ಆರ್. ಸಮರ್ಥ್ ಭರ್ಜರಿ ಶತಕ: ಕರ್ನಾಟಕಕ್ಕೆ ಉತ್ತಮ ಆರಂಭ

ಶಿವಮೊಗ್ಗ, ಫೆ 4 - ರವಿ ಕುಮಾರ್ ಸಮರ್ಥ್ (ಔಟಾಗದೆ 105 ರನ್) ಶತಕ ಹಾಗೂ ಕೃಷ್ಣಮೂರ್ತಿ ಸಿದ್ದಾರ್ಥ್ (ಔಟಾಗದೆ 62 ರನ್) ಅವರ ಅರ್ಧಶತಕದ ಬಲದಿಂದ ಕರ್ನಾಟಕ ತಂಡ 2019/20ನೇ ಸಾಲಿನ ರಣಜಿ ಟ್ರೋಫಿ ಎಲೈಟ್ ಎ ಮತ್ತು ಬಿ ಗುಂಪಿನ ಪಂದ್ಯದ ಮಧ್ಯ ಪ್ರದೇಶ ವಿರುದ್ಧ ಮೊದಲನೇ ದಿನ ಉತ್ತಮ ಆರಂಭ ಕಂಡಿದೆ. 

ಇಲ್ಲಿನ ಜವಾಹರ್ ಲಾಲ್ ನೆಹರು ಎಂಜಿನಿಯರ್ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡ ಮೊದಲ ದಿನದ ಮುಕ್ತಾಯಕ್ಕೆೆ 86 ಓವರ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡು 233 ರನ್ ಗಳಿಸಿದೆ.

ಬ್ಯಾಟಿಂಗ್ ಆರಂಭಿಸಿದ ಕರ್ನಾಟಕದ ಆರಂಭ ಉತ್ತಮವಾಗಿರಲಿಲ್ಲ. ತಂಡದ ಮೊತ್ತ 4 ರನ್ ಇರುವಾಗಲೇ ದೇವದತ್ತ ಪಡಿಕ್ಕಲ್ ವಿಕೆಟ್ ಉರುಳಿತು. ಬಳಿಕ, 35 ರನ್ ಇರುವಾಗ ರೋಹನ್ ಕದಮ್(9) ಅವರು ಗೌರವ್ ಯಾದವ್‌ಗೆ ವಿಕೆಟ್ ಒಪ್ಪಿಸಿದರು. ನಂತರ ಜತೆಯಾದ ರವಿಕುಮಾರ್ ಸಮರ್ಥ್ ಹಾಗೂ ನಾಯಕ ಕರುಣ್ ನಾಯರ್ ಜೋಡಿಯು 48 ರನ್ ಜತೆಯಾಟವಾಡಿ ತಂಡಕ್ಕೆ ಭರವಸೆ ತುಂಬಿತು. 22 ರನ್ ಗಳಿಸಿ ಉತ್ತಮ ಬ್ಯಾಟಿಂಗ್ ಮಾಡುತ್ತಿದ್ದ ನಾಯಕ ಕರುಣ್ ನಾಯರ್ ಜೋಡಿ ಕುಲ್ದೀಪ್ ಸೇನ್‌ಗೆ ಔಟ್ ಆದರು.

ಸಮರ್ಥ್-ಸಿದ್ದಾಾರ್ಥ್ ಜುಗಲ್‌ಬಂದಿ: 

ನಾಲ್ಕನೇ ವಿಕೆಟ್‌ಗೆ ಜತೆಯಾದ ಆರ್. ಸಮರ್ಥ್ ಹಾಗೂ ಕೆ. ಸಿದ್ದಾರ್ಥ್ ಜೋಡಿಯು ಅತ್ಯುತ್ತಮ ಬ್ಯಾಟಿಂಗ್ ಮಾಡಿತು. ಮಧ್ಯ ಪ್ರದೇಶ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿತು. ಈ ಜೋಡಿ ಮುರಿಯದ ನಾಲ್ಕನೇ ವಿಕೆಟ್‌ಗೆ 150 ರನ್ ಗಳಿಸಿ ತಂಡದ ಮೊತ್ತ 230ರ ಗಡಿ ದಾಟಿಸಿತು. 

ಒಂದು ತುದಿಯಲ್ಲಿ ದೊಡ್ಡ ಇನಿಂಗ್‌ಸ್‌ ಕಟ್ಟಿದ ಆರ್. ಸಮರ್ಥ್ ಅಂದುಕೊಂಡತೆ ಅದ್ಭುತ ಪ್ರದರ್ಶನ ತೋರಿದರು. 278 ಎಸೆತಗಳಲ್ಲಿ 105 ರನ್ ಗಳಿಸಿ ಸಿಡಿಸಿ ಸಂಭ್ರಮಿಸಿದರು. ಇವರ ಅದ್ಭುತ ಇನಿಂಗ್ಸ್‌‌ನಲ್ಲಿ ಆರು ಬೌಂಡರಿಗಳು ಒಳಗೊಂಡಿವೆ. ಮತ್ತೊೊಂದು ತುದಿಯಲ್ಲಿ ಮಧ್ಯಮ ಕ್ರಮಾಂಕದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಮಾಡಿದ ಕೆ.ಸಿದ್ದಾರ್ಥ್ ಕೂಡ ಸೊಗಸಾದ ಬ್ಯಾಟಿಂಗ್ ಪ್ರದರ್ಶನ ತೋರಿದರು. 130 ಎಸೆತಗಳಲ್ಲಿ ಅಜೇಯ 62 ರನ್ ಗಳಿಸಿ ವಿಕೆಟ್ ಕಾಯ್ದುಕೊಂಡಿದ್ದಾರೆ.

ಮಧ್ಯ ಪ್ರದೇಶ ಪರ ಗೌರವ್ ಯಾದವ್, ರವಿ ಯಾದವ್ ಹಾಗೂ ಕುಲ್ದೀಪ್ ಸೇನ್ ತಲಾ ಒಂದೊಂದು ವಿಕೆಟ್ ಪಡೆದಿದ್ದಾರೆ.

ಸಂಕ್ಷಿಪ್ತ ಸ್ಕೋರ್

ಕರ್ನಾಟಕ

ಪ್ರಥಮ ಇನಿಂಗ್ಸ್‌: 86 ಓವರ್‌ಗಳಿಗೆ 233/3 (ಆರ್.ಸಮರ್ಥ್ ಔಟಾಗದೆ 105, ಕೆ.ಸಿದ್ದಾರ್ಥ್ ಔಟಾಗದೆ 62; ಗೌರವ್ ಯಾದವ್ 29 ಕ್ಕೆೆ 1, ರವಿ ಯಾದವ್ 45 ಕ್ಕೆೆ 1, ಕುಲ್ದೀಪ್ ಸೇನ್ 30 ಕ್ಕೆೆ 1)