ಸಂವೇದನಾಶೀಲ ಲೇಖಕಿ: ಬಿ. ಟಿ. ಲಲಿತಾ ನಾಯಕ್

ಹಿಂದುಳಿದ ಲಂಬಾಣಿ ಬುಡಕಟ್ಟು ಜನಾಂಗದಲ್ಲಿ ಹುಟ್ಟಿ ಬೆಳೆದು ಸಾಹಿತ್ಯ, ಹೋರಾಟ, ರಾಜಕಾರಣ, ಸಮಾಜಸೇವೆಯಲ್ಲಿ ತೊಡಗಿಸಿಕೊಂಡು ಮಹಿಳೆಯಾಗಿಯೂ ಬಹುಮುಖ ಸಾಧನೆಗೈದವರು ಬಿ.ಟಿ.ಲಿಲಿತಾ ನಾಯಕ್. ದಲಿತ ಬಂಡಾಯ ಸಾಹಿತ್ಯ ಸಂಘಟನೆಯೊಂದಿಗೆ ಗುರುತಿಸಿಕೊಂಡ ಅವರು ಸ್ಥಾಪಿತ ವ್ಯವಸ್ಥೆಯನ್ನು ವಿರೋಧಿಸುತ್ತಲೇ ಶೋಷಿತರ ಪರವಾಗಿ ಮಾನವೀಯ ಮೌಲ್ಯದೊಂದಿಗೆ ಮಿಡಿಯುವ, ಮಹಿಳಾ ಸಮಾನತೆಯನ್ನು ಬಯಸುವ ಮನೋಧರ್ಮದ ಲೇಖಕಿಯಾಗಿದ್ದಾರೆ.

ಬಿ.ಟಿ.ಲಲಿತಾ ನಾಯಕ್ ಅವರು ಮೂಲತಃ ಚಿಕ್ಕಮಗಳೂರ ಜಿಲ್ಲೆಯ ಕಡೂರ ತಾಲೂಕಿನ ತಂಗಲಿ ತಾಂಡಾದವರು. ಅವರು 1945ರ ಎಪ್ರಿಲ್ 4ರಂದು ಜನಿಸಿದರು. ತಂದೆ ಬಾಲಾಜಿ ನಾಯಕ್, ತಾಯಿ ಗಂಗಾಬಾಯಿ. ಕೃಷಿಕರಾಗಿದ್ದ ಬಾಲಾಜಿನಾಯಕ್ ಕಲಾವಿದರಾಗಿದ್ದರು. ಲಲಿತಾನಾಯಕ್ ತಂಗಲಿ ತಾಂಡಾದ ಏಕೋಪಾಧ್ಯಾಯ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದರು. ಅವರು ಮಾಧ್ಯಮಿಕ ಶಿಕ್ಷಣಕ್ಕಾಗಿ ಕಡೂರ ಗ್ರಾಮದ ಹೆಣ್ಣುಮಕ್ಕಳ ಶಾಲೆಗೆ ಸೇರಿದರು. ನಂತರ ಅವರ ಸೋದರ ಮಾವ ಎಂ.ಆರ್.ಕೃಷ್ಣನಾಯಕ್ ಪೋಲೀಸ್ ನೌಕರಿಯಲ್ಲಿದ್ದ ಕಾರಣ ಮೈಸೂರ ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಮುಗೂರಿನ ಶಾಲೆಗೆ ಸೇರಿದರು. ಅವರಿಗೆ ಪಠ್ಯ ಪುಸ್ತಕಗಳನ್ನು ಓದುವುದಕ್ಕಿಂತಲೂ ಕಥೆ ಪುಸ್ತಕಗಳನ್ನು ಓದುವ ಹವ್ಯಾಸ ಹೆಚ್ಚಾಯಿತು. ಶಾಲೆಯಲ್ಲಿ ಗಣಿತವೊಂದನ್ನು ಹೊರತುಪಡಿಸಿ ಉಳಿದ ವಿಷಯಗಳಲ್ಲಿ ಚೆನ್ನಾಗಿ ಅಂಕಗಳಿಸುತ್ತಿದ್ದರು. ಚಿತ್ರದುರ್ಗದಲ್ಲಿ ಪ್ರೌಢಶಾಲಾ ವಿಧ್ಯಾಭ್ಯಾಸವನ್ನು ಮುಂದುವರೆಸಿದ ಲಲಿತಾನಾಯಕ್ ಅವರು ಶಾಲೆಯ ಸೇವಾದಳದಲ್ಲಿ ಸೇರಿ ಶಿಸ್ತು, ಉತ್ತಮ ನಡವಳಿಕೆಯೊಂದಿಗೆ ಸೇವಾದಳದಿಂದ ಬೆಳ್ಳಿಪದಕವನ್ನು ಅಂದಿನ ಮುಖ್ಯಮಂತ್ರಿ ನಿಜಲಿಂಗಪ್ಪ ಅವರಿಂದ ಪಡೆದುಕೊಂಡಿದ್ದರು. ಮಾವನ ಮಗಳು ಶಾಂತಾಳಿಗೆ ಮದುವೆ ನಿಶ್ಚಯವಾಗಿದ್ದರಿಂದ ಲಲಿತಾನಾಯಕ್ ಅವರಿಗೆ ಶಿಕ್ಷಣ ಮೊಟಕುಗೊಳಿಸುವ ಪ್ರಸಂಗ ಒದಗಿಬಂದಿತು. 

ಅಣ್ಣ ಬಿ.ಟಿ.ಚೂಡಾಮಣಿ ಅವರ ಸಹಕಾರದಿಂದ ಹಿಂದಿ ಪರೀಕ್ಷೆಯಲ್ಲಿ ಪ್ರಥಮಾ, ಮಾಧ್ಯಮಾದಿಂದ ವಿಶಾರದವರೆಗೂ ಉತ್ತೀರ್ಣರಾದರು. ನಂತರ ಅವರು ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ತಿಪ್ಪಾಪೂರ ತಾಂಡಾದ ಚಾಂಪ್ಲಾನಾಯಕ್ ಅವರನ್ನು ಮದುವೆಯಾಗಿ ತಿಪ್ಪಾಪೂರ ತಾಂಡಾಕ್ಕೆ ಬಂದು ನೆಲೆಸಿದರು. ಅವರ ಪತಿ ಪಿ.ಡಬ್ಲೂ.ಡಿ ಇಲಾಖೆಯ ಗುಮಾಸ್ತರಾಗಿ ಹೊಸಪೇಟೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ನಂತರ ಲಲಿತಾ ನಾಯಕ್ ಪತಿಯೊಂದಿಗೆ ಹೊಸಪೇಟೆಗೆ ಬಂದು ನೆಲೆಸಬೇಕಾಯಿತು. ಅವರು ಮನೆ ಖಚರ್ು ತೂಗಿಸಲು ಬಟ್ಟೆ ಹೊಲೆದು ಒಂದಷ್ಟು ಹಣ ಸಂಪಾದಿಸಿ, ಬಿಡುವಿನ ವೇಳೆಯಲ್ಲಿ ಕಥೆ-ಕಾದಂಬರಿ, ಪತ್ರಿಕೆ ಓದಲು ವಿನಿಯೋಗಿಸುತ್ತಿದ್ದರು. ಮೂರು ಮಕ್ಕಳೊಂದಿಗೆ ತುಂಬಾ ಸರಳ ಹಾಗೂ ನೆಮ್ಮದಿಯ ಜೀವನ ಇವರದಾಗಿತ್ತು. 

