ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕಾ ರಂಗದ ಪಾತ್ರ ಅತಿ ಮುಖ್ಯ : ಅಮುಲ್ ಹಿರೆಕುಡಿ

Role of press in democratic system is very important: Amul Hirekudi

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕಾ ರಂಗದ ಪಾತ್ರ ಅತಿ ಮುಖ್ಯ : ಅಮುಲ್ ಹಿರೆಕುಡಿ

ಬ್ಯಾಡಗಿ 20: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕಾ ರಂಗದ ಪಾತ್ರ ಅತಿ ಮುಖ್ಯವಾದುದೆಂದು ಸಿವಿಲ್ ಹಿರಿಯ ದಿವಾಣಿ ನ್ಯಾಯಾಧೀಶ ಅಮುಲ್ ಹಿರೆಕುಡಿ  ಹೇಳಿದರು.ಅವರು ಮಂಗಳವಾರ ತಾಲೂಕಾ ನ್ಯಾಯವಾದಿಗಳ ಸಂಘದ ಆಶ್ರಯದಲ್ಲಿ ನ್ಯಾಯವಾದಿಗಳ ಸಭಾಭವನದಲ್ಲಿ ನಡೆದ ಸಾಧಕ ಪತ್ರಕರ್ತರ ಸನ್ಮಾನ ಕಾರ್ಯಕ್ರಮದಲ್ಲಿ ಪತ್ರಕರ್ತರನ್ನು ಸನ್ಮಾನಿಸಿ ಮಾತನಾಡಿದರು. ಮುದ್ರಣ ಮಾಧ್ಯಮ ಇನ್ನಷ್ಟು ಗಟ್ಟಿಗೊಳ್ಳಬೇಕು ಹಾಗೂ ಸತ್ಯಕ್ಕೆ ಹತ್ತಿರವಾಗಬೇಕು. ಒಂದು ಸುಳ್ಳು ಸುದ್ದಿ ಸಮಾಜದ ಮೇಲೆ ಗಾಢ ಪರಿಣಾಮ ಬೀರುತ್ತದೆ. ಆದ್ದರಿಂದ ಒಂದು ವಿಷಯವನ್ನು ಸುದ್ದಿ ಮಾಡಬೇಕಾದರೇ ಅತ್ಯಂತ ಎಚ್ಚರವಹಿಸಬೇಕು.  

ಹಾಗೂ ಸತ್ಯಾಸತ್ಯತೆಯನ್ನು ಪರೀಶೀಲಿಸಿ ಬರಯಬೇಕೆಂದು ಕಿವಿ ಮಾತು ಹೇಳಿದರಲ್ಲದೇ ನಮ್ಮ ನ್ಯಾಯಾಲಯದ ಅನೇಕ ಸುದ್ದಿಗಳನ್ನು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಿದ್ದು ಸಂತಸದ ವಿಷಯವೆಂದರು.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಜಿಲ್ಲಾಧ್ಯಕ್ಷ ಬಸವಂತಪ್ಪ ಹುಲ್ಲತ್ತಿ ಮಾತನಾಡಿ ಪತ್ರಿಕಾ ರಂಗ ಇರುವುದು ಹಣ ಗಳಿಸಲು ಅಲ್ಲ, ಜನರ ಸೇವೆಗೆ, ಭಾರತೀಯರಿಗೆ ಸಂವಿಧಾನವೇ ಪವಿತ್ರ ಗ್ರಂಥ. ಶಾಸಕಾಂಗ ಕಾರ್ಯಾಂಗ ಹಾಗೂ ನ್ಯಾಯಾಂಗ ಈ ಮೂರು ಆಧಾರ ಸ್ತಂಭಗಳ ಜೊತೆಗೆ ನಾಲ್ಕನೇ ಅಂಗವಾಗಿ ಪತ್ರಿಕಾ ರಂಗ ಕಾರ್ಯನಿರ್ವಹಿಸುತ್ತಿರುವುದನ್ನು ಗಮನಿಸಿದ ತಾಲೂಕಾ ನ್ಯಾಯವಾದಿಗಳ ಸಂಘವು ನಮ್ಮನ್ನು ಗುರ್ತಿಸಿ ನಮ್ಮ ಸೇವೆಗೆ ಸ್ಪಂದಿಸಿ ಹಿರಿಯ ನ್ಯಾಯಾಧೀಶರ ಮೂಲಕ ಸನ್ಮಾನಿ ಗೌರವಿಸುತ್ತಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ.  

ಅನೇಕ ವರ್ಷಗಳಿಂದ ಅನೇಕರನ್ನು ವರ್ಣನೆ ಮಾಡಿ ಬರೆದು  ಅನೇಕರಿಗೆ ಶಾಸಕಾಂಗ ಸೇರಿದಂತೆ ಅನೇಕ ಹುದ್ದೆಗಳಲ್ಲಿ ವಿಜೃಂಭಿಸಲು ಪತ್ರಕರ್ತರ ಶ್ರಮ ಅಪಾರವಾಗಿದೆ. ಅವರಾಯ್ಯಾರು ಮಾಡದೇ ಇರುವಂತಹ ಕಾರ್ಯವನ್ನು ತಾಲೂಕಾ ನ್ಯಾಯವಾದಿಗಳ ಸಂಘವು ಪತ್ರಕರ್ತರಿಗೆ ಗೌರವಿಸುವಂತ ಕಾರ್ಯ ಮಾಡುತ್ತಿರುವುದು ಅಭಿನಂದನೀಯ ಕಾರ್ಯವೆಂದು ಅವರ ಸೇವೆಯನ್ನು ಸ್ಮರಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶಂಕರ ಬಾರ್ಕಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪತ್ರಕರ್ತರಾದ ಸಂತೋಷ ತೊಪ್ಪಲ, ಚಂದ್ರಣ್ಣ ಮುಳಗುಂದ,   ನಾಗರಾಜ ಗುತ್ತಲ, ವೀರಭದ್ರಗೌಡ ಹೊಮ್ಮರಡಿ, ಮಂಜಣ್ಣ ಕಿತ್ತೂರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ  ಕಿರಿಯ ದಿವಾಣಿ ನ್ಯಾಯಾಧೀಶ ಸುರೇಶ ವಗ್ಗನವರ, ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ಬಿ.ಜಿ.ಹಿರೇಮಠ, ಕಾರ್ಯದರ್ಶಿ ಎಂ.ಪಿ.ಹಂಜಗಿ ಸೇರಿದಂತೆ ಇತರರಿದ್ದರು.