ಲೋಕದರ್ಶನ ವರದಿ
ಕಾರವಾರ 04: ಹಂಗಾಮಿ ಪೋಸ್ಟ್ ಮಾಸ್ಟರ್ ವಂಚನೆಯಿಂದ ಹಣ ಕಳೆದು ಕೊಂಡ ಗ್ರಾಹಕರು ಕಾರವಾರದ ಪ್ರಧಾನ ಅಂಚೆ ಕಚೇರಿ ಎದುರು ಧರಣಿ ನಡೆಸುತ್ತಿದ್ದು, ಧರಣಿ ಎರಡನೇ ದಿನಕ್ಕೆ ಕಾಲಿಟ್ಟಿದೆ. ಎರಡನೇ ದಿನದ ಧರಣಿಯಲ್ಲಿ ಮಾಜಿ ಶಾಸಕ ಸತೀಶ್ ಸೈಲ್ ಭಾಗವಹಿಸಿ, ಹಣ ಕಳೆದುಕೊಂಡ ಗ್ರಾಹಕರಿಗೆ ನ್ಯಾಯ ಒದಗಿಸಿಕೊಡುವುದಾಗಿ ಭರವಸೆ ನೀಡಿದರು.
ಅಂಚೆ ಇಲಾಖೆ ಗ್ರಾಹಕರ ಹಣ ಮರಳಿಸಬೇಕು. ವಂಚನೆ ಮಾಡಿದ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಜರುಗಿಸಿ ಎಂದು ಅಂಚೆ ಕಚೇರಿಯ ಅಡಿಶನಲ್ ಎಸ್ಪಿ ಅವರಿಗೆ ಆಗ್ರಹಿಸಿದರು. ಜನರು ನಂಬಿಕೆ ಇಡುವುದು ಅಂಚೆ ಕಚೇರಿಯ ಮೇಲೆ. 70 ಲಕ್ಷ ರೂ. ವಂಚನೆಯಾಗುವವರೆಗೆ ಜಿಲ್ಲಾ ಪ್ರಧಾನ ಅಂಚೆ ಕಚೇರಿಯ ಅಧಿಕಾರಿ ಏನು ಮಾಡುತ್ತಿದ್ದರು. ಈಗ ಇದೇ ಕಾರಣದಲ್ಲಿ ವಗರ್ಾವಣೆಯಾದ ಅಧಿಕಾರಿಯನ್ನು ಹೊಣೆಗಾರರನ್ನಾಗಿ ಮಾಡಿ ಪ್ರಕರಣ ದಾಖಲಿಸಿ, ತನಿಖೆ ನಡೆಸಿದ ಎಂದು ಅಂಚೆ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಒತ್ತಾಯಿಸಿದರು. ಹಣ ಕಳೆದುಕೊಂಡ ಗ್ರಾಹಕರಿಂದ ದೂರು ಸ್ವೀಕರಿಸಿ ದಾಖಲಿಸದೇ ಹೋದದ್ದನ್ನು ಕೇಳಿ ಅಚ್ಚರಿ ವ್ಯಕ್ತಪಡಿಸಿದ ಶಾಸಕ ಸೈಲ್ , ಪೊಲೀಸರು ಮೊದಲು ಈ ಪ್ರಕರಣದಲ್ಲಿ ಕೇಸು ದಾಖಲಿಸಬೇಕಿತ್ತು. ಅಲ್ಲದೇ ಹಣ ಕಳೆದುಕೊಂಡ ಗ್ರಾಹಕರ ಪಾಸ್ ಬುಕ್ಗಳನ್ನು ಅಂಚೆ ಇಲಾಖೆ ಏನು ಮಾಡಿದೆ ಎಂದು ಬಹಿರಂಗ ಪಡಿಸಬೇಕು. ಇಲಾಖೆ ಸಹ ನ್ಯಾಯ ಕೊಡಿಸದೇ, ಅತ್ತ ಕಾನೂನು ಹೋರಾಟವೂ ನಡೆಯದಂತೆ ವ್ಯವಸ್ಥಿತ ಸಂಚು ಮಾಡಲಾಗಿದೆ. ಇದರ ವಿರುದ್ಧ ಎಲ್ಲಾ ಬಗೆಯ ಹೋರಾಟ ಮಾಡುವುದಾಗಿ ಮಾಜಿ ಶಾಸಕ ಸತೀಶ್ ಸೈಲ್ ಪ್ರಕಟಿಸಿದರು. ಬೈತಖೋಲ ಭಾಗದ ನಗರಸಭೆಯ ವಾರ್ಡ ಸದಸ್ಯೆ, ಮಾಜಿ ಶಾಸಕ ಸೈಲ್ ಬೆಂಬಲಿಗರು ಧರಣಿಯಲ್ಲಿ ಭಾಗವಹಿಸಿದ್ದರು.
