ಮೀರತ್ ಗೆ ತೆರಳದಂತೆ ರಾಹುಲ್, ಪ್ರಿಯಾಂಕಾರನ್ನು ತಡೆದ ಪೊಲೀಸರು

rahul gandhi

ನವದೆಹಲಿ, ಡಿ.24- ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಸಮಾಧಿ ರಾಜ್‌ಘಾಟ್‌ನಲ್ಲಿ ನಡೆದ 'ಸತ್ಯಾಗ್ರಹ'ದ ನಂತರ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಉತ್ತರ ಪ್ರದೇಶದ ಮೀರತ್‌ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ಪ್ರತಿಭಟನೆಯ ವೇಳೆ ಪ್ರಾಣ ಕಳೆದುಕೊಂಡವರ ಕುಟುಂಬ ಸದಸ್ಯರನ್ನು ಭೇಟಿಯಾಗುವ ಪ್ರಯತ್ನವನ್ನು ಪೊಲೀಸರು ವಿಫಲಗೊಳಿಸಿದ್ದಾರೆ. ಇವರನ್ನು ಪೊಲೀಸರು ಮೀರತ್ ಗೆ ತೆರಳದಂತೆ ತಡೆದರು.

ಕಳೆದ ವಾರ ನಡೆದ ಹಿಂಸಾಚಾರದ ವೇಳೆ ಆರು ಜನರು ಸಾವನ್ನಪ್ಪಿದ್ದರು. ಘಟನೆ ಕುರಿತು ಖಂಡನೆ ವ್ಯಕ್ತವಾಗಿದ್ದು,  ಸಾವನ್ನಪ್ಪಿದ್ದ ಕುಟುಂಬಸ್ಥರಿಗೆ ಸಾಂತ್ವನ ಹೇಳಲು ರಾಹುಲ್​, ಪ್ರಿಯಾಂಕಾ ಇಂದು ಮೀರತ್​ಗೆ ಪ್ರಯಾಣ ಬೆಳಸಿದ್ದರು.

ಮಂಗಳವಾರ ಕಾಂಗ್ರೆಸ್ ಪ್ರಧಾನ ಕಚೇರಿಯಿಂದ ಬಂದ ಮಾಹಿತಿಯ ಪ್ರಕಾರ, ರಾಹುಲ್ ಗಾಂಧಿ ಮತ್ತು ಅವರ ಸಹೋದರಿ ಪ್ರಿಯಾಂಕಾ ಅವರು ಒಂದೇ ಕಾರಿನಲ್ಲಿ ಮೀರತ್‌ಗೆ ಹೋಗುತ್ತಿದ್ದರು.  ಆದರೆ ಪೊಲೀಸರು ಮೀರತ್ ಗೂ ಮುನ್ನ ಪರತಾಪುರದಲ್ಲಿ ಅವರನ್ನು ತಡೆದರು.

ಪೊಲೀಸರು ತಡೆದಿದ್ದನ್ನು ಗಾಂಧಿ ಹಾಗೂ ಪ್ರಿಯಾಂಕಾ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಪೊಲೀಸ್ ಅಧಿಕಾರಿಗಳು ನಗರದ ಅನೇಕ ಸ್ಥಳಗಳಲ್ಲಿ 144 ಕಲಂ ಜಾರಿ ಇದೆ ಎಂದು ಹೇಳಿದರು.

ಕೇವಲ ಮೂರು ಜನರು ಮಾತ್ರ ಹೋಗುತ್ತಿದ್ದು, ನಮಗೆ ನಿಷೇಧಾಜ್ಞೆ ಅನ್ವಯವಾಗುವುದಿಲ್ಲ. ತಮಗೆ ತೆರಳು ಅವಕಾಶ ನೀಡಬೇಕು ಎಂಬ ಮನವಿಯನ್ನು ಪೊಲೀಸರು ಮಾನ್ಯ ಮಾಡಿಲ್ಲ. ಬಲವಂತವಾಗಿ ತಡೆಹಿಡಿದಿದ್ದಾರೆ ಎಂದು ರಾಹುಲ್ ಗಾಂಧಿ ಅರೋಪಿಸಿದರು.