ಸಕ್ಕರೆ ಕಾರ್ಖಾನೆ ಪುನಃ ಸ್ಥಾಪನೆಗೆ ಆಗ್ರಹಿಸಿ ಪ್ರತಿಭಟನೆ

Protest demanding re-establishment of sugar factory

ಸಕ್ಕರೆ ಕಾರ್ಖಾನೆ ಪುನಃ ಸ್ಥಾಪನೆಗೆ ಆಗ್ರಹಿಸಿ ಪ್ರತಿಭಟನೆ 

ಕಂಪ್ಲಿ 23: ಕಂಪ್ಲಿ ಸಕ್ಕರೆ ಕಾರ್ಖಾನೆ ಪುನಃ ಸ್ಥಾಪನೆ ಮಾಡಬೇಕೆಂದು ಒತ್ತಾಯಿಸಿ, ಕರ್ನಾಟಕ ರಾಜ್ಯ ಕಿಸಾನ್ ಜಾಗೃತಿ ಸಂಘದಿಂದ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಸೋಮವಾರ ಪ್ರತಿಭಟಿಸಲಾಯಿತು. ಜಿಲ್ಲಾಧ್ಯಕ್ಷ ಬಿ.ಗಂಗಾಧರ ಮಾತನಾಡಿ, ಜಗತ್ ಪ್ರಸಿದ್ಧ ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಕಾರಣಭೂತವಾದ ಐತಿಹಾಸಿಕ ಹಿನ್ನಲೆಯ ಕಂಪ್ಲಿ ಪಟ್ಟಣದಲ್ಲಿ ಈ ಹಿಂದೆ ಸಹಕಾರಿ ಸಕ್ಕರೆ ಕಾರ್ಖಾನೆ ಇದ್ದು, ಸಾವಿರಾರು ಜನರಿಗೆ ಜೀವನಾಡಿಯಾಗಿತ್ತು. 

 ನಾನಾ ಷಡ್ಯಂತ್ರಗಳಿಂದಾಗಿ ಸಕ್ಕರೆ ಕಾರ್ಖಾನೆ ನಶಿಸಿ ಹೋಗಿದ್ದು, ದುರಂತದ ಇತಿಹಾಸವಾಗಿರುತ್ತವೆ. ಇದೀಗ ಕಂಪ್ಲಿ ತಾಲೂಕು ಕೇಂದ್ರವಾಗಿ ಹೊರಹೋಮ್ಮಿದೆ ದಿನೇ ದಿನೇ ಬೆಳೆಯುವ ಪಟ್ಟಣವಾಗಿ ರೂಪಗೊಂಡಿದೆ. ವಿದ್ಯಾವಂತ ಮತ್ತು ಕೌಶಲ್ಯದಾರಿತ ಯುವ ಜನತೆಯ ಸಂಖ್ಯೆ ಹೆಚ್ಚಿದೆ. ಸಕ್ಕರೆ ಕಾರ್ಖಾನೆ ಸ್ಥಾಪಿಸಲು ಪೂರಕವಾದ ಸೂಕ್ತ ವಾತಾವರಣ ಮಾರುಕಟ್ಟೆ ಇದೆ. ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಸಾಕಷ್ಟು ಭೂಮಿ ಇದೆ.  

ತುಂಗಭದ್ರ ನದಿ ಇದೆ ಕಬ್ಬು ಬೆಳೆಯುವ ಸಹಸ್ರಾವರು ಹೆಕ್ಟರಷ್ಟು ಕೃಷಿ ಭೂಮಿ ಇದೆ. ಹಾಗಾಗಿ ಸಕ್ಕರೆ ಕಾರ್ಖಾನೆಯೂ ಸಹಕಾರಿ ಅಥವಾ ಸರ್ಕಾರ ಅವರ ವಲಯದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆ ಆಗಬೇಕು ಎಂದರು. ನಂತರ ತಾಲೂಕಾಧ್ಯಕ್ಷ ಗುಬಾಜಿ ರಾಮಾಂಜಿನಿ ಮಾತನಾಡಿ, ಯಾವುದೇ ಕಾರಣಕ್ಕೂ ಖಾಸಗಿ ವಲಯದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆಯಾಗಲು ನಾವು ಒಪ್ಪುವುದಿಲ್ಲ. ಭೂಮಿಯು ರೈತರ ಸಂಪತ್ತು ಆದ ಕಾರಣವಾಗಿ ಸರ್ಕಾರ ವಲಯ ಅಥವಾ ಸಹಕಾರ ವಲಯದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.  

ಇಲ್ಲಿನ ಉದ್ಭವ ಗಣೇಶ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ, ಅಂಬೇಡ್ಕರ್ ವೃತ್ತದಲ್ಲಿ ತಹಶೀಲ್ದಾರ್ ಶಿವರಾಜ ಶಿವಪುರಗೆ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಭಾರತೀಯ ಕೃಷಿ ಕಾರ್ಮಿಕ ರೈತ ಸಂಘದ ಮಾಜಿ ರಾಜ್ಯ ಸಂಘಟನಾ ಕಾರ್ಯದರ್ಶಿ ಸೈಯದ್ ಆಬೀದ್ ಭಾಷಾ ಖಾದ್ರಿ, ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ವಿ.ಉಷಾ ದೇವೇಂದ್ರ, ಜಿಲ್ಲಾ ಯುವ ಘಟಕ ಅಧ್ಯಕ್ಷ ಕೆ.ಹರ್ಷಿತ್, ತಾಲೂಕು ಗೌರವಾಧ್ಯಕ್ಷರಾದ ಹನುಮಂತಪ್ಪ, ಲಕ್ಷ್ಮಿರೆಡ್ಡಿ, ಉಪಾಧ್ಯಕ್ಷರಾದ ವಾಬುಸಾಬ್, ಗಾದಿಲಿಂಗಪ್ಪ, ಕಾರ್ಯದರ್ಶಿ ಮಸ್ತಾನ್, ದೇವಲಾಪುರ ಗ್ರಾಮ ಘಟಕ ಅಧ್ಯಕ್ಷ ಗೌಡ್ರು ಅಮರನಾಥ ಸೇರಿದಂತೆ ರೈತರಿದ್ದರು. ಡಿ.001: ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಬಿ.ಗಂಗಾಧರ ಮಾತನಾಡಿದರು.