ಶಿಗ್ಗಾವಿ ತಾಲೂಕ 5 ನೇ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷೆಯಾಗಿಬಹುಮುಖಿ ಪ್ರತಿಭೆ, ಸೃಜನಶೀಲೆ, ಸಾಹಿತಿ : ವಿಜಯಲಕ್ಷ್ಮಿ ತಿರ್ಲಾಪೂರ
ಶಿಗ್ಗಾವಿ 09 : ಛಲ ಮತ್ತು ಆತ್ಮವಿಶ್ವಾಸ ಇವೆರಡಿದ್ದರೆ ಏನನ್ನೂ ಸಾಧಿಸಬಲ್ಲೆ ಎಂಬುದಕ್ಕೆ ಸಾಕ್ಷಿಯಾಗಿ ನಿಲ್ಲುತ್ತಾರೆ ಕವಯತ್ರಿ, ಚಿಂತಕಿ, ವಾಗ್ಮಿ, ವಿಶ್ಲೇಷಕಿ, ವಿಮರ್ಶಕಿ, ಸಂಘಟಕಿ, ಸಾಹಿತಿ ಡಾ.ವಿಜಯಲಕ್ಷ್ಮಿ ಪುಟ್ಟಿ ಅವರು. ಹಮ್ಮು ಬಿಮ್ಮಿಲ್ಲದ, ನಗುಮೊಗದ, ಸ್ನೇಹಮಯಿ ವಿಜಯಲಕ್ಷ್ಮಿ ಅವರು ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ 5 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆಯಾಗಿ ಆಯ್ಕೆಗೊಂಡಿದ್ದು, ಇದೇ ಮಂಗಳವಾರ ದಿ. 11 ಫೆಬ್ರವರಿ 2025 ಶಿಗ್ಗಾವಿಯ ವಿರಕ್ತಮಠದಲ್ಲಿ ಸಮ್ಮೇಳನ ಜರುಗಲಿದೆ ತನ್ನಿಮಿತ್ತ ಪರಿಚಯಾತ್ಮಕ ಲೇಖನ. ಡಾ.ವಿಜಯಲಕ್ಷ್ಮಿ ಅವರು ಮೂಲತಃ ಹಾವೇರಿ ಜಿಲ್ಲೆಯ ಶಿಗ್ಗಾವಿಯವರು ಶರಣ ದಂಪತಿಗಳಾದ ಶ್ರೇಷ್ಠ ಶಿಕ್ಷಕ ಮಲ್ಲಪ್ಪ, ತಾಯಿ ಸರೋಜನಿಯವರ ಪುತ್ರಿ. ಸಹೋದರ ಕರ್ನಾಟಕ ಸರಕಾರ ಕಂದಾಯ ಸಚಿವರ ಆಪ್ತಕಾರ್ಯದರ್ಶಿಯಾಗಿ ರವಿ ತಿರ್ಲಾಪೂರ ಸೇವೆ ಸಲ್ಲಿಸುತ್ತಿದ್ದಾರೆ, ಇನೋರ್ವ ಸಹೋದರ ಡಾ. ಮೃರ್ತುಂಜಯ ತಿರ್ಲಾಪೂರ ಹಾಗೂ ಡಾ.ರಾಣಿ ತಿರ್ಲಾಪೂರ ಶಿಗ್ಗಾವಿ ಪಟ್ಟಣದಲ್ಲಿ ಜನಪ್ರಿಯ ವೈದ್ಯರಾಗಿ ಸೇವೆಸಲ್ಲಿಸುತ್ತಾ ಕಡು ಬಡವ ಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪಿನಿಕ್ಸ ಇಂಟರನ್ಯಾಶನಲ್ ಶಾಲೆ ಹಾಗೂ ವೈದ್ಯಕೀಯ ಹಾಗೂ ಅರೇ ವೈದ್ಯಕೀಯ ಶಿಕ್ಷಣ ಸಂಸ್ಥೆ ಹುಟ್ಟು ಹಾಕಿದ ಕೀರ್ತಿ ತಿರ್ಲಾಪೂರ ದಂಪತಿಗಳಿಗೆ ಸಲ್ಲುತ್ತದೆ. ವಿಜಯಲಕ್ಷ್ಮೀ ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣವನ್ನು ಶಿಗ್ಗಾವಿ, ಪದವಿ ಸ್ನಾತಕೋತ್ತರ ಎಂ.