ಶ್ರದ್ದೆ ಭಕ್ತಿಗಳಿಂದ ನಾರಾಯಣನನ್ನು ಆರಾಧಿಸಿ ಉಪವಾಸ ಆಚರಿಸಿದಲ್ಲಿ ಮೋಕ್ಷ
ಕಂಪ್ಲಿ 10: ಪಟ್ಟಣದ ಸತ್ಯನಾರಾಯಣ ಪೇಟೆಯ ವೆಂಕಟರಮಣ ದೇವಸ್ಥಾನದಲ್ಲಿ ಶುಕ್ರವಾರ ವೈಕುಂಠ ಏಕಾದಶಿ ಜರುಗಿತು. ಇಲ್ಲಿನ ಶ್ರೀಮನ್ನಾರಾಯಣಾಶ್ರಮದ ಪರಮಹಂಸ ನಾರಾಯಣ ವಿದ್ಯಾಭಾರತಿಶ್ರೀಗಳು ಮಾತನಾಡಿ, ಪ್ರತಿವರ್ಷದ ಆಷಾಢ ಶುದ್ಧ ಏಕಾದಶಿ, ಕಾರ್ತೀಕ ಶುದ್ಧ ಏಕಾದಶಿ, ಪುಷ್ಯ ಶುದ್ಧ ಏಕಾದಶಿಗಳು ಅತ್ಯಂತ ಪವಿತ್ರವಾಗಿವೆ. ಪ್ರತಿವರ್ಷದ ಆಷಾಢ ಶುದ್ಧ ವೈಕುಂಠ ಏಕಾದಶಿಯಂದು ಉತ್ತರದ್ವಾರದಿಂದ ಶ್ರೀಮನ್ನಾರಾಯಣನ ದರ್ಶನ ಮಾಡಿದಲ್ಲಿ ಮೋಕ್ಷ ಪ್ರಾಪ್ತಿಯಾಗುತ್ತದೆ. ವೈಕುಂಠ ಏಕಾದಶಿಯಂದು ವೈಕುಂಠದ ಬಾಗಿಲು ತೆರೆದಿದ್ದು, ದೇವತೆಗಳು ನಾರಾಯಣನ ದರ್ಶನ ಪಡೆಯುತ್ತಾರೆಂಬುದು ಪುರಾಣ ಪ್ರತೀತಿಯಿದ್ದು, ಅನನ್ಯ ಶ್ರದ್ದೆ ಭಕ್ತಿಗಳಿಂದ ನಾರಾಯಣನನ್ನು ಆರಾಧಿಸಿ ಉಪವಾಸ ಆಚರಿಸಿದಲ್ಲಿ ಮೋಕ್ಷ ಸಾಧನೆಯಾಗುತ್ತದೆ ಎಂದು ಹೇಳಿದರು. ವೈಕುಂಠ ಏಕಾದಶಿ ನಿಮಿತ್ತ ಶ್ರೀಮನ್ನಾರಾಯಣ ಪ್ರತಿಮೆಯನ್ನು ಫಲಪುಷ್ಪಾಧಿಗಳಿಂದ ಅಲಂಕರಿಸಲಾಗಿತ್ತು. ಪಂಚಾಮೃತಸಹಿತ ಅಷ್ಟೋತ್ತರ ಸಹಸ್ರನಾಮ, ಶ್ರೀಸೂಕ್ತ, ಪುರುಷ ಸೂಕ್ತ ಸೇರಿ ಹೋಮಹವನಾದಿ ನಾನಾ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಸೇವಾಧರ್ಮದರ್ಶಿಗಳಾದ ವೈಷ್ಣವಿ ಕೃಷ್ಣಮೂರ್ತಿ, ಲಲಿತಾರಾಣಿ ಗೀರೀಶ್, ರೂಪಾ ಗುರುಪ್ರಸಾದ್, ಸವಿತಾಶಶಿಧರ್, ಭಗವತಿ, ಆಶ್ವತ್ಥನಾರಾಯಣ, ಸಂಪತ್, ಜಯಂತಶ್ರೀ ವರ್ಷ, ವೆಂಕಟಪತಿ ನರಗುಂದ ಸೇರಿ ಸದ್ಭಕ್ತರು ಪಾಲ್ಗೊಂಡಿದ್ದರು.