ರಂಗತೋರಣ ನಾಟಕೋತ್ಸವಕ್ಕೆ ಸಂಭ್ರಮದ ತೆರೆ

Rangatoran drama festival opens the door to celebration

ರಂಗತೋರಣ ನಾಟಕೋತ್ಸವಕ್ಕೆ ಸಂಭ್ರಮದ ತೆರೆ 

ಬಳ್ಳಾರಿ 13: ನಗರದ ರಂಗತೋರಣ ಸಂಸ್ಥೆ ದಿನಾಂಕ 11 ಮತ್ತು 12 ರಂದು ಆಯೋಜಿಸಿದ್ದ ನೀನಾಸಮ್ ತಿರುಗಾಟದ ‘ಅಂಕದ ಪರದೆ’ ನಾಟಕದ ಯಶಸ್ವಿ ಪ್ರದರ್ಶನದೊಂದಿಗೆ ನಾಟಕೋತ್ಸವಕ್ಕೆ ತೆರೆ ಬಿದ್ದಿತು. 

ದಿ. 12 ರಂದು ನಗರದ ಅಟಲ ಬಿಹಾರಿ ವಾಜಪೇಯಿ ನಗರದಲ್ಲಿಯ ರಂಗತೋರಣ ನಿರ್ಮಾಣದ ಸ್ವಂತ ಕಲಾಕ್ಷೇತ್ರದಲ್ಲಿ ನಡೆದ ಎರಡನೇ ದಿನದ ಪ್ರದರ್ಶನವನ್ನು ಸಿರುಗುಪ್ಪದ ಉದ್ಯಮಿ ಹಾಗೂ ರಂಗ ಪ್ರೋತ್ಸಾಹಕ ಸದಾಶಿವ ಕೌತಾಳ ಅವರು ನಗಾರಿ ಬಾರಿಸುವುದರ ಮೂಲಕ ಉದ್ಘಾಟಿಸಿದ ಅವರು ರಂಗತೋರಣದ ನಾಟಕಗಳು ಯಾವಾಗಲೂ ಉತ್ತಮ ದರ್ಜೆಯ ವಿಭಿನ್ನ ಹಾಗೂ ಚಿತ್ತಾಕರ್ಷಕವಾಗಿದ್ದು, ನಿನ್ನೆಯ ನಾಟಕವನ್ನು ನೀವೆಲ್ಲ ವೀಕ್ಷಿಸಿದ್ದೆ ಸಾಕ್ಷಿ. ಇಂತಹ ನಾಟಕಗಳಿಗೆ ಉತ್ತಮ ವೇದಿಕೆ, ಪ್ರೋತ್ಸಾಹ ಅಗತ್ಯವಾಗಿದ್ದು ಇನ್ನೂ ನಿರ್ಮಾಣದ ಹಂತದ ಈ ಕಲಾಕ್ಷೇತ್ರವೇ ಆಕರ್ಷಣೀಯವಾಗಿದ್ದು ಸಂತಸ ಎಂದರು. 

ನಗರದ ಜೆಸ್ಕಾಂ ಸಂಸ್ಥೆಯ ಅಭಿಯಂತರರಾದ ನವೀನ ಕುಮಾರ ಅವರು ಮುಖ್ಯ ಅತಿಥಿಗಳಾಗಿ ಮಾತನಾಡುತ್ತ, ರಂಗತೋರಣ ಸಂಸ್ಥೆಯ ನಾಟಕೋತ್ಸವವನ್ನು ಅತ್ಯಂತ ಸುವ್ಯವಸ್ಥಿತವಾಗಿ ಸಂಘಟಿಸುತ್ತಿದ್ದು ಪ್ರಸಂಶನೀಯವೆಂದರು.  

ಉದ್ಘಾಟನಾ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿದ್ದ ಸದಾಶಿವ ಕೌತಾಳ, ನವೀನ ಕುಮಾರ, ಡಾ. ವಸ್ತ್ರದ, ವಾಜಪೇಯಿ ನಗರದ ನೇತಾರ ಮಲ್ಲನಗೌಡ ಹಾಗೂ ನೀನಾಸಮ್ ಸಂಚಾಲಕ ನಿರ್ದೇಶಕ ರಘು ಪುರೆ​‍್ಪ ಮನೆ ಅವರಿಗೆ ಸ್ಮರಣಿಕೆ ನೀಡಿ ಸನ್ಮಾನಿಸಿದರು. ಅಡವಿಸ್ವಾಮಿ ಕಾರ್ಯಕ್ರಮ ನಿರೂಪಿಸಿದರು. 

ನಿನ್ನೆ ಪ್ರದರ್ಶನಗೊಂಡ ನೀನಾಸಮ್‌ನ ‘ಅಂಕದ ಪರದೆ’ ನಾಟಕವು ವೃದ್ಧಾಶ್ರಮ ಹಾಗೂ ಪರಿಸರದಲ್ಲಿ ನಡೆದಿದ್ದು ಒಂದೊಂದು ಕಾರಣದೊಂದಿಗೆ ವೃದ್ಧಾಶ್ರಮ ಸೇರಿದ ಹಿರಿಯ ನಾಗರಿಕರು, ಅವರದೇ ಗತಲೋಕದಲ್ಲಿ ಒದ್ದಾಡುತ್ತಿದ್ದವರನ್ನು ಅಲ್ಲಿಗೆ ಅಧ್ಯಯನಕ್ಕಾಗಿ ಬಂದ ರಂಗ ನಟನೊಬ್ಬ ತನ್ನ ರಂಗಕ್ರಿಯೆಗಳ ಮೂಲಕ ಜೀವನೋತ್ಸಾಹವನ್ನು ತುಂಬುತ್ತಾನೆ. ನಿನ್ನೆಯ ಪ್ರದರ್ಶನದಲ್ಲಿ ಯುವ ನಟ ನಟಿಯಾಗಿ ಅಭಿನಯಿಸಿದ್ದ ಹದಿ ಹರೆಯದ ಕಲಾವಿದರು ಥೇಟ್ ವೃದ್ಧರಾಗಿ ಅಭಿನಯಿಸಿ ಜನಮನಗೆದ್ದರು. ಹಳೆಯ ಚಿತ್ರ ಗೀತೆಗಳು ಅವರ ಉತ್ಸಾಹಕ್ಕೆ ಕಳೆ ತಂದವು. ಬಣ್ಣದ ನೆರಳು ಬೆಳಕಿನ ವಿನ್ಯಾಸ ಕಲಾವಿದರ ನೈಜ ಅಭಿನಯಕ್ಕೆ ಸೂಕ್ತ ಹಿನ್ನೆಲೆ ನೀಡಿತು. ವೃದ್ಧರೊಂದಿಗೆ ವಾಸಿಸುತ್ತಲೇ ಅಭಿನಯದ ಪಾಠಗಳನ್ನು ಕಲಿಯುವ ರಂಗ ನಟ-ಕೊನೆಗೆ ಕಲಾವಿದನಾಗಿ ಪರಿವರ್ತಿತನಾಗುವ ರೀತಿ ಮನೋಜ್ಞವಾಗಿತ್ತು.