ಎಸ್.ಎನ್.ಎಮ್. ಸೌಹಾರ್ದ, ಸಕ್ಷಮ ಪ್ರಾಧಿಕಾರಿಯನ್ನು ಪದೆ ಪದೇ ಬದಲಾವಣೆ ಮಾಡದಿರಲು ಆಗ್ರಹ
ವಿಜಯಪುರ 12: ಎಸ್.ಎಮ್.ಎನ್. ಕ್ರೆಡಿಟ್ ಸೌಹಾರ್ದದ ಸಕ್ಷಮ ಪ್ರಾಧಿಕಾರಿಯನ್ನು ಸರ್ಕಾರ ಪದೆ ಪದೇ ಬದಲಾವಣೆ ಮಾಡುತ್ತಿದ್ದು, ಇದರಿಂದ ಠೇವಣಿ ವಂಚಿತ ಗ್ರಾಹಕರಿಗೆ ಹಣ ಮರುಪಾವತಿಸಲು ವಿಳಂಬವಾಗುತ್ತಿದ್ದು, ಆದ್ದರಿಂದ ಸಕ್ಷಮ ಪ್ರಾಧಿಕಾರಿಯನ್ನು ಹುದ್ದೆಯ ಬದಲಾಗಿ ಹೆಸರಿನಿಂದ ಆದೇಶ ಮಾಡಿ ಮುಂದುವರೆಸಬೇಕು. ಯಾವುದೇ ಕಾರಣಕ್ಕೂ ಗ್ರಾಹಕರಿಗೆ ಹಣ ಮರುಪಾವತಿ ಮಾಡುವರಿಗೂ ಸಕ್ಷಮ ಪ್ರಾಧಿಕಾರಿಯನ್ನು ಬದಲಾವಣೆ ಮಾಡಬಾರದೆಂದು ಆಗ್ರಹಿಸಿ ಠೇವಣಿ ವಂಚಿತ ಗ್ರಾಹಕರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ರವರಿಗೆ ಬರೆದ ಪತ್ರವನ್ನು ಬುಧವಾರದಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರಿಗೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ರೈತ ಮುಖಂಡ ಹಾಗೂ ಎಸ್.ಎಮ್.ಎನ್. ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಠೇವಣಿ ವಂಚಿತ ಹೋರಾಟ ಸಮಿತಿ ಅಧ್ಯಕ್ಷರಾದ ಅರವಿಂದ ಕುಲಕರ್ಣಿ ಮಾತನಾಡಿ ಈ ಸೌಹಾರ್ದದಲ್ಲಿ ವಿಜಯಪುರ ಜಿಲ್ಲೆ ಸೇರಿದಂತೆ ರಾಜ್ಯದ ಕೆಲವೊಂದು ಜಿಲ್ಲೆಗಳು ಸೇರಿ ಒಟ್ಟು 21 ಶಾಖೆಗಳನ್ನು ಸೌಹಾರ್ದವು ಹೊಂದಿದ್ದು, ಗ್ರಾಹಕರು ನಂಬಿ ಕೋಟ್ಯಾಂತರ ಹಣವನ್ನು ತೊಡಗಿಸಿದ್ದಾರೆ. ಅವಧಿ ಮುಗಿದರೂ ಹಣ ಮರುಪಾವತಿಸದೇ ಆಡಳಿತ ಮಂಡಳಿಯವರು ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ.
ಇದನ್ನು ಖಂಡಿಸಿ ಠೇವಣಿ ವಂಚಿತ ಗ್ರಾಹಕರು ಹೋರಾಟ ಮಾಡಿದ್ದರು. ಸರ್ಕಾರ ಎಚ್ಚೆತ್ತುಕೊಂಡು 2020 ನೇ ಸಾಲಿನಲ್ಲಿ ಸಕ್ಷಮ ಪ್ರಾಧಿಕಾರಿ ಅಂತಾ ಬೆಂಗಳೂರಿನ ಸಹಾಯಕ ಪ್ರಾದೇಶಿಕ ಆಯುಕ್ತರನ್ನು ನೇಮಕ ಮಾಡಿದ್ದರು. ಇದರ ಜೊತೆಗೆ ಸಿ.ಓ.ಡಿ. ಕೂಡ ನೇಮಕ ಮಾಡಿ ತನಿಖೆ ಕೈಗೊಂಡು ತಪ್ಪಿತಸ್ಥ ಆಡಳಿತ ಮಂಡಳಿಯವರನ್ನು ಜೈಲಿಗೆ ಅಟ್ಟಿದ್ದರು.
