಳಾದ ಹೊಸಕೆರೆ ಕ್ರಾಸ್, ಬಸ್ಸ್ಟ್ಯಾಂಡ್ ಹಾಗೂ ಹಾಗಾರ ಓಣಿಯ ಮೂಲಕ ಗುಂಡೇಶ್ವರನ ದೇವಸ್ಥಾನ ತಲುಪಿ ಅಲ್ಲಿ ಪೂಜೆ ಸಲ್ಲಿಸಿ ನಂತರ ಗುಂಡೇಶ್ವರ ಓಣಿ, ಕೋಟೆ ಬಯಲು, ಕುರುಬರ ಓಣಿ, ತಳವಾರ ಓಣಿ ಮೂಲಕ ಮಠಪತಿ ಓಣಿ, ಬಡಿಗೇರ ಓಣಿ, ಅಂಬೇಡ್ಕರ ಕಾಲೋನಿಯ ಬೀದಿಗಳ ಮೂಲಕ ಮೆರವಣಿಗೆ ಸಾಗಿ ಕೊನೆಗೆ ಉಡಚಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪಾಲಕಿಯಿಂದ ದೇವಿಯ ಉತ್ಸವ ಮೂತರ್ಿ ಮೂಲಸ್ಥಾನ ತಲುಪಿ ಉತ್ಸವ ದೇವಸ್ಥಾನದಲ್ಲಿ ಸಂಪನ್ನಗೊಂಡಿತು.
ಈ ಉತ್ಸವ ಮುಗಿದ ಮೇಲೆ ಅನ್ನ ಪ್ರಸಾದ ಸೇವೆ ನಡೆಯಿತು. ಈ ಉತ್ಸವದಲ್ಲಿ ಗ್ರಾಮದ ಎಲ್ಲ ಕುಟುಂಬಗಳ ಸಂಭಂಧಿಕರು, ಮಕ್ಕಳು, ಮಹಿಳೆಯರು, ಹಿರಿಯರು ಹಾಗೂ ಸುತ್ತಮುತ್ತಲಿನ ಭಕ್ತಾಧಿಗಳು ಈ ಉತ್ಸವದಲ್ಲಿ ಪಾಲ್ಗೊಂಡು ತಾಯಿ ದರ್ಶನಾಶೀವರ್ಾದ ಪಡೆದು ಪುನೀತರಾದರು.