ಸಾರ್ವಜನಿಕರಿಗೆ ಹಾಗೂ ವಾಹನ ಚಾಲಕರಿಗೆ ರಸ್ತೆ ಸುರಕ್ಷತೆ ಕುರಿತು ಅರಿವು ಕಾರ್ಯಕ್ರಮ
ಹಾವೇರಿ 22: ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಅಂಗವಾಗಿ ಹಾವೇರಿ, ಬಂಕಾಪೂರ ಹಾಗೂ ಶಿಗ್ಗಾಂವ ಪಟ್ಟಣಗಳಲ್ಲಿ ಸಾರ್ವಜನಿಕರಿಗೆ ಹಾಗೂ ವಾಹನ ಚಾಲಕರಿಗೆ ರಸ್ತೆ ಸುರಕ್ಷತೆ ಕುರಿತು ಅರಿವು ಮೂಡಿಸಲಾಯಿತು.
ಶುಕ್ರವಾರ ಶಿಗ್ಗಾಂವಿಯಲ್ಲಿ ಮೋಟಾರು ವಾಹನ ನೀರೀಕ್ಷಕ ಮಹೇಶ ಮೆಣಸಿನಕಾಯಿ, ಶನಿವಾರ ಬಂಕಾಪೂರ ಟೋಲ್‌ನಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ವಿನಯ ಕಾಟೋಕರ್ ಅವರು ಹಾಗೂ ಸೋಮವಾರ ಹಾವೇರಿ ನಗರದ ಪ್ರಾದೇಶಿಕ ಸಾರಿಗೆ ಕಚೇರಿ ಆವರಣದಲ್ಲಿ ಕಚೇರಿ ಅಧೀಕ್ಷಕರಾದ ಶ್ರೀಮತಿ ಕೆ.ರಫಿಯಾಬೇಗಂ ಹಾಗೂ ಪ್ರ.ದ.ಸ.ಶ್ರೀಪಾದ ಬ್ಯಾಳಿ ಅವರು ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸಿದರು.
ಕೇಂದ್ರ ಮೋಟಾರು ವಾಹನ ನಿಯಮಾವಳಿ ನಿಯಮ 138(7)ರ ಅನ್ವಯ ಒಂಭತ್ತು ತಿಂಗಳಿಂದ ನಾಲ್ಕು ವರ್ಷದವರೆಗಿನ ಮಕ್ಕಳನ್ನು ದ್ವಿಚಕ್ರವಾಹನದಲ್ಲಿ ಕರೆದುಕೊಂಡು ಹೋಗುವಾಗ ಸುರಕ್ಷತಾ ಸರಂಜಾಮು ಧರಿಸುವುದು ಕಡ್ಡಾಯವಾಗಿದೆ ಎಂದು ಪ್ರಾತ್ಯಕ್ಷಿಕೆ ಮೂಲಕ ಅರಿವು ಮೂಡಿಸಲಾಯಿತು. ಈ ಸಂದರ್ಭದಲ್ಲಿ ಸಾರ್ವಜನಿಕರು ವಾಹನ ಚಾಲಕರು ಉಪಸ್ಥಿತರಿದ್ದರು.