ಬೈತಖೋಲ ಅಂಚೆ ಕಚೇರಿಯಿಂದ ಜೂನ್ 2017ರಲ್ಲಿ ಬೆಳಕಿಗೆ ಬಂದ ಗ್ರಾಹಕರ ಠೇವಣಿ ಹಣ ಗುಳುಂ ಪ್ರಕರಣದಲ್ಲಿ ನ್ಯಾಯ ಕೇಳಿ ಕಾರವಾರದ ಪ್ರಧಾನ ಅಂಚೆ ಕಚೇರಿಯ ಎದುರು ಸೋಮವಾರದಿಂದ ಹಗಲು ವೇಳೆ ಧರಣಿ ನಡೆಯುತ್ತಿದೆ. ಬೈತಖೋಲ ಅಂಚೆ ಕಚೇರಿ ವ್ಯಾಪ್ತಿಯ ಸಂತ್ರಸ್ತ ಗ್ರಾಹಕರ ಹಿತ ರಕ್ಷಣಾ ಸಮಿತಿ ಸದಸ್ಯರು,ಸಾಮಾಜಿಕ ಕಾರ್ಯಕರ್ತ ವಿಲ್ಸನ್ ನೇತೃತ್ವದಲ್ಲಿ ಧರಣಿ ನಡೆಸುತ್ತಿದ್ದಾರೆ.
ಬೈತಖೋಲದಲ್ಲಿ ಗ್ರಾಹಕರಿಂದ ಹಣ ಪಡೆದು ಠೇವಣಿಯ ನೆಪದಲ್ಲಿ 60 ರಿಂದ 70 ಲಕ್ಷಕ್ಕೂ ಹೆಚ್ಚಿನ ಹಣವನ್ನು ನುಂಗಿ ಹಾಕಿದ ಪ್ರಕರಣದಲ್ಲಿ ಪ್ರಧಾನ ಅಂಚೆ ಕಚೇರಿಯಿಂದಾಗಲಿ, ಜಿಲ್ಲಾಡಳಿತದಿಂದಾಗಲಿ, ಪೊಲೀಸರಿಂದಾಗಲಿ ನ್ಯಾಯ ಸಿಗಲಿಲ್ಲ ಎಂದು ಬೈತಖೋಲನ ಬಡ ಗ್ರಾಹಕರು ಮಂಗಳವಾರ ಮಾಜಿ ಶಾಸಕರ ಎದುರು ಅಳಲು ತೋಡಿಕೊಂಡರು.
