ಸಂಗನಬಸವ ಶ್ರೀಗಳ ಸಾಮಾಜಿಕ ಕಳಕಳಿ ಮಹತ್ವದಾಗಿದೆ : ಅಜ್ಜಂಪೀರ ಖಾದ್ರಿ
ಶಿಗ್ಗಾವಿ 4: ಶರಣ ಸಂಸ್ಕೃತಿಯ ಮೂಲಕ ಮಾನವ ಕುಲದ ಒಳಿತಿಗಾಗಿ ನಿರಂತರವಾಗಿ ಸೇವೆ ಸಲ್ಲಿಸುತ್ತಾ ಬಂದಿರುವ ಸಂಗನಬಸವ ಮಹಾಸ್ವಾಮಿಗಳ ಈ ವಿರಕ್ತಮಠದ ಮತ್ತು ಸಂಗನಬಸವ ಮಹಾಸ್ವಾಮಿಗಳ ಸಾಮಾಜಿಕ ಕಳಕಳಿ ಮಹತ್ವದಾಗಿದೆ ಎಂದು ಹುಬ್ಬಳ್ಳಿ ಹೆಸ್ಕಾಂ ನಿಗಮದ ಅಧ್ಯಕ್ಷ ಸೈಯದ್ ಅಜ್ಜಂಪೀರ್ ಖಾದ್ರಿ ಹೇಳಿದರು. ಪಟ್ಟಣದ ವಿರಕ್ತಮಠದಲ್ಲಿ ನಡೆದ 32ನೇ ಶರಣ ಸಂಸ್ಕೃತಿ ಉತ್ಸವ-2025 ಮತ್ತು ಲಿಂಗೈಕ್ಯ ಸಂಗನಬಸವ ಸ್ವಾಮೀಜಿ ಹಾಗೂ ಬಸವಲಿಂಗ ಸ್ವಾಮೀಜಿ ಪುಣ್ಯಾರಾಧನೆ ಅಂಗವಾಗಿ ನಡೆದ ಮೊದಲ ದಿನದ ಧರ್ಮ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದುತ್ತಾ ಲೋಕಕಲ್ಯಾಣಕ್ಕಾಗಿ ತಮ್ಮನ್ನು ತೊಡಗಿಸಿಕೊಂಡು,ಸಮಾಜಕ್ಕೆ ವೈಚಾರಿಕತೆಯ ಸ್ಪರ್ಶ ನೀಡಲು ಈ ನಾಡಿನಲ್ಲಿ ಅನೇಕ ಶರಣರು, ಮಹಾತ್ಮರು ತಮ್ಮದೆ ಸೇವೆ ಸಲ್ಲಿಸಿದ್ದಾರೆ ಎಂದು ಹೇಳಿದರು. ಹಾವೇರಿ ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಸಾನ್ನಿದ್ಯ ವಹಿಸಿ, ನಾವು ಮಾಡುವ ಧರ್ಮಕಾರ್ಯಗಳು ನಮ್ಮ ಮುಂದಿನ ಪೀಳಿಗೆಯ ಒಳಿತಿಗಾಗಿ, ಸಮಾಜದ ಉದ್ದಾರಕ್ಕಾಗಿ. ಶಿಗ್ಗಾವಿ ವಿರಕ್ತಮಠ ಭಾವೈಕ್ಯತೆಯ ಮಠ, ಭಕ್ತರಿಗೆ ಮಠ ಎಲ್ಲವನ್ನೂ ನೀಡಿದೆ, ಸರ್ವ ಸಮುದಾಯಗಳನ್ನು ಒಗ್ಗೂಡಿಸುವ ಜೊತೆಗೆ ಈಗಿನ ಶ್ರೀಗಳು ಎಲ್ಲ ಸಮುದಾಯಗಳ ಏಳಿಗೆಗೆ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.ಸೀತಾಗಿರಿ ಎ. ಸಿ. ವಾಲಿ ಮಹಾರಾಜರು ಪ್ರವಚನ ನೀಡಿ, ಮಹಾತ್ಮರ, ಶರಣರ ವಚನಗಳು ಮನುಕುಲಕ್ಕೆ ಆದರ್ಶ ಮಾರ್ಗದರ್ಶಿಯಾಗಿವೆ. ಅಂತಹ ವಚನಗಳನ್ನು ರಕ್ಷಣೆ ಮಾಡುವ ಹೊಣೆ ನಮ್ಮದಾಗಿದೆ ಎಂದರು. ವಿರಕ್ತಮಠದ ಸಂಗನಬಸವ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಕಾಂಗ್ರೇಸ ಮುಖಂಡ ರಾಜು ಕುನ್ನೂರ, ಪುಟ್ಟರಾಜ ಕವಿಗವಾಯಿಗಳ ಸಂಘದ ಅಧ್ಯಕ್ಷ ಫಕ್ಕೀರೇಶ ಕೊಂಡಾಯಿ ಮಾತನಾಡಿದರು. ಗೌರವಾಧ್ಯಕ್ಷ ಕೊಟ್ರೇಶ ಮಾಸ್ತರ ಬೆಳಗಲಿ, ಜಾನಪದ ತಜ್ಞ ಬಸವರಾಜ ಶಿಗ್ಗಾವಿ,ಎಸ್. ಎನ್. ಮುಗಳಿ, ಶಿವಯ್ಯ ಕಳ್ಳಿಮಠ, ಅಶೋಕ ರಾಯ್ಕರ, ರಾಮಣ್ಣ ಕಬನೂರ, ನಾಗರಾಜ ಪಾಲನಕರ, ನಾಗಪ್ಪ ವಾಲ್ಮೀಕಿ, ಶಶಿಕಾಂತ ಹಿತ್ತಲಕೇರಿ, ಉಳವಯ್ಯ ಕುಂಬಾರಗೇರಿಮಠ, ಮಂಜುನಾಥ ಹಾದಿಮನಿ ಸೇರಿದಂತೆ ದೇವಸ್ಥಾನ ಸೇವಾ ಸಮಿತಿ ಸದಸ್ಯರು ಇದ್ದರು.ಭಾಕ್ಸ ಸುದ್ದಿ : ಬೆಳಿಗ್ಗೆ ಕತೃ ಗದ್ದುಗೆಗೆ ರುದ್ರಾಭಿಷೇಕ, ಸಹಸ್ರಬಿಲ್ವಾರ್ಚನೆ, ಕಾರ್ಯಕ್ರಮಗಳು ಉಳವಯ್ಯ ಬಮ್ಮಿಗಟ್ಟಿಮಠ ಸ್ವಾಮೀಜಿ, ಬಸವಲಿಂಗ ದೇವರು ಅವರಿಂದ ಜರುಗಿದವು. ಷಟಸ್ಥಲ ಧ್ವಜಾರೋಹಣವನ್ನು ಸವಣೂರ ಮಹಾಂತ ಸ್ವಾಮೀಜಿ ನೆರವೇರಿಸಿದರು.ವಿವಿಧ ಕ್ಷೇತ್ರದಲ್ಲಿನ ಸಾಧಕರಿಗೆ ಮತ್ತು ಸೇವಾಧಾರಿಗಳಿಗೆ, ದಾನಿಗಳಿಗೆ ಸನ್ಮಾನ ನೆರವೇರಿಸಲಾಯಿತು. ನಂತರ ನಟರಾಜ ನಾಟ್ಯ ಶಾಲೆ ಮಕ್ಕಳಿಂದ ಭರತ ನಾಟ್ಯ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.