ಬಿ.ಟಿ.ಲಲಿತಾ ನಾಯಕ್ ಅವರ ಸಾಹಿತ್ಯದ ಬರವಣಿಗೆಗೆ ಪತಿ ಚಾಂಪ್ಲಾನಾಯಕ್ ಮತ್ತು ಅಣ್ಣ ಬಿ.ಟಿ.ಚೂಡಾಮಣಿ ಅವರು ಸ್ಫೂತರ್ಿಯ ಸೆಲೆಯಾಗಿದ್ದರು. ಅವರು 1963ರಲ್ಲಿ ಚಂದ್ರ ಪರಾಭವ ನಾಟಕವನ್ನು ಧಾರವಾಡ ಆಕಾಶವಾಣಿಗೆ ಕಳುಹಿಸಿದರು. ಅದು ಸ್ವೀಕೃತಗೊಂಡು ಆಕಾಶವಾಣಿಯಲ್ಲಿ ಪ್ರಸಾರವು ಆಯಿತು. ನಂತರ ಲಲಿತಾನಾಯಕ್ ಅವರು ಕಥೆ, ಕವನಗಳನ್ನು ಪತ್ರಿಕೆಗಳಿಗೆ, ದೀಪಾವಳಿ ಸಂಚಿಕೆಗಳಿಗೆ ಕಳುಹಿಸಿದರು. ಹೀಗೆ ರೇಡಿಯೋ ನಾಟಕದ ಮೂಲಕ ಸಾಹಿತ್ಯಾಸಕ್ತಿ ಬೆಳೆದು, ಸೃಜನಶೀಲ ಬರವಣಿಗೆಯಲ್ಲಿ ತೊಡಗಿಸಿಕೊಂಡರು. ತಮ್ಮ ಸಂಸಾರಿಕ ಜೀವನದಲ್ಲಿ ಅನುಭವಿಸಿದ ನೋವುಗಳನ್ನು ಬರಹರೂಪಕ್ಕಿಳಿಸಿ 'ಮೂರು ಕಾಸಿನ ಹೆಣ್ಣು' ಹಾಗೂ 'ಅವಳು ನಾನು ಮತ್ತು ಕನ್ನಡಿ ಎಂಬ ವಿಡಂಬನಾ ಲೇಖನಗಳು ಪತ್ರಿಕೆಯಲ್ಲಿ ಪ್ರಕಟವಾದಾಗ ಪತಿ ಚಾಂಪ್ಲಾನಾಯಕರು ಮೆಚ್ಚುಗೆ ಸೂಚಿಸಿದ್ದರು. 1972ರಲ್ಲಿ ಲಿಂಗಸೂಗೂರಿನ ಪರ್ವತಯ್ಯ ಮಾಸ್ತರರು ಲಲಿತಾನಾಯಕ್ ಅವರು ಬರೆದಿದ್ದ ಹತ್ತು ರೇಡಿಯೋ ನಾಟಕಗಳನ್ನು ಸೇರಿಸಿ 'ಚಂದ್ರ ಪರಾಭವ' ಎಂಬ ಸಂಕಲನವನ್ನು ಹೊರತಂದರು. ಇದು ಅವರ ಮೊಟ್ಟಮೊದಲ ಪ್ರಕಟಿತ ಕೃತಿ. 

ಅವರು ನೆಲೆ-ಬೆಲೆ, ಗತಿ ಕಾದಂಬರಿಗಳು, ನಂರೂಪ್ಲಿ, ಇದೇ ಕೂಗು  ಮತ್ತೆ ಮತ್ತೆ, ಒಡಲ ಬೇಗೆ, ಸವಾಸೇರು, ಬಿದಿರು ಮಳೆ, ಕಂಟಿಯಲಿ ಕವನಸಂಕಲಗಳು, ಹಬ್ಬ ಮತ್ತು ಬಲಿ, ಭಟ್ಟನ ಕನಸು ಕಥಾ ಸಂಕಲನಗಳು, ಚುಟುಕುಗಳು, ಕೈಹಿಡಿದು ನಡೆಸೆನ್ನನು, ರಾಯಚೂರು ತಾಲೂಕ ದರ್ಶನ, ದೇವದುರ್ಗ ತಾಲೂಕ ದರ್ಶನ, ಆತ್ಮಕಥನ, ಶಾಸಕಿಯಾಗಿ ಪ್ರವಾಸದ ಅನುಭವಗಳ ಕುರಿತ ಪ್ರವಾಸ ಕಥನ ಹೀಗೆ ಹಲವಾರು ಮೌಲಿಕ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಅಪರ್ಿಸಿದ್ದಾರೆ. ಅಲ್ಲದೇ ಅವರು 1981ರಿಂದ ಕನರ್ಾಟಕದಾದ್ಯಂತ ಹೆಸರು ಮಾಡಿದ್ದ ಲಂಕೇಶ ಪತ್ರಿಕೆಯಲ್ಲಿ ರಾಯಚೂರು ಜಿಲ್ಲೆಯ ವರದಿಗಾತರ್ಿಯಾಗಿ ಆರು ವರ್ಷಗಳ ಕಾಲ ಕಾರ್ಯನಿರ್ವಹಿಸಿ ಪತ್ರಕತರ್ೆಯಾಗಿಯೂ ಗಮನಾರ್ಹ ಸಾಧನೆ ಮಾಡಿದ್ದಾರೆ. 

