ರಾಷ್ಟ್ರೀಯ ಲೋಕ ಅದಾಲತ್: ಜಿಲ್ಲೆಯಲ್ಲಿ 46,832 ಪ್ರಕರಣಗಳ ಇತ್ಯರ್ಥ
ಹಾವೇರಿ 16 : ಜಿಲ್ಲೆಯ ನ್ಯಾಯಾಲಯಗಳಲ್ಲಿ ಶನಿವಾರ ಜರುಗಿದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ನ್ಯಾಯಾಲಯದಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳು ಸೇರಿ ಇತ್ಯರ್ಥಕ್ಕೆ ಗುರುತಿಸಲ್ಪಟ್ಟ 63,372 ಪ್ರಕರಣಗಳಲ್ಲಿ 46,832 ಪ್ರಕರಣಗಳು ಇತ್ಯರ್ಥಗೊಂಡಿದ್ದು, ರೂ.36,34,51,746 ಮೊತ್ತದ ರಾಜೀಯಾಗಿದೆ ಹಾಗೂ ಆರು ಕೌಟುಂಬಿಕ ಪ್ರಕರಣಗಳಲ್ಲಿ ದಂಪತಿಗಳು ರಾಜೀಮಾಡಿಕೊಂಡಿದ್ದಾರೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಕೆ.ಸಿ.ಸದಾನಂದಸ್ವಾಮಿ ಅವರು ತಿಳಿಸಿದ್ದಾರೆ.
ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಬಾಕಿ ಇರುವ ಇತ್ಯರ್ಥಕ್ಕೆ ಗುರುತಿಸಲಾದ 8,052 ಪ್ರಕರಣಗಳ ಪೈಕಿ 5,423 ಪ್ರಕರಣಗಳು ಇತ್ಯರ್ಥಗೊಂಡಿದ್ದು, ರೂ. 24,28,50,865/-ಗಳ ರಾಜೀಯಾಗಿದೆ. ವ್ಯಾಜ್ಯ ಪೂರ್ವ ಪ್ರಕರಣಗಳಲ್ಲಿ ಇತ್ಯರ್ಥಕ್ಕೆ ಗುರುತಿಸಲಾದ 55,320 ಪ್ರಕರಣಗಳಲ್ಲಿ 41,409 ಪ್ರಕರಣಗಳು ಇತ್ಯರ್ಥಗೊಂಡಿದ್ದು, ರೂ. 12,06,00,881/- ಗಳ ಮೊತ್ತದ ರಾಜೀಯಾಗಿದೆ.
ಹಾವೇರಿ ನ್ಯಾಯಾಲಯದಲ್ಲಿ ನಾಲ್ಕು ಹಾಗೂ ಹಾನಗಲ್ ನ್ಯಾಯಾಲಯದಲ್ಲಿ ಎರಡು ಕೌಟುಂಬಿಕ ಪ್ರಕರಣಗಳಲ್ಲಿ ದಂಪತಿಗಳು ರಾಜಿಮಾಡಿಕೊಂಡು ಮತ್ತೆ ಒಂದಾಗಿದ್ದಾರೆ.
ಜಿಲ್ಲಾ ನ್ಯಾಯವಾದಿಗಳ ಸಂಘ, ಜಿಲ್ಲೆಯ ಎಲ್ಲಾ ತಾಲೂಕಾ ನ್ಯಾಯವಾದಿಗಳ ಸಂಘ, ಹಾವೇರಿ ಜಿಲ್ಲೆಯ ಎಲ್ಲ ನ್ಯಾಯಾಧೀಶರು, ಅಭಿಯೋಜನೆ ಇಲಾಖೆ, ಆರಕ್ಷಕ ಇಲಾಖೆಯವರು, ಇತರೇ ಇಲಾಖೆಯವರು ಹಾಗೂ ಕಕ್ಷಿಗಾರರ ಸಹಕಾರದೊಂದಿಗೆ ರಾಷ್ಟ್ರೀಯ ಲೋಕ ಅದಾಲತ್ ತುಂಬಾ ಯಶಸ್ವಿಯಾಗಿ ಜರುಗಿದೆ ಎಂದು ತಿಳಿಸಿದ್ದಾರೆ.