ಕಾರಾಗೃಹ ಸಿಬ್ಬಂದಿ ಕಲ್ಯಾಣ ದಿನಾಚರಣೆ ಸಿಬ್ಬಂದಿಗಳ ಹಬ್ಬ: ಟಿ.ಪಿ.ಶೇಷ
ಬೆಳಗಾವಿ 11: ಕಾರಾಗೃಹ ಸಿಬ್ಬಂದಿ ಕಲ್ಯಾಣ ದಿನಾಚರಣೆಯು ಸಿಬ್ಬಂದಿಗಳ ಹಬ್ಬವಾಗಿದ್ದು ಅದ್ಧೂರಿಯಾಗಿ ಸಂತೋಷ ಸಂಭ್ರಮದಿಂದ ಆಚರಿಸುತ್ತಿರುವುದು ಸಂತಸದ ವಿಷಯ. ಅಧಿಕಾರಿಗಳು, ಸಿಬ್ಬಂದಿಗಳು ಎಂಬ ಬೇಧ-ಭಾವವಿಲ್ಲದೆ ಎಲ್ಲರೂ ಒಗ್ಗಟ್ಟಿನಿಂದ ಆಚರಿಸುವ ಕಾರ್ಯಕ್ರಮವಾಗಿದೆ. ಇದರಿಂದ ಸಿಬ್ಬಂದಿಗಳಲ್ಲಿ ಆತ್ಮ ವಿಶ್ವಾಸ ಹಾಗೂ ನವಚೈತನ್ಯ ಹೆಚ್ಚುತ್ತದೆ ಎಂದು ಬೆಳಗಾವಿ ಉತ್ತರ ವಲಯ ಕಾರಾಗೃಹಗಳ ಉಪಮಹಾ ನೀರೀಕ್ಷಕ ಟಿ.ಪಿ.ಶೇಷ ಅವರು ಹೇಳಿದರು. ಕಾರಾಗೃಹ ಮತ್ತು ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಅಧಿಕಾರಿ, ಸಿಬ್ಬಂದಿಯವರಿಂದ ದಿ. 8ರಂದು ಹಿಂಡಲಗಾ ಬಳಿಯ ನಕ್ಷತ್ರ ಲಾನ್ಸ್‌ದಲ್ಲಿ ಆಯೋಜಿಸಲಾಗಿದ್ದ ಕಾರಾಗೃಹ ಸಿಬ್ಬಂದಿ ಕಲ್ಯಾಣ ದಿನಾಚರಣೆ-2025 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇಂದಿನ ಆಧುನಿಕ ಯುಗದಲ್ಲಿ ಪ್ರತಿಯೊಬ್ಬರು ಒತ್ತಡದಿಂದ ಕಾರ್ಯನಿರ್ವಹಿಸುತ್ತಿದ್ದು ಇಂತಹ ಕಾರ್ಯಕ್ರಮಗಳಿಂದ ಒತ್ತಡ ನಿವಾರಣೆಯಾಗುತ್ತದೆ. ಹಾಗೂ ಪ್ರತಿಯೊಬ್ಬ ನೌಕರನು ತನ್ನ ಇಲಾಖೆಯ ಬಗ್ಗೆ ಹಾಗೂ ತಾನು ನಿರ್ವಹಿಸುತ್ತಿರುವ ಕರ್ತವ್ಯದ ಬಗ್ಗೆ ಎಂದಿಗೂ ಕೀಳರಿಮೆ ಮನೋಭಾವ ಹೊಂದಬಾರದು ತಮ್ಮ ಕರ್ತವ್ಯವನ್ನು ಪ್ರಾಮಾಣಿಕತೆಯಿಂದ ನಿರ್ವಹಿಸಿ ಗೌರವಿಸಬೇಕು ಎಂದು ಹೇಳಿದರು. ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ನೀಡಿ ಜೀವನವನ್ನು ಪ್ರೀತಿಸಬೇಕು. ಎಲ್ಲರೂ ಧನಾತ್ಮಕ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆರೋಗ್ಯವೇ ಭಾಗ್ಯ ಎಂಬ ನಾಣ್ಣುಡಿಯಂತೆ ಕರ್ತವ್ಯದ ಜೊತೆಗೆ ತಮ್ಮ ಹಾಗೂ ಕುಟುಂಬದವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಇಂದು ಕಾರಾಗೃಹ ಇಲಾಖೆಯು ಸಮಾಜಮುಖಿ ಕಾರ್ಯಗಳನ್ನು