ಸಾಹಿತಿ, ಪತ್ರಕತರ್ೆಯಾಗಿ, ಹೋರಾಟಗಾತರ್ಿಯಾಗಿ ಬೆಳೆದ ಲಲಿತಾ ನಾಯಕ್ ಅವರನ್ನು 1986ರಲ್ಲಿ ಮುಖ್ಯಮಂತ್ರಿಯಾದ ರಾಮಕೃಷ್ಣ ಹೆಗಡೆ ಅವರು ಕನರ್ಾಟಕ ವಿಧಾನಪರಿಷತ್ಗೆ ನಾಮಕರಣ ಸದಸ್ಯೆಯಾಗಿ ನೇಮಕ ಮಾಡುತ್ತಾರೆ. 1986ರಿಂದ 1992ರವರೆಗೆ ಆರು ವರ್ಷಗಳ ಕಾಲ ಸೇವೆ ಸಲ್ಲಿಸಿದ ಲಲಿತಾ ನಾಯಕ್ ಅವರು ಆ ಸಂದರ್ಭದಲ್ಲಿ ಕನ್ನಡಭಾಷೆ, ನೆಲ, ಜಲದ ಬಗ್ಗೆ ಹಾಗೆಯೇ ದೀನ ದಲಿತರಿಗೆ ನ್ಯಾಯ ದೊರಕಿಸುವುದು ಮತ್ತು ಅಂದಿನ ಪ್ರಚಲಿತ ವಿದ್ಯಾಮಾನಗಳ ಬಗ್ಗೆ ಸಕರ್ಾರದ ಗಮನ ಸೆಳೆದು ಮಾಡಿದ ಭಾಷಣ ಹಾಗೂ ಪ್ರಸ್ತಾಪಗಳು ಇಂದಿಗೂ ಅಪೂರ್ವವಾಗಿ ದಾಖಲಾಗಿವೆ. ಅವರು 1994ರಲ್ಲಿ ರಾಯಚೂರ ಜಿಲ್ಲೆಯ ದೇವದುರ್ಗ ಮೀಸಲು ಕ್ಷೇತ್ರದಿಂದ ಜನತಾದಳ (ಎಸ್) ಪಕ್ಷದಿಂದ ಸ್ಪಧರ್ಿಸಿ ಜಯಗಳಿಸಿದರು. ಅಂದಿನ ಮುಖ್ಯಮಂತ್ರಿಗಳಾದ ಎಚ್.ಡಿ.ದೇವೆಗೌಡರು ತಮ್ಮ ಸಚಿವ ಸಂಪುಟದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳಿಗೆ ಮಂತ್ರಿಯಾಗಿ ನೇಮಿಸಿದರು. ಇದರಿಂದಾಗಿ ಹಿಂದುಳಿದ ಲಂಬಾಣಿ ಬುಡಕಟ್ಟು ಜನಾಂಗದಲ್ಲಿ ಮಂತ್ರಿ ಪದವಿ ಸ್ವೀಕರಿಸಿದ ಮೊಟ್ಟ ಮೊದಲ ಮಹಿಳೆ ಲಲಿತಾ ನಾಯಕರು ಆಗಿದ್ದಾರೆ. ಹೀಗೆ ಮಂತ್ರಿಯಾಗಿ ಕಾರ್ಯ ಪ್ರವೃತ್ತರಾಗಿರುವಾಗಲೇ ಪತಿ ಚಾಂಪ್ಲಾನಾಯಕ ಅವರು ಮರಣ ಹೊಂದಿದ್ದು ಅವರ ಮನಸ್ಸಿಗೆ ದೊಡ್ಡ ಆಘಾತವಾಗುತ್ತದೆ. ನಂತರ ಅವರು ರಾಜಕೀಯ ದುರುದ್ದೇಶದಿಂದ ಅನಗತ್ಯವಾಗಿ 1995ರ ಡಿಸೆಂಬರದಲ್ಲಿ ಮಂತ್ರಿ ಪದವಿಗೆ ರಾಜೀನಾಮೆ ನೀಡುತ್ತಾರೆ. ಒಂದು ವರ್ಷದ ಅವಧಿಯವರೆಗೆ ಸಚಿವೆಯಾಗಿದ್ದ ಅವರು ಉತ್ತಮ ಕಾರ್ಯಗಳನ್ನು ಮಾಡಿದ್ದಾರೆ. ಸರಕಾರಿ ಶಾಲಾ ವಿದ್ಯಾಥರ್ಿಗಳಿಗೆ ಮಧ್ಯಾಹ್ನದ ಊಟ, ಸಮವಸ್ತ್ರ ವಿತರಣೆ ಆರಂಭಿಸಿದ್ದು ಅವರು ಮಂತ್ರಿಯಾಗಿದ್ದಾಗಲೇ. ಗ್ರಾಮೀಣ ಪ್ರದೇಶಗಳ ವಿದ್ಯಾಥರ್ಿಗಳಿಗೆ ಉಚಿತ ಬಸ್ ಪಾಸ್ ನೀಡಿದ್ದು, ಅನಾರೋಗ್ಯ ಪೀಡಿತ ಕಲಾವಿದರಿಗೆ ಐವತ್ತು ಸಾವಿರ ಸಹಾಯಧನ ನೀಡಿದ್ದು ಮತ್ತು ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದ ಅಂಗನವಾಡಿ ಕಾರ್ಯಕತರ್ೆಯರಿಗೆ ಮೇಲ್ವಿಚಾರಕರ ಹುದ್ದೆ ನೀಡಿದ್ದು ಇವರ ಹೆಗ್ಗಳಿಕೆ. ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಲೇಖಕಿಯರಿಗೆ 'ದಾನ ಚಿಂತಮಣಿ ಅತ್ತಿಮಬ್ಬೆ ಪ್ರಶಸ್ತಿ ಸ್ಥಾಪಿತವಾಗಿದ್ದು ಅವರು ಮಂತ್ರಿಯಾಗಿದ್ದ ಸಂದರ್ಭದಲ್ಲಿಯೇ. ಹೀಗೆ ಹಲವಾರು ಜನಪರ ಮತ್ತು ಅಭಿವೃದ್ದಿ ಕೆಲಸಗಳಿಂದ ಉತ್ತಮ ಶಾಸಕಿ ಮತ್ತು ಸಚಿವೆ ಎನಿಸಿಕೊಂಡರು.

