ಕೊಣ್ಣೂರ ಜನ, ಜಾನುವಾರುಗಳ ಸ್ಥಳಾಂತರ

ಗದಗ  08:  ಮಲಪ್ರಭಾ ನದಿಯ ನವಿಲುತೀರ್ಥ ಜಲಾಶಯದಿಂದ ನೀರಿನ ಹೊರಹರಿವು 1,10,000 ಕ್ಯೂಸೆಕ್ಸ್ ಗೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯ ನರಗುಂದ ತಾಲೂಕಿನ ಸಂಪೂರ್ಣ ಕೊಣ್ಣೂರು ಗ್ರಾಮದ ಹಾಗೂ  ಪರಿಹಾರ ಕೇಂದ್ರಗಳ ಜನರನ್ನು ನರಗುಂದದ ಬಸವೇಶ್ವರ ಕಾಲೇಜಿಗೆ ಸ್ಥಳಾಂತರಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ.  

          ಸ್ಥಳದಲ್ಲೇ ಠಿಕಾಣಿ ಹೂಡಿರುವ ಜಿಲ್ಲಾಧಿಕಾರಿಗಳು ನೀರಿನ ಹರಿವು ಹೆಚ್ಚುತ್ತಲೇ ಇರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.  ಕೊಣ್ಣೂರಿನಲ್ಲಿ ಕೊಣ್ಣೂರ, ವಾಸನ, ವಾಸನ ಹೊಸ ಪ್ಲಾಟ್, ಲಕಮಾಪುರದ ಗ್ರಾಮಗಳ ಸುಮಾರು 12 ಸಾವಿರಕ್ಕೂ ಹೆಚ್ಚಿನ ಜನರನ್ನು ಹಾಗೂ ಜಾನುವಾರುಗಳನ್ನು ಸುರಕ್ಷಿತ ದೃಷ್ಟಿಯಿಂದ ನರಗುಂದ ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.  ಮುಂದುವರೆದ ಸತತ ಮಳೆಯಿಂದ ಮಲಪ್ರಭಾ ಹೊರಹರಿವು ಅಷ್ಟೇ ಅಲ್ಲದೇ ಬೆಣ್ಣೆ ಹಳ್ಳದಿಂದಲೂ ಗ್ರಾಮಗಳು ಜಲಾವೃತಗೊಳ್ಳುವ ಹಿನ್ನೆಲೆಯಲ್ಲಿ ಈಗಾಗಲೇ ನರಗುಂದ ತಾಲೂಕಿನ ಬೂದಿಹಾಳ, ವಾಸನ ಪರಿಹಾರ ಕೇಂದ್ರಗಳಲ್ಲದೇ ಬೆಳ್ಳೇರಿ, ಸುರಕೋಡ, ಕುರ್ಲಗೇರಿ ಹಾಗೂ ಹದಲಿ ಗ್ರಾಮಗಳ ಪ್ರಾಥಮಿಕ ಹಾಗೂ  ಪ್ರೌಢಶಾಲೆಗಳಲ್ಲಿ ಪರಿಹಾರ ಕೇಂದ್ರಗಳನ್ನು ಆರಂಭಿಸಲಾಗಿದೆ.   ರೋಣ ತಾಲೂಕಿನಲ್ಲಿ ನಿನ್ನೆಯ ಕುರುವಿನಕೊಪ್ಪ, ಮೆಣಸಗಿ ಗ್ರಾಮಸ್ಥರಿಗೆ ನೆರೆ ಪರಿಹಾರ ಕೇಂದ್ರ ಆರಂಭಿಸಿದ್ದು ಇಂದು ಹೊಳೆ ಆಲೂರು, ಅಮರಗೋಳ ಹಾಗೂ ಹೊಳೆ ಮಣ್ಣೂರು ಗ್ರಾಮಸ್ಥರಿಗಾಗಿ ಪರಿಹಾರ ಕೇಂದ್ರಗಳನ್ನು ಆರಂಭಿಸಿದ್ದು ಒಟ್ಟು 14 ಪರಿಹಾರ ಕೇಂದ್ರಗಳಲ್ಲಿ 16,198  ಕ್ಕೂ ಹೆಚ್ಚಿನ ಜನರಿಗೆ ಆಶ್ರಯ ಕಲ್ಪಿಸಲಾಗಿತ್ತು.  ಇದರಲ್ಲಿ ಕೊಣ್ಣೂರು ಗ್ರಾಮ ಸೇರಿದಂತೆ ಅಲ್ಲಿನ ಎರಡು ಪರಿಹಾರ ಕೇಂದ್ರಗಳ ಜನರನ್ನು ನರಗುಂದ ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.