ಗುತ್ತಿಗೆ ಕಾರ್ಮಿಕರಿಗೆ ಪ್ರತ್ಯೇಕ ಕನಿಷ್ಠ ವೇತನ ಜೊತೆಗೆ ಮಕ್ಕಳ ಶಿಕ್ಷಣಕ್ಕೆ ಅನುವು ನೀಡಿ
ಕಂಪ್ಲಿ 12: ಗುತ್ತಿಗೆ ಪದ್ದತಿ ಕೈಬಿಟ್ಟು, ಕೆಪಿಸಿಎಲ್(ಬಿಟಿಪಿಎಸ್) ಗುತ್ತಿಗೆ ಕಾರ್ಮಿಕರಿಗೆ ಪ್ರತ್ಯೇಕ ಕನಿಷ್ಠ ವೇತನ ನೀಡುವ ಮೂಲಕ ನ್ಯಾಯ ಒದಗಿಸಿಕೊಡಬೇಕೆಂದು ಕಾರ್ಮಿಕ ಹಿತ ರಕ್ಷಣಾ ವೇದಿಕೆ ಗೌರವಾಧ್ಯಕ್ಷ ಹಾಗೂ ಪಪಂ ಸದಸ್ಯ ವೆಂಕಟರಾಮಣಬಾಬು ಒತ್ತಾಯಿಸಿದರು. ಕುಡತಿನಿ ಪಟ್ಟಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇಲ್ಲಿನ ಕಾರ್ಖಾನೆಯಲ್ಲಿ 2242 ಜನ ಕಾರ್ಮಿಕರು ಕಡಿಮೆ ವೇತನದಲ್ಲಿ ಕೆಲಸ ಮಾಡುತ್ತಿದ್ದಾರೆ. ಹಲವು ವರ್ಷಗಳಿಂದ ಕನಿಷ್ಠ ವೇತನ ನೀಡದೇ, ಕಡಿಮೆ ವೇತನದಲ್ಲಿ ಕಾರ್ಮಿಕರ ಮೋಸ ಮಾಡುತ್ತಿದ್ದಾರೆ. ಕಾರ್ಖಾನೆ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಶಾಮೀಲು ಆಗಿ, ಕಾರ್ಮಿಕರ ಮೇಲೆ ಶೋಷಣೆ ಮಾಡುತ್ತಿದ್ದಾರೆ. ಇಲ್ಲಿನ ಕಾರ್ಮಿಕರಿಗೆ ಅನ್ಯಾಯವಾಗುತ್ತಿರುವುದನ್ನು ಪರಿಗಣಿಸಿ, 2024ರ ಸೆ.20ರಂದು ಕಾರ್ಮಿಕರ ಹಿತ ರಕ್ಷಣಾ ವೇದಿಕೆ ಅಧ್ಯಕ್ಷ ವಿ.ರಾಜಶೇಖರ ನೇತೃತ್ವದಲ್ಲಿ ಕಾರ್ಮಿಕರೊಂದಿಗೆ ಕಾರ್ಖಾನೆ ಮುಂದೆ ಪ್ರತಿಭಟನೆ ನಡೆಸಲಾಗಿತ್ತು.
