ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಫೆ.13ರಂದು ಕಂಪ್ಲಿಯಲ್ಲಿ ಪ್ರತಿಭಟನೆ
ಕಂಪ್ಲಿ 25: ಸಕ್ಕರೆ ಕಾರ್ಖಾನೆ ಪುನರ್ ಆರಂಭಿಸಬೇಕು. ಮಿನಿ ವಿಧಾನಸೌಧ ಉದ್ಘಾಟಿಸಬೇಕು. ಹೀಗೆ ಸ್ಥಳೀಯ ಸಮಸ್ಯೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ, ಪ್ರಗತಿಪರ ಸಮಾನ ಮನಸ್ಕರ ಸಂಘದಿಂದ ವಿವಿಧ ಸಂಘಗಳ ಬೆಂಬಲದೊಂದಿಗೆ ಫೆ.13ರಂದು ಕಂಪ್ಲಿ ನಗರದ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಂಚಾಲಕ ವಿ.ಎಸ್.ಶಿವಶಂಕರ್ ತಿಳಿಸಿದರು.
ಅವರು ಶನಿವಾರ ಪಟ್ಟಣದ ಅತಿಥಿ ಗೃಹದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಕಂಪ್ಲಿ ಸಕ್ಕರೆ ಕಾರ್ಖಾನೆ ಬಂದ್ ಆಗಿ, ಹಲವು ವರ್ಷಗಳು ಗತಿಸಿದ್ದು, ಇದರಿಂದ ರೈತರು ಸಂಕಷ್ಟ ಅನುಭವಿಸುವಂತಾಗಿದೆ. ಕೆಲವರು ಪರಭಾರೆ ಮಾಡಲು ಹೊರಟಿದ್ದಾರೆ. ಆದ್ದರಿಂದ ಕೂಡಲೇ ಸರ್ಕಾರ ಗಮನ ಹರಿಸಿ, ಸಕ್ಕರೆ ಕಾರ್ಖಾನೆ ಪುನರ್ ಆರಂಭಿಸಬೇಕು. ಬಹುದಿನದ ಬೇಡಿಕೆ ಕಂಪ್ಲಿ ಸೇತುವೆಯಾಗಿದೆ. ನದಿಗೆ ನೀರು ಬಂದರೆ, ಸೇತುವೆ ಮುಳುಗಡೆಯಾಗಿ ಕಂಪ್ಲಿ-ಗಂಗಾವತಿ ಸಂಪರ್ಕ ಕಡಿತವಾಗಿ ಜನತೆಗೆ ತೊಂದರೆಯಾಗುತ್ತದೆ. ಇದು ಸರ್ಕಾರದ ಮಟ್ಟದಲ್ಲಿದ್ದು ಆದಷ್ಟು ಬೇಗ ಕೋಟ್ಯಾಂತರ ಅನುದಾನ ನೀಡಿ, ಹೊಸ ಸೇತುವೆ ನಿರ್ಮಿಸಬೇಕಾಗಿದೆ. ನದಿ ನೀರು ಬತ್ತಿದರೆ, ಕಂಪ್ಲಿ ಜನತೆಗೆ ನೀರಿನ ಸಮಸ್ಯೆ ತಂದೊಡ್ಡಲಿದೆ.
ಆದ್ದರಿಂದ ಮುಂಜಾಗ್ರತಯಿಂದ ಕೆರೆ ಅಭಿವೃದ್ಧಿಯೊಂದಿಗೆ ನೀರು ಸಂಗ್ರಹಿಸಿ, ಬೇಸಿಗೆ ಸಮಯದಲ್ಲಿ ಸಮರ್ಕವಾಗಿ ನೀರು ಕಲ್ಪಿಸಬೇಕಾಗಿದೆ. ಈಗಾಗಲೇ ಗಂಗಾವತಿ-ಕಂಪ್ಲಿ-ದರೋಜಿ ಮಾರ್ಗದ ರೈಲ್ವೆ ಕಾಮಗಾರಿ ಸಂಬಂಧ ಸರ್ವೆ ಕಾರ್ಯ ನಡೆದಿದ್ದು, ಕೇಂದ್ರ ಸರ್ಕಾರ ರೈಲ್ವೆ ಕಾಮಗಾರಿಗೆ ಚಾಲನೆ ನೀಡಬೇಕಾಗಿದೆ. ಹೀಗೆ ಸ್ಥಳೀಯವಾಗಿ ನಾನಾ ಸಮಸ್ಯೆಗಳಿದ್ದು, ಕೂಡಲೇ ಸರ್ಕಾರ ಈಡೇರಿಸಬೇಕಾಗಿದೆ. ಆದ್ದರಿಂದ ಫೆ.13ರಂದು ಪ್ರತಿಭಟನೆ ಹಮ್ಮಿಕೊಂಡಿದ್ದು, ಜನರು ಭಾಗವಹಿಸಿ, ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು. ನಂತರ ಮುಖಂಡ ವಸಂತ್‌ರಾಜ್ ಕಹಳೆ ಮಾತನಾಡಿ, ಕಂಪ್ಲಿ ತಾಲೂಕು ರಚನೆಯಾಗಿ, ಕೆಲ ವರ್ಷಗಳು ಗತಿಸಿವೆ. ಆದರೆ, ಇಲ್ಲಿ ಕೆಲವೊಂದು ಇಲಾಖೆ ಬಿಟ್ಟರೆ, ಬಹುತೇಕ ಇಲಾಖೆಗಳು ದೂರದ ಬಳ್ಳಾರಿ, ಸಿರುಗುಪ್ಪ, ಹೊಸಪೇಟೆಯಲ್ಲಿವೆ. ಆದ್ದರಿಂದ ಕೂಡಲೇ ಮಿನಿ ವಿಧಾನಸೌಧ ಲೋಕಾರೆ್ಣಗೊಳಿಸಿ, ಎಲ್ಲಾ ಇಲಾಖೆಗಳು ಕಂಪ್ಲಿಗೆ ಬರಬೇಕು ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಮರಿಸ್ವಾಮಿ ಸಣಾಪುರ, ಬಂಡಿ ಬಸವರಾಜ, ಹೊನ್ನೂರಸಾಬ್, ನಾಗರಾಜ, ಹೆಚ್.ಬಸಪ್ಪ, ಎಸ್.ಬಸವರಾಜ, ಉಮೇಶ, ಸಂಜೀವ, ಕುರ್ಶೀದ್‌ಬೇಗಂ ಇದ್ದರು. ಜ.001: ಕಂಪ್ಲಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ವಿ.ಎಸ್.ಶಿವಶಂಕರ್ ಮಾತನಾಡಿದರು.