ಫಿಲ್ ಶಿಕ್ಷಣವನ್ನು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ, ಪಿಎಚ್‌ಡಿಯನ್ನು ಪೂರೈಸಿಕೊಂಡರು. ತದನಂತರ ಮೂರು ದಶಕಗಳವರೆಗೆ ಬೆಳಗಾವಿ ಮರಾಠಾ ಮಂಡಳ ಪದವಿ ಮಹಾವಿದ್ಯಾಲಯ, ಖಾನಾಪೂರಗಳಲ್ಲಿ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿ ಸೇವೆಸಲ್ಲಿಸಿ ಪ್ರಸ್ತುತ ಹಾವೇರಿ ವಿಶ್ವವಿದ್ಯಾಲಯದ ಕುಲಸಚಿವರು ಮೌಲ್ಯಮಾಪನ ಹಾಗೂ ಪ್ರಭಾರಿ ಕುಲಪತಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸದಾ ಒಂದಿಲ್ಲೊಂದು ಸಂಘಟನೆಯಲ್ಲಿ ತೊಡಗಿಸಿಕೊಳ್ಳುತ್ತ ಇಪ್ಪತ್ತಕ್ಕೂ ಹೆಚ್ಚು ರಾಷ್ಟ್ರ, ಅಂತರರಾಷ್ಟ್ರೀಯ ಸಮಾವೇಶಗಲ್ಲಿ ಭಾಗವಹಿಸಿದಲ್ಲದೆ ಸಂಘಟನೆಯನ್ನೂ ಮಾಡಿದ್ದಾರೆ. ಸಾಹಿತ್ಯವಷ್ಟೇ ಅಲ್ಲದೆ ಉತ್ತಮ ಭಾಷಣಕಾರರು, ಹಾಡುಗಾರರು. ಇವರು ಚಿಕ್ಕಂದಿನಿಂದಲೂ ಕ್ರಿಯಾಶೀಲ ವ್ಯಕ್ತಿತ್ವ ಮೈಗೂಡಿಸಿಕೊಂಡು ನಟನೆ, ಹಾಡುಗಾರಿಕೆಯಿಂದ ಕಿರುಚಿತ್ರ, ಸಿನೆಮಾ, ನಾಟಕಗಳಲ್ಲಿ ಅಭಿನಯಿಸಿದ್ದಾರೆ. 5 ಸಂಪಾದನಾ ಕೃತಿ ಹಾಗೂ ಇಂಗ್ಲಿಷ್ ಭಾಷೆಯಲ್ಲೂ ಕೃತಿ ರಚಿಸಿ ಕನ್ನಡಾಂಬೆಯ ಮುಡಿಗೇರಿಸಿದ್ದಾರೆ. ಪುಣೆ, ದುಬೈದಂತ ರಾಷ್ಟ್ರೀಯ, ಅಂತರರಾಷ್ಟ್ರೀಯ ಸಮಾವೇಶಗಳಲ್ಲಿ , ನಿಯತಕಾಲಿಕೆಗಳಲ್ಲಿ, ಇ ಪತ್ರಿಕೆಗಳಲ್ಲಿ 150 ಕ್ಕೂ ಹೆಚ್ಚು ಪ್ರಬಂಧ, ಲೇಖನ ಪ್ರಕಟಗೊಂಡಿವೆ. ಶರಣ ಸಾಹಿತ್ಯಾಸಕ್ತರಾಗಿ ಗೂಗಲ್ ಮೀಟ್‌ಗಳಲ್ಲಿ ಪ್ರಮುಖ ಸಂಪನ್ಮೂಲ ವ್ಯಕ್ತಿಗಳಾಗಿ ಹಲವಾರು, ಉಪನ್ಯಾಸಗಳನ್ನು ನೀಡಿದ್ದಾರೆ. ಕೆಎಲ್‌ಇ ಎಫ್ ಎಂ ರೇಡಿಯೋ , ಧಾರವಾಡ ಆಕಾಶವಾಣಿಯಲ್ಲಿ ಇವರ ಚಿಂತನೆ, ಸಂದರ್ಶನಗಳು ಮೂಡಿಬಂದಿವೆ.
ಸಂಘಟಕರಾಗಿರವ ಇವರು ಹತ್ತು ಹಲವು ಸಂಘಟನೆಯಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ರಾಣಿ ಚೆನ್ನಮ್ಮ ವಿ.ವಿ., ಕವಿವಿ ಪ್ರಾಧ್ಯಾಪಕರ ಸಂಘ, ಅಂಟಿ ರಾಗಿಂಗ್ ಸೆಲ್, ಮಹಿಳಾ ಸ್ಕೌಟ್ಸ್ ಹ್ಯಾಂಡ್ ಗೈಡ್ಸ್, ಮಹಾವಿದ್ಯಾಲಯಗಳಲ್ಲಿ ಸಾಹಿತ್ಯಿಕ, ಸಾಂಸ್ಕೃತಿಕ ಸಂಘಗಳ ಅಧ್ಯಕ್ಷರಾಗಿ , ಎನ್.ಎಸ್ ಎಸ್ ಅಧಿಕಾರಿಯಾಗಿ , ಜಾಗತಿಕ ಲಿಂಗಾಯತ ಮಹಿಳಾ ಘಟಕ ಬೆಳಗಾವಿ, ಸಿರಿಗನ್ನಡ ರಾಷ್ಟ್ರೀಯ ಪ್ರತಿಷ್ಠಾನ ಮಹಿಳಾ ಘಟಕ, ಡಿ, ಎಸ್ ಕರ್ಕಿ ಪ್ರತಿಷ್ಠಾನಗಳ ಅಧ್ಯಕ್ಷರಾಗಿಹಾಗೂ ಬೆಳಗಾವಿ ಲೇಖಕಿಯರ ಸಂಘದ ಉಪಾಧ್ಯಕ್ಷೆಯಾಗಿ, ಬೆಳಗಾವಿ ನಾಗನೂರು ರುದ್ರಾಕ್ಷಿಮಠ, ಕಾರಂಜಿಮಠಗಳ ಒಡನಾಡಿಯಾಗಿ ಅನುಪಮ ಸೇವೆ ಸಲ್ಲಿಸುತ್ತಿದ್ದಾರೆ.
ವಿಜಯಲಕ್ಷ್ಮಿ ಅವರ ವಿವಿಧ ಕ್ಷೇತ್ರಗಳ ಅನುಪಮ ಸೇವೆಗೆ ಅಮೂಲ್ಯ ಪ್ರಶಸ್ತಿಗಳು ಸಂದಿವೆ. ರಾಷ್ಟ್ರ ಮಟ್ಟದ ಅಕ್ಕಮಹಾದೇವಿ ಪ್ರಶಸ್ತಿ, ಎಆಯ್ ಪಿಸಿ ದೆಹಲಿ ಸಂಘಟನೆಯಿಂದ' ಜೀವಮಾನ ಸಾಧನಾ' ಪ್ರಶಸ್ತಿ, ಅಂತರರಾಷ್ಟ್ರೀಯ ಯೂಟ್ಯೂಬ್ ಪ್ರಶಸ್ತಿ, ' ಅಮ್ಮ' ಪ್ರಶಸ್ತಿ, ಆದರ್ಶ ಗುರುಮಾತೆ, ಶಿಕ್ಷಣ ರತ್ನ ಪ್ರಶಸ್ತಿ, ರಾಷ್ಟ್ರ ಮಟ್ಟದ ಎನ್ ಎಸ್ ಎಸ್ ಸಂಯೋಜನಾಧಿಕಾರಿ ಪ್ರಶಸ್ತಿ ಇನ್ನೂ ಹಲವಾರು ಪ್ರಶಸ್ತಿಗಳು ಅವರ ಮುಡಿಗೇರಿವೆ. ಇಂಥ ಘನತೆವೆತ್ತ ಮಹಿಳೆ ವಿಜಯಲಕ್ಷ್ಮಿ ಅವರು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆಯಾಗಿರುವುದು ಹೆಮ್ಮೆ. 5 ನೇ ತಾಲೂಕ ಕನ್ನಡ ಸಾಹಿತ್ಯ ಸಮ್ಮೇಳನ ಅರ್ಥಪೂರ್ಣವಾಗಿ ಜರುಗಲೆಂದು ಕನ್ನಡಾಭಿಮಾನಿಗಳು ಹಾರೈಸೋಣ.