1993ರಲ್ಲಿ ಸಿನಿಮಾ ಕ್ಷೇತ್ರಕ್ಕೂ ಕಾಲಿರಿಸಿದ ಅವರು 'ಝಾಡಿರೋ ಪಂಖೇರು' ಎಂಬ ಲಂಬಾಣಿ ಭಾಷಾ ಚಲನಚಿತ್ರಕ್ಕೆ ಕಥೆ-ಸಂಭಾಷಣೆಯನ್ನು ಸಿದ್ಧಪಡಿಸಿಕೊಟ್ಟಿದ್ದಲ್ಲದೇ ಅದರಲ್ಲಿ ತಾಯಿ ಪಾತ್ರದಲ್ಲಿ ಅಭಿನಯಿಸಿ ಸೈ ಎನಿಸಿಕೊಂಡರು. ಅವರು ನಾಡಿನ ಹಲವಾರು ಸಂಘ-ಸಂಸ್ಥೆಗಳ ಪ್ರತಿನಿಧಿಗಳಾಗಿಯೂ ಸೇವೆ ಸಲ್ಲಿಸಿದ್ದಾರೆ. ಕನರ್ಾಟಕ ಲೇಖಕಿಯರ ಸಂಘ, ರಾಯಚೂರ ಜಿಲ್ಲಾ ಬಂಜಾರಾ ಸಂಘದ ಅಧ್ಯಕ್ಷೆ, ಕಲಬುಗರ್ಿ ವಿಶ್ವವಿದ್ಯಾಲಯದ ಅಕಾಡೆಮಿಕ್ ಕೌನ್ಸಿಲ್, ಸೆನೆಟ್ ಹಾಗೂ ಸಿಂಡಿಕೇಟ್ ಸದಸ್ಯೆ, ಕನರ್ಾಟಕ ಸಾಹಿತ್ಯ ಅಕಾಡೆಮಿ ಸದಸ್ಯೆ, ಕನರ್ಾಟಕ ರಾಜ್ಯ ಲಂಬಾಣಿ ಒಕ್ಕೂಟದ ಅಧ್ಯಕ್ಷೆ, ರಾಜ್ಯಮಟ್ಟದ ಅಂಗನವಾಡಿ ಶಿಕ್ಷಕಿಯರ ಮತ್ತು ಕಾರ್ಯಕತರ್ೆಯರ ಸಂಘದ ಅಧ್ಯಕ್ಷೆ, ಕಡೂರ ತಾಲೂಕ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ, ಬಂಜಾರಾ ಸೇವಾ ಸಂಘದ ಅಧ್ಯಕ್ಷೆ, ರಾಜ್ಯ ಬಾಲ ಭವನ ಸೊಸೈಟಿ ಅಧ್ಯಕ್ಷೆ, ಹೀಗೆ ಇನ್ನು ಅನೇಕ ಕನ್ನಡ ಸಂಘಟನೆಗಳು, ಕಾಮರ್ಿಕ ಸಂಘಟನೆಗಳ ಪದಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ. 

ಬಿ.ಟಿ.ಲಲಿತಾ ನಾಯಕ್ ಅವರ ಸಾಹಿತ್ಯ ಮತ್ತು ಸಮಾಜ ಸೇವೆಗೆ ಹಲವು ಪ್ರಶಸ್ತಿ ಪುರಸ್ಕಾರಗಳು ಅವರನ್ನರಸಿಕೊಂಡು ಬಂದಿವೆ. ಉತ್ತಮ ಶಾಶಕಿ ಪ್ರಶಸ್ತಿ, ಕನರ್ಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜೀವಗಾಂಧಿ ರಾಷ್ಟ್ರೀಯ ಏಕತಾ ಪ್ರಶಸ್ತಿ, ಸಾವಿತ್ರಮ್ಮ ದೇ.ಜಿ.ಗೌ. ಮಹಿಳಾ ಪ್ರಶಸ್ತಿ, ನಾಡಚೇತನ ಪ್ರಶಸ್ತಿ, ಕಿರಣಪ್ರಭ ಪ್ರಶಸ್ತಿ, ಡಾ.ಚೆನ್ನಬಸವ ಪಟ್ಟದೇವರ ಮಕ್ಕಳ ಸಾಹಿತ್ಯ ಪ್ರಶಸ್ತಿ, ಮಹಿಳಾ ರತ್ನ ಪ್ರಶಸ್ತಿ, ಎಚ್.ಡಿ.