ನಿರ್ವಹಿಸುತ್ತಿದ್ದು ಎಲ್ಲ ಅಧಿಕಾರಿ, ಸಿಬ್ಬಂದಿಗಳು ಇಲಾಖೆಯ ಸರ್ವತೋಮುಖ ಪ್ರಗತಿಗಾಗಿ ನಿಷ್ಠೆಯಿಂದ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬೆಳಗಾವಿ ಮಹಾನಗರ ಪಾಲಿಕೆ ಮಾಜಿ ಮಹಾಪೌರ ವಿಜಯ ಮೋರೆ ಮಾತನಾಡಿ, ಜೀವನದಲ್ಲಿ ಘಟಿಸಿದ ಕಹಿ ಘಟನೆಗಳಿಗೆ ಒಳಗಾಗಿ ಕಾರಾಗೃಹ ಶಿಕ್ಷೆ ಅನುಭವಿಸುತ್ತಿರುವ ನಿವಾಸಿಗಳ ಮನ ಪರಿವರ್ತಿಸಿ ಬಿಡುಗಡೆ ನಂತರ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಸ್ವಾವಲಂಬಿ ಜೀವನ ನಡೆಸುವಂತಾಗಲು ಸಿಬ್ಬಂದಿಯವರ ಕಾರ್ಯ ಸ್ತುತ್ಯಾರ್ಹ. ಮುಂದಿನ ದಿನಗಳಲ್ಲಿ ಇಲಾಖೆಯು ಇನ್ನು ಹೆಚ್ಚಿನ ಸಮಾಜಮುಖಿ ಕಾರ್ಯಗಳನ್ನು ನೇರವೇರಿಸಲಿ ಎಂದು ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ಕಾರಾಗೃಹದ ಪ್ರಭಾರಿ ಮುಖ್ಯ ಅಧೀಕ್ಷಕ ವಿ.ಕೃಷ್ಣಮೂರ್ತಿ ಮಾತನಾಡಿ ಈ ವರ್ಷ ಸಂಸ್ಥೆಯ ಹಾಗೂ ಕೆ.ಎಸ್.ಐ.ಎಸ್.ಎಫ್‌ನ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರ ಸಹಕಾರದಿಂದ ಕಾರಾಗೃಹ ಆವರಣದ ಹೊರಗಡೆ ಅದ್ಧೂರಿಯಾಗಿ ಕಾರ್ಯಕ್ರಮ ಆಯೋಜಿಸಲಾಗಿರುತ್ತದೆ. ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ತಿಳಿಸಿದರು. ವಿವಿಧ ಸ್ವರ್ಧೆಗಳಲ್ಲಿ ವಿಜೇತರಾದ ಸಿಬ್ಬಂದಿಗಳಿಗೆ ಹಾಗೂ ಕುಟುಂಬ ವರ್ಗದವರಿಗೆ ಬಹುಮಾನಗಳನ್ನು ಹಾಗೂ ಪ್ರಶಂಸನಾ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಕಾರಾಗೃಹದ ಮಹಿಳಾ ಸಿಬ್ಬಂದಿಗಳು ವೀರ ಯೋಧರ ಕುರಿತಾದ ರೂಪಕ ಎಲ್ಲರ ಕಣ್ಮನ ಸೆಳೆಯಿತು. ಆಡಳಿತಾಧಿಕಾರಿ ಬಿ.ಎಸ್. ಪೂಜಾರಿ, ಸಹಾಯಕ ಅಧೀಕ್ಷಕ ಮಲ್ಲಿಕಾರ್ಜುನ ಕೊಣ್ಣೂರ, ಕೆ.ಎಸ್.ಐ.ಎಸ್.ಎಫ್ ಪೊಲೀಸ್ ಇನ್ಸ್‌ಪೇಕ್ಟರ್ ಸ್ವಪ್ನಾ ಉಳ್ಳಾಗಡ್ಡಿ ಕಾರಾಗೃಹದ ವೈದ್ಯಾಧಿಕಾರಿ ಡಾ.ಸರಸ್ವತಿ ತೆನಗಿ, ಡಾ.ಎಮ್.ಎಸ್ ಶಾಲದಾರ ಹಾಗೂ ಜೈಲರಗಳಾದ ರಾಜೇಶ, ಬಸವರಾಜ, ಫಕೀರ್ಪ ಹಾಗೂ ರಮೇಶ ಉಪಸ್ಥಿತರಿದ್ದರು.