ಸಖಿ ಒನ್ ಸ್ಟಾಫ್ ಸೆಂಟರ್ ಕೇಂದ್ರ ವಾಹನಗಳಿಗೆ ಜಿಲ್ಲಾಧಿಗಳಿಂದ ಚಾಲನೆ
ಹಾವೇರಿ 24: ಸಖಿ ಕೇಂದ್ರದ ಮಹಿಳೆಯರ ರಕ್ಷಣೆ ಹಾಗೂ ತುರ್ತು ನೆರವು, ದೂರ ಪ್ರದೇಶಗಳಲ್ಲಿ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುವ ಮಹಿಳೆಯರಿಗೆ ಸಂಕಷ್ಟ ಪರಿಸ್ಥಿತಿಗಳಲ್ಲಿ ವಾಹನ ಸೌಲಭ್ಯ ಒದಗಿಸಲು ಮಂಜೂರಾದ ಬಾಡಿಗೆ ವಾಹನಕ್ಕೆ ಹಾಗೂ ಜಿಲ್ಲಾ ಸಬಲೀಕರಣ ಘಟಕ ಯೋಜನೆಯ ಕಾರ್ಯ ಚಟುವಟಿಕೆಗಳ ಅನುಕೂಲಕ್ಕಾಗಿ ಮಂಜೂರಾದ ಬಾಡಿಗೆ ವಾಹನಕ್ಕೆ ನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಶುಕ್ರವಾರ ಜಿಲ್ಲಾಧಿಕಾರಿಗಳಾದ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಚಾಲನೆ ನೀಡಿದರು. ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಒಂದೇ ಸೂರಿನಡಿ ವೈಧ್ಯಕೀಯ ಸೇವೆ, ಪೋಲಿಸ್ ಸೇವೆ, ಕಾನೂನು ಸೇವೆ, ಸಮಾಲೋಚನೆ ಮತ್ತು ತಾತ್ಕಾಲಿಕ ವಸತಿ ಒದಗಿಸುವ ಸಖಿ ಒನ್ ಸ್ಟಾಫ್ ಸೆಂಟರ್ ಕೇಂದ್ರ ಸರ್ಕಾರದ ಮಹತ್ವಾಕಾಂಶಿ ಯೋಜನೆಯಾಗಿದೆ. ಹಾವೇರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ನಿರ್ವಹಣೆ ಮಾಡಲಾಗುತ್ತಿದೆ. ಜಿಲ್ಲಾ ಆಸ್ಪತ್ರೆ ಆವರಣದಲ್ಲಿರುವ ಸಖಿ ಒನ್ ಸ್ಟಾಫ್ ಸೆಂಟರ್‌ಗೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ, ಸ್ವಂತ ಕಟ್ಟಡ ನಿರ್ವಹಣೆ, ಸಿಬ್ಬಂದಿಗಳ ಕಾರ್ಯವೈಖರಿ ಪರೀಶೀಲಿಸಿ, ವಿವಿಧ ಸಲಹೆ ಸೂಚನೆಗಳನ್ನು ನೀಡಿದರು. ಸಮಾಜ ಮುಖಿಯಾಗಿ ಕಾರ್ಯನಿರ್ವಹಿಸುತ್ತಿರುವ ಸಖಿ ಒನ್ ಸ್ಟಾಫ್ ಸೆಂಟರ್ ಸಿಬ್ಬಂದಿಗಳನ್ನು ಅಭಿನಂದಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ್ ಶ್ರೀಧರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀನಿವಾಸ.ವೈ.ಆಲದಾರ್ತಿ ಇತರರು ಹಾಜರಿದ್ದರು.