ಸಕ್ಷಮ ಪ್ರಾಧಿಕಾರಿಯನ್ನು ನೇಮಕ ಮಾಡಿದ ನಂತರ ಒಬ್ಬರನ್ನು ಖಾಯಂ ಇಡದೇ ಪದೆ ಪದೇ ಬದಲಾವಣೆ ಮಾಡುವ ಮೂಲಕ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ. ಇದರಿಂದ ಪ್ರಗತಿಯಲ್ಲಿ ಕುಂಠಿತಗೊಳ್ಳುತ್ತಿದೆ. ಇದರಿಂದ ಹಣ ಕಳೆದುಕೊಂಡ ಠೇವಣಿ ವಂಚಿತರಿಗೆ ಅನ್ಯಾಯವಾಗುತ್ತಿದ್ದು, ಹಣ ಮರುಪಾವತಿಸಲು ವಿಳಂಬವಾಗುತ್ತಿದೆ. ಇನ್ನು ಮುಂದಾದರೂ ಸರ್ಕಾರ ಸಕ್ಷಮ ಪ್ರಾಧಿಕಾರಿಯನ್ನು ಬದಲಾವಣೆ ಮಾಡದೇ ಗ್ರಾಹಕರಿಗೆ ಹಣ ಮರುಪಾತಿಸುವರೆಗೂ ಈ ಸಧ್ಯ ಇರುವ ಸಕ್ಷಮ ಪ್ರಾಧಿಕಾರಿಯನ್ನು ಅವರ ಹುದ್ದೆಯ ಬದಲಾಗಿ ಅವರ ಹೆಸರಿನಿಂದ ಮುಂದುವರೆಸಬೇಕು ಮತ್ತು ಆಡಳಿತ ಮಂಡಳಿ ಇವರ ಆಸ್ತಿಯನ್ನು ಸರ್ಕಾರ ಈಗಾಗಲೇ ಸ್ವಾಧೀನಪಡಿಸಿಕೊಂಡಿದ್ದು ಇವುಗಳನ್ನು ಹರಾಜು ಮಾಡಲು ವಿಶೇಷ ನ್ಯಾಯಾಲಯದ ಅನುಮತಿ ಬರಬೇಕಾಗಿದ್ದು ವಿಳಂಭವಾಗುತ್ತಿದೆ. ಆದ್ದರಿಂದ ಸರ್ಕಾರ ವಿಶೇಷ ಅನುದಾನವನ್ನು ಅಂದರೆ 30 ಕೋಟಿ ಹಣವನ್ನು ನೊಂದ ಗ್ರಾಹಕರಿಗೆ ಸರ್ಕಾರದ ವತಿಯಿಂದ ಮರುಪಾವತಿಸಿ ನಂತರ ಆಸ್ತಿಯನ್ನು ಹರಾಜು ಮಾಡಿ ಬಂದ ಹಣವನ್ನು ಸರ್ಕಾರ ಜಮಾ ಮಾಡಿಕೊಳ್ಳಬೇಕು ಇದರಿಂದ ಠೇವಣಿ ಇರಿಸಿದ ಗ್ರಾಹಕರಿಗೆ ಸರ್ಕಾರ ಮರುಜೀವ ಕೊಟ್ಟಂತಾಗುತ್ತದೆ ಆದ್ದರಿಂದ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಎನ್.ಕೆ. ಮನಗೊಂಡ, ಐ.ಬಿ. ಸಾರವಾಡ, ಎಸ್.ಜಿ. ಸಂಗೋಂದಿಮಠ, ಕೆ.ಡಿ. ನರಗುಂದ, ಬಿ.ಐ. ಚಿಕ್ಕೋಂಡ, ಬಿ.ಎಸ್. ಸರಸಂಬಿ, ಎಮ್.ಆರ್. ವಸ್ತ್ರದ, ಜೆ.ಕೆ. ಪಾಲಕೆ, ಪಿ.ಆರ್. ಕುಲಕರ್ಣಿ, ಎ.ಎಮ್. ಭೈರೋಡಗಿ, ಬಸವರಾಜ ಬಾಡಗಿ ಮಹಾದೇವಿ ಪಾಟಿಲ ಹಾಗೂ ಇತರರು ಇದ್ದರು.