ಅಂಚೆ ಇಲಾಖೆಯ ಹಿರಿಯ ಅಧಿಕಾರಿಗಳು ಸಹ ಹಂಗಾಮಿ ನೌಕರನ ವಂಚನೆಯನ್ನು ಬಯಲಿಗೆ ಎಳೆಯಲು ಬಡ ಮಹಿಳಾ ಗ್ರಾಹಕರ ಪರ ನಿಲ್ಲಲಿಲ್ಲ ಎಂದು ಧರಣಿ ನಿರತ ಮಹಿಳೆಯರು , ಕಾಮರ್ಿಕರು ಕಣ್ಣೀರು ಹಾಕಿದರು. ಬೆವರು ಸುರಿಸಿ ದುಡಿದ ಹಣವನ್ನು ಠೇವಣಿಯಾಗಿ ಇಟ್ಟಿದ್ದೆವು. ಅಂಚೆ ಕಚೇರಿಯ ಖಾತೆಯಲ್ಲಿ ಸಹ ದಿನವೂ ದುಡಿದ ಹಣದ ಸ್ವಲ್ಪಭಾಗವನ್ನು ಉಳಿತಾಯ ಮಾಡುತ್ತಿದ್ದೆವು. ಹಂಗಾಮಿ ನೌಕರನೊಬ್ಬ 18 ವರ್ಷಗಳಿಂದ ಗ್ರಾಹಕರನ್ನು ವಂಚಿಸಿದ ಬಗೆ ಬೈತಖೋಲ ಸಮೀಪವೇ ಇರುವ ಅಂಚೆ ಇಲಾಖೆ ಪ್ರಧಾನ ಕಚೇರಿಯ ಹಿರಿಯ ಅಧಿಕಾರಿಗೆ ಹೇಗೆ ಅರ್ಥವಾಗಲಿಲ್ಲ. ಇದರಲ್ಲಿ ವ್ಯವಸ್ಥಿತವಾಗಿ ಹಣ ನುಂಗಲು ಸಂಚು ನಡೆದಿದೆ. ಬಡವರನ್ನು ಬಲಿ ಹಾಕಲಾಗಿದೆ ಎಂದು ವಿಲ್ಸನ್ ಆರೋಪಿಸಿದರು.
ಗ್ರಾಹಕರು ದೂರು ನೀಡಿದಾಗ ಅಂಚೆ ಇಲಾಖೆಯ ಹಿರಿಯ ಅಧಿಕಾರಿಗಳು ಪೊಲೀಸ್ ಠಾಣೆಗೆ ದೂರು ನೀಡಿ ತಮ್ಮ ಕೆಲಸ ಮುಗಿಯಿತು ಎಂದು ಕೈ ತೊಳೆದುಕೊಂಡರು. ಪೊಲೀಸರು ಆರೋಪ ಹೊತ್ತ ವ್ಯಕ್ತಿಯನ್ನು ಬಂಧಿಸಿದರು. ಆದರೆ ಲಕ್ಷ್ಮಣ .ಜಿ.ನಾಯ್ಕ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡಿದ್ದಾನೆ. ಪಾಸ್ ಪುಸ್ತಕದಲ್ಲಿ ಮಾತ್ರ ಠೇವಣಿ ನಮೂದಿಸಿ, ಪ್ರಧಾನ ಅಂಚೆ ಕಚೇರಿಗೆ ಮಾಹಿತಿ ನೀಡಿದೆ, ಠೇವಣಿ ಪುಸ್ತಕದಲ್ಲಿ ನಗದು ನಮೂದಿಸದೇ ವಂಚಿಸಲಾಗಿದೆ. ಪ್ರಕರಣ ಬೆಳಕಿಗೆ ಬಂದ ನಂತರ ಬೈತಖೋಲದಲ್ಲಿ ಅನ್ಯಾಯಕ್ಕೆ ಠೇವಣಿ ಇಟ್ಟು ಹಣ ಕಳೆದು ಕೊಂಡವರು ದೂರು ಸಹ ನೀಡದಂತೆ ಕೆಲವರು ಹಾದಿ ತಪ್ಪಿಸಿದರು. ಹತ್ತಿರ ಹಣ ಕಟ್ಟಿದ್ದಕ್ಕೆ ಆಧಾರವೇ ಇಲ್ಲ ಎಂದು ಮುಗ್ದರನ್ನು ಹಾದಿ ತಪ್ಪಿಸಲಾಗಿದೆ. ಹೋರಾಟ ಸಹ ಮಾಡದಂತೆ ಮುಗ್ಧರನ್ನು ಹಳ್ಳಕ್ಕೆ ಕೆಡವಲಾಯಿತು ಎಂದು ಬೈತಖೋಲ ಅಂಚೆ ಕಚೇರಿ ವ್ಯಾಪ್ತಿಯ ಸಂತ್ರಸ್ತ ಗ್ರಾಹಕರ ಹಿತ ರಕ್ಷಣಾ ಸಮಿತಿಯವರು ಆರೋಪಿಸಿದರು. ಸಮಸ್ಯೆಗೆ ಪರಿಹಾರ ಸಿಗುವತನಕ ಹೋರಾಟ ಮುಂದುವರಿಯಲಿದೆ ಎಂದು ವಿಲ್ಸನ್ ಹೇಳಿದರು.