ಜೀವನದಲ್ಲಿ ತೃಪ್ತಿ, ಸಂತೋಷ ಮತ್ತು ಆಧ್ಯಾತ್ಮಿಕ ಶಕ್ತಿ ಅಗತ್ಯವಾಗಿದ್ದು, ‘ಪ್ರತಿ ದಿನವೂ ಮಹಿಳಾ ದಿನವೇ’

ಜೀವನದಲ್ಲಿ ತೃಪ್ತಿ, ಸಂತೋಷ ಮತ್ತು ಆಧ್ಯಾತ್ಮಿಕ ಶಕ್ತಿ ಅಗತ್ಯವಾಗಿದ್ದು, ‘ಪ್ರತಿ ದಿನವೂ ಮಹಿಳಾ ದಿನವೇ’ Satisfaction, happiness and spiritual strength are essential in life, and 'every day is Women's Day

ವಿಜಯಪುರ 10 :  ಮಹಿಳೆ ಒಂದು ವಿಶ್ವವಿದ್ಯಾನಿಲಯಕ್ಕೆ ಸಮ. ಮಹಿಳೆಯರು ಇಂದು ವಿಜ್ಞಾನ ಕ್ಷೇತ್ರವೂ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ಪುರುಷರಿಗೆ ಸರಿಸಮಾನಾಗಿ ಕೆಲಸ ಮಾಡುತ್ತಿದ್ದಾರೆ ಎಂದು ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿಯ (ದಕ್ಷಿಣ) ಅಧ್ಯಕ್ಷೆ ಡಾ.ಮೀನಾ ಚಂದಾವರಕರ ಹೇಳಿದರು.  ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಭಾಸ್ಕರಾಚಾರ್ಯ ಅಧ್ಯಯನ ಪೀಠದ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ-2026 ಉದ್ಘಾಟಿಸಿ ಅವರು ಮಾತನಾಡಿದರು. 

‘ಕೊಟ್ಟರೆ ಪಡೆಯಬಹುದು’ ಎಂಬ ತತ್ವದೊಂದಿಗೆ, ಕುಟುಂಬ ಮತ್ತು ಸಮಾಜದಲ್ಲಿ ಪುರುಷರ ಸಹಕಾರದಿಂದ ಮಹಿಳೆಯರು ಇಂದು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜೊತೆಗೆ ಒಳ್ಳೆಯತನವೆಂಬುದು ಎಂದಿಗೂ ವಿಫಲವಾಗದ ಹೂಡಿಕೆ ಎಂದು ಹೇಳಿದ ಅವರು, ಸದಾ ದಯಾಳು ಮತ್ತು ಸಹಾಯ ಮನೋಭಾವದಿಂದ ಬದುಕಬೇಕು, ಪ್ರಾರ್ಥನೆ ಮಾಡುವ ಕೈಗಳಿಗಿಂತ ಸಹಾಯ ಮಾಡುವ ಕೈಗಳು ಮಹತ್ತರವಾದವು. ಜೀವನದಲ್ಲಿ ತೃಪ್ತಿ, ಸಂತೋಷ ಮತ್ತು ಆಧ್ಯಾತ್ಮಿಕ ಶಕ್ತಿ ಅಗತ್ಯವಾಗಿದ್ದು, ‘ಪ್ರತಿ ದಿನವೂ ಮಹಿಳಾ ದಿನವೇ’ ಎಂದರು. 

ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ-2025 ಪುರಷ್ಕೃತ ಪ್ರಕಾಶ ಗೌಡರ ಮಾತನಾಡಿ, ವಿಜ್ಞಾನದ ಅಭಿವೃದ್ಧಿಯೊಂದಿಗೆ ಸಮಾಜದಲ್ಲಿಯೂ ಹಲವು ಬದಲಾವಣೆಗಳು ಸಂಭವಿಸುತ್ತಿದ್ದು, ಇಂದು ಕೃತಕ ಬುದ್ಧಿಮತ್ತೆ ಯುಗಕ್ಕೆ ನಾವು ಕಾಲಿಟ್ಟಿದ್ದೇವೆ. ಇದರಿಂದ ಮಾನವರು ತಮ್ಮ ಕೆಲಸವನ್ನು ಕಳೆದುಕೊಳ್ಳುವುದಿಲ್ಲ; ಪ್ರಕೃತಿ ಇರುವವರೆಗೆ ಮಾನವ ಅಭಿವೃದ್ಧಿ ಮುಂದುವರಿಯುತ್ತದೆ ಎಂದು ಅಭಿಪ್ರಾಯಪಟ್ಟರು 

ಕಾರ್ಯಕ್ರಮದಲ್ಲಿ ಸಿಂಡಿಕೇಟ್ ಸದಸ್ಯೆ ಡಾ.ಮಾಧುರಿ ಡಿ ಬಿರಾದಾರ್ ಮಾತನಾಡಿ, ಮಹಿಳೆಯರು ವಿಜ್ಞಾನ ಕ್ಷೇತ್ರದಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಹಿಂದಿನ ಕಾಲದಲ್ಲಿ ಮಹಿಳೆಯರಿಗೆ ಶಿಕ್ಷಣ ಮತ್ತು ಸಂಶೋಧನೆ ಮಾಡುವ ಅವಕಾಶಗಳು ಕಡಿಮೆ ಇದ್ದರೂ, ಇಂದಿನ ಕಾಲದಲ್ಲಿ ಮಹಿಳೆಯರು ವಿಜ್ಞಾನದಲ್ಲಿ ದೊಡ್ಡ ಸಾಧನೆಗಳನ್ನು ಮಾಡುತ್ತಿದ್ದಾರೆ.  ತಂತ್ರಜ್ಞಾನ, ಅಂತರಿಕ್ಷ ವಿಜ್ಞಾನ, ಜೀವ ವಿಜ್ಞಾನ ಕ್ಷೇತ್ರಗಳಲ್ಲಿ ಮಹಿಳೆಯರು ತಮ್ಮ ಪ್ರತಿಭೆಯನ್ನು ತೋರಿಸಿದ್ದಾರೆ ಎಂದರು.  