ದೇವೆಗೌಡ ಪ್ರಶಸ್ತಿ, ದಾನ ಚಿಂತಾಮಣಿ ಅತ್ತಿಮಬ್ಬೆ  ಪ್ರಶಸ್ತಿ, ಕನರ್ಾಟಕ ಲೇಖಕಿಯರ ಸಂಘದ ಅನುಪಮಾ ಪ್ರಶಸ್ತಿ, ಕುವೆಂಪು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಹೀಗೆ ಹತ್ತು ಹಲವು ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದಾರೆ. ಲಲಿತಾ ನಾಯಕ್ ಅವರು ರಚಿಸಿದ ಕತೆಗಳು ಮತ್ತು ಕವಿತೆಗಳು ವಿವಿಧ ವಿಶ್ವವಿದ್ಯಾನಿಲಯಗಳ ಪಠ್ಯಗಳಾಗಿವೆ. ಮಲ್ಲಿಕಾ ಘಂಟಿ ಅವರು ತಮ್ಮ 'ಕನ್ನಡ ಮಹಿಳಾ ಕಥಾ ಸಾಹಿತ್ಯ ಒಂದು ಅಧ್ಯಯನ' ಎಂಬ ಪಿಎಚ್.ಡಿ ಮಹಾಪ್ರಬಂಧದಲ್ಲಿ ಲಲಿತಾನಾಯಕ್ ಅವರ ಕಥೆಗಳನ್ನು ಅಧ್ಯಯನಕ್ಕೊಳಪಡಿಸಿದ್ದಾರೆ. ವೈಜನಾಥ ಹಿರೇಮಠ ಅವರು 'ಬಿ.ಟಿ.ಲಲಿತಾ ನಾಯಕ್ರವರ ಕಥೆ-ಕಾದಂಬರಿಗಳು ಒಂದು ಅಧ್ಯಯನ' ಎಂಬ ಶೀಷರ್ಿಕೆಯಡಿಯಲ್ಲಿ ಸಿದ್ದಪಡಿಸಿದ ಎಂ.ಫಿಲ್. ಪ್ರಬಂಧಕ್ಕೆ ಕಲುಬುಗರ್ಿ ವಿಶ್ವವಿದ್ಯಾನಿಲಯದಿಂದ ಎಂ.ಫಿಲ್. ಪದವಿ ಪಡೆದಿರುತ್ತಾರೆ. ಅಲ್ಲದೇ ಅವರ ಜೀವನ ಮತ್ತು ಸಾಹಿತ್ಯ ಕುರಿತು ಎಂ.ರವಿ ನಾಯಕ್ ಅವರು ಕುವೆಂಪು ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿ ಪಡೆದಿದ್ದಾರೆ. 

ಸಾಹಿತಿ ಬಿ.ಟಿ.ಲಲಿತಾ ನಾಯಕ್ ಅವರು ಉನ್ನತ ಮಟ್ಟದ ಶಿಕ್ಷಣವನ್ನೇನು ಪಡೆಯದೆ ಕೇವಲ ಎಂಟನೆ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿ ತಮ್ಮ ಜೀವನಾನುಭಾವಗಳನ್ನೇ ಶಿಕ್ಷಣವನ್ನಾಗಿ ರೂಪಿಸಿಕೊಂಡು ಮಹತ್ವದ ಸಾಧನೆ ಮಾಡಿರುವ ಅಪರೂಪದ ಮಹಿಳೆ. ತಮ್ಮ ನಡೆ-ನುಡಿಯ ಮೂಲಕ ಸರಳ ಹಾಗೂ ಶಿಸ್ತಿನ ಜೀವನ ನಡೆಸುತ್ತಿರುವ ಅವರು ಬದುಕು ಮತ್ತು ಬರಹವನ್ನು ಒಂದಾಗಿಸಿಕೊಂಡವರಾಗಿದ್ದಾರೆ. ಸಧ್ಯ ಅವರು ಮೂರು ಮಕ್ಕಳು, ಸೊಸೆಯಂದಿರು ಮತ್ತು ಮೊಮ್ಮಕ್ಕಳ ತುಂಬು ಕುಟುಂಬದ ಜೊತೆ ಬೆಂಗಳೂರಿನಲ್ಲಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಭಾರತದಲ್ಲಿ ಲಂಬಾಣಿ ಜನಾಂಗದ ಪ್ರಪ್ರಥಮ ಮಹಿಳಾ ಸಚಿವೆ ಎಂಬ ಹೆಗ್ಗಳಿಕೆ ಅವರದು.