ಕಲಾವಿದ ಡಾ. ಸಿದ್ರಾಮ ವಾಘಮಾರೆಗೆ ಸಾಹಿತ್ಯ ಸೌರಭ ರಾಷ್ಟ್ರ ಪ್ರಶಸ್ತಿ
ಬಳ್ಳಾರಿ 15: ಗೋಂಧಳಿ ಹಾಡುಗಳನ್ನು ಸಾಹಿತ್ಯ ರೂಪದಲ್ಲಿ ಸಂಗ್ರಹಿಸಿ, ಅಳಿವಿನ ಅಂಚಿನಲ್ಲಿರುವ ಕಲೆಯನ್ನು ಉಳಿಸಿಕೊಂಡು ಬರುತ್ತಿರುವ ಡಾ. ಸಿದ್ರಾಮ ದಾದಾರಾವ್ ವಾಘಮಾರೆ ಇವರಿಗೆ ‘ಸಾಹಿತ್ಯ ಸೌರಭ’ ರಾಷ್ಟ್ರ ಪ್ರಶಸ್ತಿ ಘೋಷಣೆ ಆಗಿದೆ. ಹೂವಿನಹಡಗಲಿಯ ರಾಜ್ಯ ಬರಹಗಾರರ ಸಂಘ(ರಿ)ದ ಸಂಸ್ಥಾಪಕ ರಾಜ್ಯ ಅಧ್ಯಕ್ಷರಾದ ಮಧು ನಾಯ್ಕ ಲಂಬಾಣಿಯವರು ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ್ದು, ಬೀದರ್ ಜಿಲ್ಲೆಯ ಹುಮನಾಬಾದ ತಾಲ್ಲೂಕಿನ ಐತಿಹಾಸಿಕ ಹಿನ್ನಲೆಯುಳ್ಳ ಜಲಸಂಗಿ ಗ್ರಾಮದಲ್ಲಿ ಜನಿಸಿದ್ದ ಡಾ.ಸಿದ್ರಾಮ ದಾದಾರಾವ್ ವಾಘಮಾರೆ ಅಪ್ಪಟ ದೇಶೀ ಕಲಾವಿದರಾಗಿ ಪ್ರಖ್ಯಾತಿ ಪಡೆದಿದ್ದಾರೆ. ಇವರು 1961ರ ಡಿಸೆಂಬರ್ 1 ರಂದು ಜನಿಸಿದ್ದು ಇವರು ಈ ಇಳಿ ವಯಸ್ಸಿನಲ್ಲಿಯೂ ಗೋಂಧಳಿ ಹಾಡುಗಳು, ಕಥಾ ಕೀರ್ತನೆಗಳು, ತತ್ವ ಪದಗಳ ಹಾಡುಗಳನ್ನು ಸಾಹಿತ್ಯ ರೂಪದಲ್ಲಿ ಸಂಗ್ರಹಿಸುತ್ತಿದ್ದಾರೆ. ಗೋಂಧಳಿ ಸಮುದಾಯವು ಎಲ್ಲ ಧರ್ಮಗಳ ಜನರೊಂದಿಗೆ ಹಾಸುಹೊಕ್ಕಾಗಿದ್ದು ಡಾ.ಸಿದ್ರಾಮ ವಾಘಮಾರೆ ಗೋಂಧಳಿ ಹಾಡುಗಳನ್ನು ಗುಲಬರ್ಗಾ ಆಕಾಶವಾಣಿ, ಬೀದರ ಉತ್ಸವ, ಹಂಪಿ ಉತ್ಸವಗಳಲ್ಲಿ ಹಾಡಿ ಸನ್ಮಾನಿತರಾಗಿದ್ದಾರೆ. ಕರ್ನಾಟಕದಲ್ಲಿ ಮಾತ್ರ ಕಲೆಯನ್ನು ಸೀಮಿತವಾಗಿಸದೇ ನೆರೆಯ ಆಂಧ್ರ ಪ್ರದೇಶ, ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಗೋಂಧಳಿ ಕಲೆಯನ್ನು ಪ್ರಸ್ತುತಪಡಿಸುತ್ತಿದ್ದಾರೆ. ಇವರ ಕಲೆಗೆ ‘ಬೀದರ ಜಿಲ್ಲಾ ರಾಜೋತ್ಸವ ಪ್ರಶಸ್ತಿ,’ ಗುಲಬರ್ಗಾ ವಿಶ್ವವಿದ್ಯಾಲಯದ ‘ರಾಜ್ಯೋತ್ಸವ ಪ್ರಶಸ್ತಿ,’ ಕರ್ನಾಟಕ ಜಾನಪದ ಅಕಾಡೆಮಿಯ ರಾಜ್ಯ ಪ್ರಶಸ್ತಿ ಗಳನ್ನು ಪಡೆದಿದ್ದಾರೆ. ಅರೆ ಅಲೆಮಾರಿ ಸಮುದಾಯದ ಕಲಾವಿದರನ್ನು ಒಂದೆಡೆ ಸೇರಿಸಿ ಅವರಿಗೆ ಗೋಂಧಳಿ ಕಲೆಯ ಕುರಿತು ಜಾಗೃತಿ ಮೂಡಿಸಲು ಬೀದರ ಜಿಲ್ಲೆಯಲ್ಲಿಯೇ ನಾಲ್ಕು ರಾಜ್ಯ ಮಟ್ಟದ ಸಮಾವೇಶಗಳನ್ನು ಸಂಘಟಿಸಿದ್ದಾರೆ. ಇವರ ಸಂದಶ9ನ ಮತ್ತು ಹಾಡುಗಳು ಗುಲಬರ್ಗಾ ಆಕಾಶವಾಣಿ ನಿಲಯದಿಂದ ಆಗಾಗ ಪ್ರಸಾರವಾಗುತ್ತಿರುತ್ತವೆ. ಈ ಕಾರಣಗಳಿಂದ ಡಾ. ಸಿದ್ರಾಮ ಡಿ ವಾಘಮಾರೆ ರವರಿಗೆ ರಾಷ್ಟ್ರ ಮಟ್ಟದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಶಿವಮೊಗ್ಗದ ಕನ್ನಡ ಸಂಘದಲ್ಲಿ ಇದೇ ಮಾರ್ಚ 16ರಂದು ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಅವರು ತಿಳಿಸಿದ್ದಾರೆ.