ಕಾರ್ಯಕ್ರಮದಲ್ಲಿ ವಿಜಯಪುರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಗಂಗಾಧರ ಎಸ್ ಸಂಬಣ್ಣಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿ, ವಿಜ್ಞಾನ ದಿನಾಚರಣೆ ಕೇವಲ ಒಂದು ದಿನದ ಸಂಭ್ರಮವಾಗದೇ ನಮ್ಮ ದಿನನಿತ್ಯದ ಬದುಕಿನ ಪ್ರತಿಯೊಂದು ಹೆಜ್ಜೆಯಲ್ಲೂ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ಪ್ರಶ್ನಿಸುವ ಮತ್ತು ಅನ್ವೇಷಿಸುವ ಹಂಬಲವು ವಿದ್ಯಾರ್ಥಿಗಳಲ್ಲಿ ಸದಾ ಜೀವಂತವಾಗಿರಬೇಕು ಎಂದರು.  

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ ಮಾತನಾಡಿ, ಮಹಿಳೆಯರನ್ನು ಹುರಿದುಂಬಿಸುವುದು ಅತ್ಯಂತ ಅಗತ್ಯವಾಗಿದ್ದು ಇದರಿಂದ ಮಹಿಳೆಯರಿಗೆ ಹೆಚ್ಚಿನ ಅವಕಾಶಗಳು ದೊರೆಯುತ್ತವೆ. ಈ ಅವಕಾಶಗಳ ಮೂಲಕ ಅವರು ವಿವಿಧ ಹುದ್ದೆಗಳಲ್ಲಿ ಸಾಧನೆ ಮಾಡಬಹುದು ಮತ್ತು ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರ ಪಾತ್ರ ಅಪಾರವಾಗಿದೆ. ಸುಧಾ ಮೂರ್ತಿ ಅವರಂತಹ ಮಹಿಳೆಯರು ಇಂದು ಸಮಾಜಕ್ಕೆ ಸ್ಪೂರ್ತಿದಾಯಕ ವ್ಯಕ್ತಿಗಳಾಗಿದ್ದಾರೆ ಎಂದು ಉಲ್ಲೇಖಿಸಿದರು. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಮಹಿಳೆಯರು ಹೆಮ್ಮೆಯ ವಿಜ್ಞಾನಿಗಳಾಗಿ ಹೊರಹೊಮ್ಮಬೇಕು ಎಂದು ಆಶಿಸಿದರು. 

ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗಳಿಸಿದ ವಿದ್ಯಾರ್ಥಿನಿಯರಿಗೆ ಅತಿಥಿಗಳಿಂದ ಪ್ರಶಸ್ತಿ ಪತ್ರ ವಿತರಿಸಲಾಯಿತು. ಡಾ.ನಟರಾಜ ದುರ್ಗಣ್ಣವರ ಕಾರ್ಯಕ್ರಮವನ್ನು ನಡೆಸಿಕೊಟ್ಟರು.  ಕಾರ್ಯಕ್ರಮದಲ್ಲಿ ಮಹಿಳಾ ಸಾಂಸ್ಕೃತಿಕ ಹಬ್ಬದ ಸದಸ್ಯ ಕಾರ್ಯದರ್ಶಿ ಪ್ರೊ.ಲಕ್ಷ್ನಿದೇವಿ ವೈ., ಕಂಪ್ಯೂಟರ್ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ.ಅಜೀಜ ಮಕಾಂದಾರ, ಸಿಂಡಿಕೇಟ್ ಹಾಗೂ ಅಕಾಡೆಮಿಕ್ ಕೌನ್ಸಿಲ್ ಸದಸ್ಯರು,  ವಿವಿಧ ನಿಕಾಯಗಳ ಡೀನರು, ವಿವಿಯ ಸ್ನಾತಕ ಹಾಗೂ ಸ್ನಾತಕೋತರ ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.  

ಕಾರ್ಯಕ್ರಮದಲ್ಲಿ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಭಾಗದ ವಿದ್ಯಾರ್ಥಿನಿಯರು ಮಹಿಳಾ ಗೀತೆ ಹಾಗೂ ಪ್ರಾರ್ಥನಾ ಗೀತೆ ಹಾಡಿದರು. ಡಾ.ಬಾಬು ಲಮಾಣಿ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ.ಸವಿತಾ ಹುಲಮನಿ ಅತಿಥಿಯರನ್ನು ಪರಿಚಯಿಸಿದರು. ಡಾ.ಸಂಜೀವಕುಮಾರ ಗಿರಿ ರಾಷ್ಟ್ರೀಯ ವಿಜ್ಞಾನ ದಿನದ ಚಟುವಟಿಕೆಗಳ ವರದಿ ವಾಚಿಸಿದರು. ಡಾ.ಜಾಯ್ ಹೊಸಕೇರಿ ವಂದಿಸಿದರು. ಡಾ.ರೋಹಿಣಿ ಭುಸನೂರಮಠ ಸಂವಿಧಾನ ಪ್ರಸ್ತಾವನೆ ಓದಿಸಿ ನಿರೂಪಿಸಿದರು.