ಆದರೆ, ಅಧಿಕಾರಿಗಳು ನ್ಯಾಯ ಕೊಡಿಸುವ ಭರವಸೆ ನೀಡಿದ ಹಿನ್ನಲೆ ಮನವಿ ಪತ್ರ ಸಲ್ಲಿಸಿ, ಹಿಂಪಡೆಯಲಾಗಿತ್ತು. ಆದರೆ, ಇದುವರೆಗೂ ಕಾರ್ಮಿಕರಿಗೆ ನ್ಯಾಯ ಸಿಕ್ಕಿಲ್ಲ. ಈಗಾಗಲೇ ಕಾರ್ಮಿಕ ಸಚಿವ ಸಂತೋಷ ಲಾಡ್ ಗಮನ ತಂದ ಹಿನ್ನಲೆ ಸಂಬಂಧಿಸಿದ ಕಾರ್ಖಾನೆಯವರಿಗೆ ಕಾರ್ಮಿಕರಿಗೆ ಕನಿಷ್ಠ ವೇತನ ಹೆಚ್ಚಿಸಿದಲ್ಲಿ ಆಗುವ ಆರ್ಥಿಕ ಹೊರೆಯ ಬಗ್ಗೆ ವರದಿ ನೀಡುವಂತೆ ಸರ್ಕಾರ ಕೇಳಿದೆ. ಆದ್ದರಿಂದ ಪ್ರತ್ಯೇಕ ಕನಿಷ್ಠ ವೇತನ ನೀಡಬೇಕು. ಗುತ್ತಿಗೆ ಪದ್ದತಿ ಕೈಬಿಟ್ಟು ನ್ಯಾಯ ಕೊಡಿಸಬೇಕು. ನ್ಯಾಯಸಿಗುವರೆಗೂ ಹೋರಾಟ ಕೈಬಿಡುವುದಿಲ್ಲ ಎಂದು ಎಚ್ಚರಿಸಿದರು.ನಂತರ ಕಾರ್ಮಿಕ ಜೆ.ಬಸವರಾಜ ಮಾತನಾಡಿ, ಹಲವು ವರ್ಷಗಳಿಂದ ಕೆಲಸ ಮಾಡಿಕೊಂಡು ಬರಲಾಗಿದೆ. ಆದರೆ, ವೇತನದಲ್ಲಿ ತಾರತಮ್ಯ ಮಾಡಲಾಗುತ್ತಿದೆ. ನುರಿತ, ಅರೆನುರಿತ, ಅನ್ಸ್ಕಿಲ್ ಕಾರ್ಮಿಕರಿಗೆ ನ್ಯಾಯ ಸಮ್ಮತ ವೇತನ ನೀಡುತ್ತಿಲ್ಲ. ಇದೇ ವರ್ಷದ ಜ.19ರಂದು ಬೆಳಗಾವಿ ಅಧಿವೇಶನ ವೇಳೆ ಸಂತೋಷ ಲಾಡ್ ಇವರಿಗೆ ಮನವಿ ಸಲ್ಲಿಸಲಾಗಿತ್ತು. ಇದೇ ಮಾ.4ರಂದು ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿ, ಪ್ರತ್ಯೇಕ ಕನಿಷ್ಠ ವೇತನ, ವಿಮೆ, ಮಕ್ಕಳ ಶಿಕ್ಷಣಕ್ಕೆ ಅನುವು ಮಾಡಿಕೊಡಬೇಕು. ಹೀಗೆ ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಕೋರಿದ ಹಿನ್ನಲೆ ಈಗ ಆರ್ಥಿಕ ಹೊರೆಯ ಸಂಬಂಧ ವರದಿಯನ್ನು ಸರ್ಕಾರ ಕೇಳಿದೆ. ಆದ್ದರಿಂದ ಕೂಡಲೇ ಕಾರ್ಖಾನೆಯವರು ಪ್ರತ್ಯೇಕ ಕನಿಷ್ಠ ವೇತನ ಜತೆಗೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದರು. ಈ ಸಂದರ್ಭದಲ್ಲಿ ಪಪಂ ಉಪಾಧ್ಯಕ್ಷ ಕನಕೇರಿ ಪಂಪಾಪತಿ, ಕಾರ್ಮಿಕರಾದ ಅಂಬರೀಶ, ಸಾದಕ್ ಅಲಿ, ಹನುಮಯ್ಯ, ಸುರೇಶ, ರಾಘವೇಂದ್ರ, ವೆಂಕಟರೆಡ್ಡಿ, ಪ್ರಶಾಂತ, ಹುಸೇನಪ್ಪ, ಹೊನ್ನೂರಸ್ವಾಮಿ, ಲೋಕೇಶ ಇದ್ದರು. ಮಾ002ಕುಡತಿನಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವೆಂಕಟರಮಣಬಾಬು ಮಾತನಾಡಿದರು.